ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ: ರಾಜೀವ್ ಪ್ರತಾಪ್
ಬೆಂಗಳೂರು ಏಪ್ರಿಲ್ 24: ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಕೋರ್ ಟೀಂ ಸದಸ್ಯ ಹಾಗೂ ಸಂಸದ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ನಗರದಲ್ಲಿಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬೂತ್ ಪ್ರಮುಖ ರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ನಿನ್ನೆ ಬಂದ ಚುನಾವಣಾ ಪೂರ್ವ ಫಲಿತಾಂಶದಲ್ಲೂ ಬಿಜೆಪಿ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಪ್ರಧಾನಿ ಮೋದಿ ಬರಲು ಕ್ಷಣಗಣನೆ ಪ್ರಾರಂಭವಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಲಿದೆ ಎಂದರು.

ಶಕ್ತಿ ಕೇಂದ್ರದ ಪ್ರಮುಖ ವರದಿ, ಬೂತ್ ಸಮಿತಿಗಳ ಕಾರ್ಯವೈಖರಿ, ನವಶಕ್ತಿ ಕೇಂದ್ರಗಳ ವರದಿ ಸೇರಿದಂತೆ ನಮಗೆ ಬಂದ ಎಲ್ಲಾ ವರದಿಗಳಲ್ಲೂ ಹೆಬ್ಬಾಳ ಒಂದನೇ ಸ್ಥಾನದಲ್ಲಿತ್ತು. ಹಾಗಾಗಿಯೇ ಡಾ ವೈ ಎ ನಾರಾಯಣಸ್ವಾಮಿ ಅವರಿಗೆ ಮತ್ತೆ ಟಿಕೆಟ್ ನೀಡಿದ್ದೇವೆ ಎಂದರು.
ಬಿಜೆಪಿ ಕಾರ್ಯಕರ್ತರು ಮತದಾನದ ದಿನ ಬೆಳಿಗ್ಗೆ ಹತ್ತು ಹನ್ನೊಂದು ಗಂಟೆಯೊಳಗೆ ಮತಗಟ್ಟೆ ತಲುಪಬೇಕು. ಮೊದಲ ಎರಡು ಗಂಟೆಗಳ ಕಾಲ ಬೀಳುವ ಮತಗಳೇ ನಿರ್ಣಾಯಕವಾಗುತ್ತವೆ. ಇದರ ಬಗ್ಗೆ ಬೂತ್ ಮಟ್ಟದ ಪ್ರಮುಖರು ಗಮನ ಹರಿಸುವಂತೆ ಸಲಹೆ ನೀಡಿದರು.

ನಮ್ಮ ವಿರೋಧಿ ಅಭ್ಯರ್ಥಿ ಬಿಲಿಯನೇರ್, 417 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಹಣದ ಪ್ರಭಾವ ನಿಲ್ಲಬೇಕು. ಹೆಬ್ಬಾಳದಲ್ಲಿ ಮನಿ ಮುಖ್ಯವಲ್ಲ ಮೋದಿ ಮುಖ್ಯ ಎಂದು ಮತದಾರರು ಸಾಬೀತು ಪಡಿಸಲಿದ್ದಾರೆ ಎಂದರು. ಕ್ಷೇತ್ರದ ನೂರಕ್ಕೂ ಹೆಚ್ಚು ಬೂತ್ ಮಟ್ಟದ ಕಾರ್ಯಕರ್ತರು ಸಂವಾದದಲ್ಲಿ ಭಾಗವಹಿಸಿದ್ದರು.












Click it and Unblock the Notifications