Ejipura Flyover: ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ವೇಗ, 5 ಪೋರ್ಟಲ್ ಪಿಯರ್ ಅಳವಡಿಕೆ
ಬೆಂಗಳೂರು: ವರ್ಷಗಳಿಂದ ಕುಂಟುತ್ತ ಸಾಗಿರುವ 2.38 ಕಿ.ಮೀ ಉದ್ದದ ನಗರದ ಪ್ರಮುಖ ಯೋಜನೆಯಾದ ಈಜೀಪುರ ಮೇಲ್ಸೇತುವೆ ಕೆಲಸಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವೇಗ ನೀಡಿದೆ. ಹೊಸ ಗಡುವಿನೊಳಗೆ ಕೆಲಸ ಮುಗಿಸಲು ಕಾಮಗಾರಿಗೆ ಚುರುಕು ನೀಡಲಾಗಿದೆ. ಇದೀಗ ಪ್ರಮುಖ ಭಾಗಗಳ ಅಳವಡಿಕೆಗಾಗಿ ಸೇಂಟ್ ಜಾನ್ಸ್ ಜಾಗ ಗುರುತಿಸಿ ಕೂಡಲೇ ಕೆಲಸ ಪ್ರಾರಂಭಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ನಿರ್ದೇಶಿಸಿದ್ದಾರೆ.
ನಗರದಲ್ಲಿ ಈಜೀಪುರ ಮೇಲ್ಸೇತುವೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ವಿಭಾಗ, ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ಜೊತೆ ಸೋಮವಾರ ಮಹತ್ವದ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ಪ್ರಮುಖ ಮೇಲ್ಸೇತುವೆ 5 ಪೋರ್ಟಲ್ ಪಿಯರ್ ಅಳವಡಿಸಬೇಕು. ಈ ಸಂಬಂಧ ಜಾಗ ಗುರುತಿಸಿ ತ್ವರಿತವಾಗಿ ಅಳವಡಿಕೆ ಕಾಮಗಾರಿ ಆರಂಭಿಸಲು ಸೂಚಿಸಿದರು.

ಸೆಂಟ್ ಜಾನ್ ಜಾಗದ ಬಳಕೆ ಸಮಸ್ಯೆ ನಿವಾರಣೆ
ಈಜೀಪುರ ಮೇಲ್ಸೇತುವೆ ಕಾಮಗಾರಿ ಸದ್ಯ ವೇಗವಾಗಿ ನಡೆಯುತ್ತಿದೆ. ಕೇಂದ್ರೀಯ ಸದನ್ ಕಡೆಯಿಂದ ಈಜೀಪುರ ಕಡೆಗೆ ಸಾಗುವ ಎಡ ಭಾಗದಲ್ಲಿ ಸೇಂಟ್ ಜಾನ್ಸ್ ಬಳಿ 5 ಪೋರ್ಟಲ್ ಪಿಯರ್ ಅಳವಡಿಸಲು ಸೇಂಟ್ ಜಾನ್ಸ್ ನ ಸ್ವಲ್ಪ ಜಾಗದ ಬಳಕೆ ಅವಶ್ಯಕತೆಯಿರುತ್ತದೆ. ಪಾದಚಾರಿ ಮಾರ್ಗ ಹಾಗೂ ಸೇಂಟ್ ಜಾನ್ಸ್ ಕಾಪೌಂಡ್ ಗೋಡೆಯ ಭಾಗದಲ್ಲಿ ಪೋರ್ಟಲ್ ಪಿಯರ್ ಹೊಂದಿಕೊಂಡಂತೆ ನಿರ್ಮಾಣ ಮಾಡಬೇಕಿದೆ. ಈ ಸಂಬಂಧ ಪೋರ್ಟಲ್ ಪಿಯರ್ ಕಾರ್ಯವನ್ನು ನಡೆಸಲು ಸೇಂಟ್ ಜಾನ್ಸ್ ಸಂಸ್ಥೆರವರೊಂದಿಗೆ ಇಂದು ಮಾತುಕತೆ ನಡೆಸಲಾಗಿದೆ. ಅವರಿಂದ ಜಾಗದ ಬಳಕೆಗೆ ಸಮ್ಮತಿಸಿ ಇಂದು ಒಪ್ಪಿಗೆ ದೊರೆತಿದೆ. ಜಾಗ ಬಳಕೆಗೆ ಗುರುತಿಸಿ ಕೆಲಸ ಆರಂಭಿಸಲು ಅಭಿಯಂತರರು ಹಾಗೂ ಗುತ್ತಿಗೆದಾರರ ಕ್ರಮ ವಹಿಸಬೇಕೆಂದು ಹೇಳಿದರು.
ಪೋರ್ಟಲ್ ಪಿಯರ್ ಗಳ ಕಾರ್ಯ ನಡೆಯುವ ವೇಳೆ ಸುರಕ್ಷತಾ ಕ್ರಮವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಿಕೊಂಡು ಕೆಲಸ ಮಾಡಬೇಕು. ಅಲ್ಲದೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾಮಗ್ರಿಗಳಿಗಾಗಿ ಸ್ಥಳಾವಕಾಶ ನೀಡಲು ತಿಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಕೂಡಲೇ ಕೊಟ್ಟ ಭರವಸೆಯಂತೆ ಗೋಡೆ ನಿರ್ಮಿಸಿಕೊಡಲಾಗುವುದು.
ಇನ್ನು ಸೇಂಟ್ ಜಾನ್ಸ್ ಭಾಗದಲ್ಲಿ ರ್ಯಾಂಪ್ ನಿರ್ಮಿಸಲು ಭೂಸ್ವಾಧೀನ ಪಡಿಸಿಕೊಳ್ಳುವ ಜಾಗಕ್ಕೆ ಟಿಡಿಆರ್ ನೀಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ಆ ಜಾಗವನ್ನು ಸಾಧ್ಯವಾದಷ್ಟು ಬೇಗ ಹಸ್ತಾಂತರ ಮಾಡಿಕೊಂಡು ಕಾಮಗಾರಿಯನ್ನು ಕೂಡಲೇ ನಡೆಸಬೇಕಿದ್ದು, ಕ್ರಮ ಕೈಗೊಳ್ಳಿ ಎಂದರು. ಈ ಮೇಲ್ಸೇತುವೆಯನ್ನು ಇದೇ ವರ್ಷ ಮಾರ್ಚ್ ಹೊತ್ತಿಗೆ ಪೂರ್ಣಗೊಳಿಸಲು ಜಿಬಿಎ ಗಡುವು ಹಾಕಿಕೊಂಡಿದೆ.
ಎಷ್ಟು ಕಾಮಗಾರಿ ಬಾಕಿ ಉಳಿದಿದೆ?
ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್ ಅವರು ಮಾತನಾಡಿ, ಈಜೀಪುರ ಮುಖ್ಯ ರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಮೇಲ್ಸೇತುವೆಗೆ ಒಟ್ಟು 762 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕಿದೆ. ಈಗಾಗಲೇ 645 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಲಾಗಿದೆ. ಇನ್ನು 117 ಸೆಗ್ಮೆಂಟ್ ಗಳನ್ನು ಕಾಸ್ಟಿಂಗ್ ಮಾಡಬೇಕಿದೆ. ಜೊತೆಗೆ 490 ಸೆಗ್ಮೆಂಟ್ ಗಳನ್ನು ಜೋಡಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications