ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಸಂಚಾರ ಸ್ಥಗಿತ
ಬೆಂಗಳೂರು, ಜೂನ್ 5 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರಂಭಿಸಿದ್ದ ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಅಂತ್ಯಗೊಂಡಿದೆ. ಈ ಬಸ್ಸನ್ನು ಖರೀದಿಸುವ ಕುರಿತು ಬಿಎಂಟಿಸಿ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.
ದೇಶದಲ್ಲಿಯೇ ಅತ್ಯುತ್ತಮ ನಗರ ಸಾರಿಗೆ ವ್ಯವಸ್ಥೆ ಹೊಂದಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಬಸ್ ಸಂಚಾರಕ್ಕೆ ಫೆ.27ರಂದು ಚಾಲನೆ ನೀಡಿತ್ತು. ಮೂರು ತಿಂಗಳ ಅವಧಿಯಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಯುಟೋಪಿಯಾ ಸಂಸ್ಥೆಯು ಉಚಿತವಾಗಿ ಬಸ್ ನೀಡಿತ್ತು. [ಎಲೆಕ್ಟ್ರಿಕ್ ಬಸ್ ಬಗ್ಗೆ ಒಂದಷ್ಟು ಮಾಹಿತಿ]

ಶೇ 100ರಷ್ಟು ವಿದ್ಯುತ್ ಚಾಲಿತ ಹಾಗೂ ಹೊಗೆರಹಿತವಾದ ಈ ಬಸ್ ಎಂಟು ಗಂಟೆಗಳ ಕಾಲ ಚಾರ್ಜ್ ಮಾಡಿದರೆ 250 ಕಿ.ಮೀ. ದೂರ ಸಂಚರಿಸುತ್ತಿತ್ತು. ಸದ್ಯ ಪ್ರಾಯೋಗಿಕ ಸಂಚಾರದ ಅವಧಿ ಪೂರ್ಣಗೊಂಡಿರುವುದರಿಂದ ಜೂನ್ 1ರಿಂದಲೇ ಎಲೆಕ್ಟ್ರಿಕ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ ಬಿಎಂಟಿಸಿ ಈ ಬಸ್ಸನ್ನು ಖರೀದಿ ಮಾಡಿದರೆ ಎಲೆಕ್ಟ್ರಿಕ್ ಬಸ್ ಪುನಃ ಬೆಂಗಳೂರಿನ ರಸ್ತೆಗಿಳಿಯಲಿದೆ.
ಯಾವ ಮಾರ್ಗದಲ್ಲಿ ಸಂಚಾರ : ಬಿಎಂಟಿಸಿ ಮೆಜೆಸ್ಟಿಕ್-ಕಾಡುಗೋಡಿ ಹಾಗೂ ಮೆಜೆಸ್ಟಿಕ್-ಐಟಿಪಿಎಲ್ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರವನ್ನು ನಿಗದಿಗೊಳಿಸಿತ್ತು. ಬಸ್ ಸಂಚಾರದ ಬಗ್ಗೆ ಪ್ರಯಾಣಿಕರ ಮತ್ತು ಸಂಸ್ಥೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಆದರೆ, ಬಸ್ ದುಬಾರಿ ಆಗಿರುವುದರಿಂದ ಖರೀದಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. [810 ಹೊಸ ಬಸ್ ಖರೀದಿಸಲಿದೆ ಬಿಎಂಟಿಸಿ]
ಎಷ್ಟು ಬೆಲೆ : ಎಲೆಕ್ಟ್ರಿಕ್ ಬಸ್ ಬೆಲೆ ಸುಮಾರು ಮೂರು ಕೋಟಿ ರೂ.ಗಳಾಗಿವೆ. ಆದ್ದರಿಂದ ಎಲೆಕ್ಟ್ರಿಕ್ ಬಸ್ ಖರೀದಿಸುವ ಬದಲು, ಮೂರು ವೋಲ್ವೊ ಬಸ್ಸುಗಳನ್ನು ಖರೀದಿ ಮಾಡಬಹುದಾಗಿದೆ. ಬಸ್ ಖರೀದಿ ಅಥವ ಬಾಡಿಗೆಗೆ ಪಡೆಯುವ ಕುರಿತು ಬಿಎಂಟಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಬಹುದಾಗಿದೆ.
ಎಷ್ಟು ಆದಾಯ ಬಂದಿದೆ : ಮೂರು ತಿಂಗಳ ಪ್ರಾಯೋಗಿಕ ಅವಧಿಯಲ್ಲಿ ಎಲೆಕ್ಟ್ರಿಕ್ ಬಸ್ ಮಾರ್ಚ್‌ನಲ್ಲಿ 4,966 ಕಿ.ಮೀ, ಏಪ್ರಿಲ್‌ನಲ್ಲಿ 5,108 ಕಿ.ಮೀ., ಮೇ ತಿಂಗಳಲ್ಲಿ 4,467 ಕಿ.ಮೀ.ಸಂಚಾರ ನಡೆಸಿದೆ. ಇದರಿಂದ 3.36 ಲಕ್ಷ, 3.75 ಲಕ್ಷ ಮತ್ತು 3.73 ಲಕ್ಷ ರೂ.ಆದಾಯ ಬಂದಿದೆ.












Click it and Unblock the Notifications