E-Khata: ಆಸ್ತಿದಾರರಿಗೆ ಖಾತಾ ವಿಚಾರದಲ್ಲಿ ಹೊಸ ಗುಡ್‌ನ್ಯೂಸ್ ಕೊಟ್ಟ ಬಿಬಿಎಂಪಿ!
E-Khata: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ -ಖಾತಾ ವಿಚಾರದಲ್ಲಿ ಹೊಸದೊಂದು ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಕೆಲವು ಅಧಿಕಾರಿಗಳು ಇ - ಖಾತಾ ಪಡೆದುಕೊಳ್ಳುವುದಕ್ಕೆ ಬರೋಬ್ಬರಿ 4,000 ಸಾವಿರ ರೂಪಾಯಿ ವರೆಗೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳ ನಡುವೆಯೇ ಹೊಸ ಪ್ರಕಟಣೆಯೊಂದನ್ನು ಹೊರಡಿಸಿದೆ. ಅಲ್ಲದೆ ಇಲ್ಲಿಯ ವರೆಗೆ ಬೆಂಗಳೂರಿನಲ್ಲಿ 2.25 ಲಕ್ಷ ಅಂತಿಮ ಇ-ಖಾತಾಗಳನ್ನು ನೀಡಲಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಇ ಖಾತಾಗೆ ಸಂಬಂಧಿಸಿದಂತೆ ಹೊಸದೊಂದು ಅಪ್ಡೇಟ್ ಕೊಡಲಾಗಿದೆ. ಆಸ್ತಿದಾರರಿಗೆ ಸಂಬಂಧಿಸಿದ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಕುರಿತು ಇನ್ನಷ್ಟು ಹೆಚ್ಚಿನ ಗಮನಕೊಡಿ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಾಲಿಕೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. 2024-25ನೇ ಆರ್ಥಿಕ ಸಾಲು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುತ್ತಿದೆ. ಪಾಲಿಕೆಗೆ ಬಾಕಿ ಬರಬೇಕಿರುವ ಆಸ್ತಿ ತೆರಿಗೆಯನ್ನು ಕೂಡಲೇ ಸಂಗ್ರಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಇ-ಖಾತಾ ಸೇವೆ ನೀಡಲು ಉದ್ಯಮಿಗಳಿಗೆ ಅವಕಾಶ ನೀಡಲಾಗಿದೆ. ಅದರ ವಿವರ ನೋಡೋಣ.

ಇ-ಖಾತಾ ಸೇವೆ ನೀಡಲು ಉದ್ಯಮಿಗಳಿಗೆ ಅವಕಾಶ!
ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಬೇಗ ಇ - ಖಾತಾ ನೀಡುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇನ್ನಷ್ಟು ತ್ವರಿತಗತಿಯ ಕ್ರಮಕ್ಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಯುವ/ಸ್ಥಳೀಯ ಖಾಸಗಿ ಉದ್ಯಮಿಗಳು ಬೆಂಗಳೂರು ಪಾಲಿಕೆಯ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಇದಾದ ಮೇಲೆ ಆಸ್ತಿದಾರರಿಗೆ ಇ-ಖಾತಾ ಸೇವೆಗಳನ್ನು ನೀಡಿ ಹಣ ಗಳಿಸುವ ಗೋಲ್ಡನ್ ಅವಕಾಶವನ್ನು ಕಲ್ಪಿಸಲಾಗಿದೆ.
ಯುವ/ಸ್ಥಳೀಯ ಖಾಸಗಿ ಉದ್ಯಮಿಗಳು ಪಾಲಿಕೆಗೆ ಯಾವುದೇ ಶುಲ್ಕ ಪಾವತಿಸದೆ ನೋಂದಣಿ ಮಾಡಿಕೊಂಡು ಹಣ ಗಳಿಸಬಹುದಾಗಿದೆ. ಇ-ಆಸ್ತಿ ಸೇವೆಗಳು ನೀಡಬಹುದಾದ ವಿವರಗಳು ಈ ರೀತಿ ಇವೆ.
* ಅಂತಿಮ ಇ-ಖಾತಾಗಾಗಿ ದತ್ತಾಂಶ ನಮೂದನೆ, ಸ್ವೀಕೃತಿ ಪ್ರತಿ (ಕಪ್ಪು-ಬಿಳುಪು) ಹಾಗೂ ಇ-ಆಸ್ತಿ ಸಲ್ಲಿಸಲು ಒಟ್ಟು ವಹಿವಾಟು ಶುಲ್ಕಕ್ಕಾಗಿ ಉದ್ಯಮಿಗೆ ಪ್ರತಿ ಇ-ಖಾತಾಗೆ 45 ರೂಪಾಯಿ ಪಾವತಿಸಬೇಕು. ಆದರೆ, ಪಾಲಿಕೆಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ.
* ಆಸ್ತಿ ದಾಖಲೆಗಳು/ಗುರುತಿನ ಚೀಟಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಬಿಬಿಎಂಪಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದಕ್ಕೆ ಉದ್ಯಮಿಗೆ ಪ್ರತಿ ಪುಟಕ್ಕೆ 45 ರೂಪಾಯಿ ಪಾವತಿಸಬೇಕು. ಬಿಬಿಎಂಪಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ.
* ಅಂತಿಮ ಇ-ಖಾತಾ ಮುದ್ರಣಕ್ಕಾಗಿ ಉದ್ಯಮಿಗೆ ಪ್ರತಿ ಇ-ಖಾತಾಗೆ 45 ರೂಪಾಯಿ ಪಾವತಿಸಬೇಕು. ಪಾಲಿಕೆಗೆ ಪ್ರತಿ ಇ-ಖಾತಾಗೆ ಆನ್ ಲೈನ್ ಮೂಲಕ 125 ರೂಪಾಯಿ ಪಾವತಿ ಮಾಡಬೇಕು.
* ಇ-ಖಾತಾ ತಿದ್ದುಪಡಿ, ಮ್ಯುಟೆಷನ್ ಅಥವಾ ಯಾವುದೇ ಇತರೆ ಅರ್ಜಿ ಸಲ್ಲಿಸುವುದಕ್ಕಾಗಿ ಉದ್ಯಮಿಗೆ ಪ್ರತಿ ಇ-ಖಾತಾಗೆ 45 ರೂಪಾಯಿ ಪಾವತಿಸಬೇಕು. ಪಾಲಿಕೆಗೆ ಕೇವಲ ಮ್ಯುಟೆಷನ್ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುವುದು ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಪಾಲಿಕೆಯ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳು, ಉದ್ದಿಮೆಗಳಿಗೆ ಭೇಟಿ ನೀಡಿ ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕು. ತಿಂಗಳಾಂತ್ಯದೊಳಗಾಗಿ ಪಾಲಿಕೆ ಗುರಿ ಇಟ್ಟಿರುವ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಎಂದೂ ಸೂಚನೆ ನೀಡಲಾಗಿದೆ.
4,604 ಕೋಟಿ ರೂ ಸಂಗ್ರಹ: ಪಾಲಿಕೆಯು ಈ ಬಾರಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ 5,210 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ 4,604 ಕೋಟಿ ರೂಪಾಯಿ ಅಂದರೆ, ಶೇ. 88.36 ರಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications