ದೃಶ್ಯಂ ತರ ನಾಟಕವಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ 'ಕಳ್ಳ ಫ್ಯಾಮಿಲಿ'
ಬೆಂಗಳೂರು, ಜ. 23: ದೃಶ್ಯಂ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ. ಕೊಲೆ ಮಾಡಿದ್ರೂ ಯಾವುದೇ ಸಾಕ್ಷ್ಯಾಧಾರ ಸಿಗದಂತೆ ನಟನೆ ಮಾಡುವ ದೃಶ್ಯಂ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ರೀತಿ ಕುಟುಂಬವೊಂದು ಹಣಕ್ಕಾಗಿ ಚಿನ್ನಾಭರಣ ಅಡವಿಟ್ಟು ಕಳ್ಳತನ ನಾಟಕವಾಡುವ ದೃಶ್ಯಂ ಸಿನಿಮಾ ಮೀರಿಸುವ ಘಟನೆಯೊಂದು ಆನೇಕಲ್‌ನಲ್ಲಿ ನಡೆದಿದೆ. ಆದರೆ, ಇಲ್ಲಿ ನಾಟಕ ಆಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.
ದೃಶ್ಯಂ ಮಾದರಿ ಪ್ಲ್ಯಾನ್: ಸರ್ಜಾಪುರದಲ್ಲಿ ಕುಟುಂಬವೊಂದಿದೆ. ಸುಲಭವಾಗಿ ಹಣ ಮಾಡಲಿಕ್ಕೆ ಖತರ್ ನಾಕ್ ಪ್ಲ್ಯಾನ್ ರೂಪಿಸುತ್ತಾರೆ. ಅದಕ್ಕೆ ಇಡೀ ಫ್ಯಾಮಿಲಿ ಬೆಂಬಲ ನೀಡುತ್ತದೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಪರಿಚಿತರ ಹೆಸರಿನಲ್ಲಿ ಅಡವಿಡುವುದು. ಆ ಬಳಿಕ ಆಭರಣ ಕಳ್ಳತನ ಬಗ್ಗೆ ಪೊಲೀಸರಿಗೆ ದೂರು ನೀಡುವುದು.ಈ ವೇಳೆ ಅಡವಿಡಿಸಿಕೊಂಡ ಗಿರವಿ ಅಂಗಡಿಯ ಬಗ್ಗೆ ಪೊಲೀಸರಿಗೆ ಸುಳಿವು ನೀಡುವುದು. ಇದನ್ನು ನಂಬಿ ಪೊಲೀಸರು ಗಿರವಿ ಅಂಗಡಿಯಲ್ಲಿ ಅಡವಿಟ್ಟ ಆಭರಣ ವಶಪಡಿಸಿಕೊಂಡು ವಾಪಸು ಕೊಡುತ್ತಾರೆ. ಇದರಿಂದ ಗಿರವಿ ಇಟ್ಟು ಪಡೆದ ಹಣ ಲಪಟಾಯಿಸುವುದು ಈ ಕುಟುಂಬದ ಪ್ಲಾನ್.

ಮೊದಲ ಸಲ ಯಶಸ್ಸು
ರೂಪಿಸಿದ ಪ್ಲ್ಯಾನ್‌ನಂತೆ ಈ ಮೊದಲು ಯಶವಂತಪುರದಲ್ಲಿ ಸ್ನೇಹಿತರ ಮೂಲಕ ಚಿನ್ನ ಗಿರವಿ ಇಡುತ್ತಾರೆ. ಆ ಬಳಿಕ ಆಭರಣ ಕಳ್ಳತನ ಆಗಿದೆ ಎಂದು ನಾಟಕ ಅರಂಭಿಸುತ್ತಾರೆ. ಪೊಲೀಸರ ಮುಂದೆ ಕಣ್ಣೀರು ಸುರಿಸಿ ನಂಬಿಸುತ್ತಾರೆ. ಇದನ್ನು ನಂಬಿ ತನಿಖೆ ನಡೆಸಿದ್ದ ಪೊಲೀಸರು ಒಮ್ಮೆ ಆಭರಣ ಬಿಡಿಸಿಕೊಟ್ಟಿದ್ದರು! ಸುಲಭವಾಗಿ ಹಣ ಮಾಡುವ ಹಾದಿ ಕಂಡುಕೊಂಡಿದ್ದ ಈ ಕುಟುಂಬ ಇದೀಗ ಮತ್ತೊಂದು ಪ್ಲಾನ್ ರೂಪಿಸಿತ್ತು.

ಎರಡನೇ ಸಲ ತಗಲಾಕ್ಕೊಂಡ್ರು
ಸರ್ಜಾಪುರದ ನಿವಾಸಿ ರವಿಪ್ರಕಾಶ್ ಇತ್ತೀಚೆಗೆ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದರು. ನಾವು ದೇವಸ್ಥಾನಕ್ಕೆಂದು ಹೊರಗೆ ಹೋಗಿದ್ದೆವು. ಮನೆಯಲ್ಲಿ ಯಾರೋ ಆಭರಣ ಕಳ್ಳತನ ಮಾಡಿದ್ದಾರೆ. ದಯವಿಟ್ಟು ಪತ್ತೆ ಮಾಡಿಕೊಡಿ ಎಂದು ಮನವಿ ಮಾಡಿದ್ದರು. ಆರಂಭದಲ್ಲಿ ಇದು ನಿಜ ಎಂದು ಭಾವಿಸಿ ಸರ್ಜಾಪುರ ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ನಡೆದಿದ್ದಿದ್ದೇ ಬೇರೆ.

ಕಳ್ಳ ಕುಟುಂಬದ ನಾಟಕ
ದೂರುದಾರ ರವಿಪ್ರಕಾಶ್ ಅವರ ಪುತ್ರ ಮಿಥುನ್ ಕುಮಾರ್ ತನ್ನ ಸ್ನೇಹಿತ ದೀಪಕ್ ಎಂಬುವರ ಮೂಲಕ ಬ್ಯಾಂಕಿನಲ್ಲಿ ಒಡವೆ ಗಿರವಿ ಇಡಿಸಿದ್ದರು. 25 ಲಕ್ಷ ರೂ. ಹಣ ಪಡೆದಿದ್ದರು. ಇದಕ್ಕಾಗಿ ದೀಪಕ್‌ಗೂ ಸ್ವಲ್ಪ ಹಣ ಕೊಟ್ಟಿದ್ದರು. ರವಿ ಪ್ರಕಾಶ್ ಹೆಂಡತಿ ಸಂಗೀತಾ, ತಂಗಿ ಆಶಾ, ಚರಣ್, ಮಿಥುನ್ ಕುಮರ್, ಈತನ ಪ್ರಿಯತಮೆ ಆಸ್ಮಾ ಎಲ್ಲರೂ ಚಿನ್ನಾಭರಣ ಕಳುವು ನಾಟಕ ಆರಂಭಿಸಿದ್ದರು. ಆರಂಭದಲ್ಲಿ ಪೊಲೀಸರು ಇದನ್ನು ನಂಬಿಸಿದ್ದ ಪೊಲೀಸರು, ಯಾವುದೇ ಆಯಾಮದಲ್ಲಿ ತನಿಖೆ ನಡೆಸಿದರೂ ಕಳುವು ಆಗಿರುವ ಬಗ್ಗೆ ಕುರುಹುಗಳೇ ಸಿಕ್ಕಿಲ್ಲ. ಅನುಮಾನಗೊಂಡ ಸರ್ಜಾಪುರ ಪೊಲೀಸರು, ಕುಟುಂಬದ ಬಗ್ಗೆ ಅನುಮಾನಗೊಂಡಿದ್ದಾರೆ. ದೂರುದಾರ ರವಿ ಪ್ರಕಾಶ್ ಸೇರಿದಂತೆ ಒಬ್ಬೊಬ್ಬರನ್ನೇ ವಿಚಾರಣೆ ನಡೆಸಿದಾಗ, ಚಿನ್ನದ ಆಭರಣವನ್ನು ಗಿರವಿ ಇಟ್ಟು, ಕಳ್ಳತನ ನಾಟಕ ಆಡಿರುವ ಸಂಗತಿ ಗೊತ್ತಾಗಿದೆ.

ನಾಟಕವಾಗಿ ಒಮ್ಮೆ ಯಶಸ್ಸು
ಚಿನ್ನಾಭರಣ ಗಿರವಿ ಇಟ್ಟು ಹಣ ಪಡೆದು ಕಳ್ಳತನ ನಾಟಕವಾಡಿದ ಕಳ್ಳ ಕುಟುಂಬದ ಹಿಂದಿನ ಸತ್ಯವನ್ನು ಸರ್ಜಾಪುರ ಪೊಲೀಸರು ಪತ್ತೆ ಮಾಡಿದ್ದಾರೆ. ಮಾತ್ರವಲ್ಲ ಅಕ್ರಮವಾಗಿ ಹಣ ಮಾಡಿದ ಅರೋಪದ ಮೇಲೆ ಇಡೀ ಕಳ್ಳಕುಟುಂಬವನ್ನೇ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಹಿಂದೆ ಇದೇ ರೀತಿ ನಾಟಕವಾಗಿ ಒಮ್ಮೆ ಗಳಿಸಿದ್ದರು. ಎರಡನೇ ಬಾರಿಯೂ ಇದೇ ರೀತಿಯ ಪ್ರಯತ್ನ ಮಾಡಿದ್ದರಂತೆ. ಆದರೆ ಮೂರನೇ ಸಲ ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ.












Click it and Unblock the Notifications