E-Khata: ಅಂತಿಮ ಇ - ಖಾತಾಗೆ ಇನ್ಮುಂದೆ ಈ ಪ್ರಮಾಣಪತ್ರ ಬೇಡ!
E-Khata: ಬೆಂಗಳೂರಿನಲ್ಲಿ ಇ - ಖಾತಾಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಆದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದೆ. ಬೆಂಗಳೂರಿನಲ್ಲಿ 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಆದರೆ ಕೆಲವೇ ಆಸ್ತಿಗಳಿಗೆ ಮಾತ್ರ ಇಲ್ಲಿಯವರೆಗೆ ಅಂತಿಮ ಇ - ಖಾತಾ ನೀಡಲಾಗಿದೆ. ಇ -ಖಾತಾ ನೀಡುವಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾಗುತ್ತಿವೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಅಲ್ಲದೆ ಇ- ಖಾತಾವನ್ನು ಗುಡುವಿನ ಒಳಗಾಗಿ ನೀಡುವಂತೆ ರಾಜ್ಯ ಸರ್ಕಾರವು ಬಿಬಿಎಂಪಿ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ನಿರ್ದೇಶನ ನೀಡಿದೆ. ಹೀಗಾಗಿ, ಇ ಖಾತಾಗೆ ಸಂಬಂಧಿಸಿದಂತೆ ಸರಳ ಸೂತ್ರಗಳನ್ನು ಬಿಬಿಎಂಪಿ ಅಳವಡಿಸಿಕೊಳ್ಳುತ್ತಿದೆ. ಇದೀಗ ಅಂತಿಮ ಇ - ಖಾತಾಗೆ ಸಂಬಂಧಿಸಿದಂತೆ ಋಣಭಾರ ರಾಹಿತ್ಯ (ಸಾಲವಿಲ್ಲದ) ಪ್ರಮಾಣಪತ್ರದ ಬಗ್ಗೆ ಮತ್ತೊಂದು ಹಾಗೂ ಮಹತ್ವದ ಅಪ್ಡೇಟ್ ಕೊಟ್ಟಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಎಲ್ಲಾ ಆಸ್ತಿಗಳಿಗೂ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಇ - ಖಾತಾ ಗೊಂದಲಗಳನ್ನು ಪರಿಹರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಬಿಬಿಎಂಪಿಯು ಹೇಳಿದೆ. ಇದೀಗ ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ (ಸಾಲವಿಲ್ಲದ) ಪ್ರಮಾಣಪತ್ರದ(EC) ಅಗತ್ಯವಿಲ್ಲ ಎನ್ನುವ ಆದೇಶವನ್ನು ಬಿಬಿಎಂಪಿ ಮಾಡಿದೆ ಅದರವ ವಿವರ ಮುಂದಿದೆ.
ಬೆಂಗಳೂರಿನಲ್ಲಿ ಎಲ್ಲಾ ಆಸ್ತಿದಾರರು ಸರಳವಾಗಿ ಹಾಗೂ ತಾವೇ ಅಂತಿಮ ಇ - ಖಾತಾವನ್ನು ಆನ್‌ಲೈನ್‌ನ ಮೂಲಕ ಪಡೆದುಕೊಳ್ಳುವುದಕ್ಕೆ ಬೇಕಾದ ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿರುವುದಾಗಿ ಬಿಬಿಎಂಪಿ ಹೇಳಿದೆ. ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳ ಮೇಲೆ ಒತ್ತಡ ಕಡಿಮೆ ಮಾಡುವುದು ಹಾಗೂ ನಿಯಂತ್ರಣವನ್ನು ತಪ್ಪಿಸಲು ಕ್ರಮ ವಹಿಸುವುದಾಗಿ ಈ ಹಿಂದೆಯೇ ಬಿಬಿಎಂಪಿ ಹೇಳಿತ್ತು. ಅದರಂತೆ ಹೊಸ ಹಾಗೂ ಸರಳ ವಿಧಾನವನ್ನು ಪರಿಚಯಿಸಲಾಗಿದೆ.
ಬೆಂಗಳೂರಿನ ಎಲ್ಲಾ ಆಸ್ತಿದಾರರು ಅವರ ಇ-ಖಾತೆಯನ್ನು ಸರಾಗವಾಗಿ ಹಾಗೂ ಉಚಿತವಾಗಿ ತಾವೇ ಸ್ವಂತವಾಗಿ ಪಡೆಯುವುದನ್ನು ಸಕ್ರಿಯಗೊಳಿಸಲು ಕೆಲವು ವಿಧಾನವನ್ನು ಪರಿಚಯಿಸಿರುವುದಾಗಿ ಪಾಲಿಕೆ ಹೇಳಿದೆ. ಆ ವಿಧಾನಗಳು ಇಲ್ಲಿವೆ.
* ಅಂತಿಮ ಇ-ಖಾತೆ ಪಡೆಯಲು ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರದ ಅಗತ್ಯವಿಲ್ಲ.
* ಕೇವಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಕ್ಷಣದ ಮಾರಾಟ ಅಥವಾ ವಹಿವಾಟು ನಡೆಸುವವರು ಮಾತ್ರ ಬಿಬಿಎಂಪಿ ಇ-ಖಾತೆ ವ್ಯವಸ್ಥೆಯಲ್ಲಿ ಒಂದು ಬಾರಿಗೆ ಮಾತ್ರ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರ (EC)ವನ್ನು ನೀಡಬೇಕಾಗುತ್ತದೆ. ಇದು ಒಟ್ಟು ಆಸ್ತಿಯಲ್ಲಿ ಕೇವಲ 5% ಆಗಿರುತ್ತದೆ.
ಇನ್ನು ಮೇಲಿನ ವಿಶೇಷ ಪ್ರಕರಣದಲ್ಲಿ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವನ್ನು(EC),
I. "ಯಾವ ದಿನಾಂಕದಿಂದ"- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ಹಾಲಿ ಹಕ್ಕು ಹೊಂದಿರುವ ಮಾಲೀಕರು ಕ್ರಯ/ನೋಂದಾಯಿತ ಪತ್ರದ ಮೂಲಕ ಪಡೆದ ದಿನಾಂಕದ ಕನಿಷ್ಠ ಒಂದು ದಿನದ ಹಿಂದಿನ ದಿನಾಂಕದಿಂದ ಮತ್ತು "ಯಾವ ದಿನಾಂಕದವರೆಗೆ"- ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು(EC) ದಿನಾಂಕ: 31.10.2024 ರ ವರೆಗೆ ಇರಬೇಕು ಎಂದು ಬಿಬಿಎಂಪಿ ಹೇಳಿದೆ.
* ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು (EC) ಹೊಸದಾಗಿ ನೋಂದಾವಣೆ ಮಾಡಿಸಿದ 7 ದಿನಗಳ ಒಳಗೆ ಇರಬೇಕು ಎನ್ನುವ ಅಗತ್ಯವು ಇನ್ಮುಂದೆ ಇರುವುದಿಲ್ಲ.
* ಉದಾಹರಣೆಗೆ ಎʼಯ ಮಾರಾಟ ಪತ್ರದ ಆಧಾರದ ಮೇಲೆ ಅವರು ಮಾಲೀಕರಾದ ದಿನಾಂಕ:17.06.2014 ಮತ್ತು ಅವನು ದಿನಾಂಕ: 30.01.2025 ರಂದು ಸಬ್-ರಿಜಿಸ್ಟ್ರಾರ್‌ನಲ್ಲಿ ಬಿʼ ಗೆ ಮಾರಾಟ ಮಾಡಲು ಬಯಸಿದರೆ, ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವು ದಿನಾಂಕ: 16-06-2014 ರಿಂದ ದಿನಾಂಕ: 01.11.2024 ರವರೆಗೆ ಇರುವುದನ್ನು ಪರಿಗಣಿಸಲಾಗುವುದು.
* ಮಾರಾಟ/ನೋಂದಣಿಗೆ ಹೋಗುವ ಆಸ್ತಿಗಳಿಗೆ ಅನ್ಯ ವ್ಯಕ್ತಿ/ಹಿಂದಿನ ಮಾಲೀಕರು, ಸಾರ್ವಜನಿಕರ ಆಸ್ತಿಯನ್ನು ಮಾರಾಟ ಮಾಡುವುದನ್ನು ತಡೆಯುವ ಸಲುವಾಗಿ ಆಸ್ತಿ ಋಣಭಾರ ರಾಹಿತ್ಯ ಪ್ರಮಾಣಪತ್ರವನ್ನು (EC)ಕೇಳಲಾಗುತ್ತದೆ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಹತ್ವದ ಆದೇಶವನ್ನು ಮಾಡಿದ್ದಾರೆ.
ಇ - ಖಾತಾ ಪಡೆಯುವುದು ಇನ್ನಷ್ಟು ಸುಲಭ: ಇನ್ನು ಬೆಂಗಳೂರಿನಲ್ಲಿ ಇ - ಖಾತಾ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ. ಇ - ಖಾತಾ ಪಡೆಯುವಲ್ಲಿ ಇದ್ದ ಕೆಲವೊಂದು ನಿರ್ದಿಷ್ಟ ಸಮಸ್ಯೆಗಳನ್ನು ಬಿಬಿಎಂಪಿ ಪರಿಹರಿಸಿದೆ. ಅಲ್ಲದೆ ಇದೀಗ ಋಣಭಾರ ರಾಹಿತ್ಯ ಪ್ರಮಾಣ ಪತ್ರಕ್ಕೂ ಅನುಮತಿ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಇ - ಖಾತಾ ಮಾಡಿಸಿಕೊಳ್ಳುವುದು ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.
ಇ - ಖಾತಾ ಪಡೆಯುವುದಕ್ಕೆ ಆಗುತ್ತಿದ್ದ ಗೊಂದಲಗಳನ್ನು ತಪ್ಪಿಸುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇಂತಹ ಕ್ರಮವನ್ನು ತೆಗೆದುಕೊಂಡಿದೆ.












Click it and Unblock the Notifications