ವರದಕ್ಷಿಣೆ ಕಿರುಕುಳ ಪ್ರಕರಣ: ಆರೋಪಿಯಿಂದ ಲಂಚ ಪಡೆದ ಮಡಿವಾಳ ಇನ್‌ಸ್ಪೆಕ್ಟರ್ ಸಸ್ಪೆಂಡ್
ಬೆಂಗಳೂರು, ಜ. 03: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ವಸೂಲಿಬಾಜಿ ಮಾಡಲು ಹೋಗಿ ಪೊಲೀಸ್ ಇನ್‌ಸ್ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ. ಲಂಚ ಕೊಟ್ಟ ವ್ಯಕ್ತಿಯೇ ವಿಡಿಯೋ ಮಾಡಿಕೊಂಡು ಪೊಲೀಸ್ ಆಯುಕ್ತರಿಗೆ ದೂರು ನೀಡಿ ಪೊಲೀಸ್ ಇನ್‌ಸ್ಪೆಕ್ಟರ್ ಭ್ರಷ್ಟತನವನ್ನು ಬಯಲಿಗೆ ಎಳೆದಿದ್ದಾನೆ. ಲಂಚ ಸ್ವೀಕರಿಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ಮಾಡಿದ್ದಾರೆ. ಲಂಚದ ಹಣಕ್ಕೆ ಆಸೆ ಬಿದ್ದು ಇದೀಗ ಅಮಾನತಿಗೆ ಒಳಗಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಮನೆಗೆ ತೆರಳಿದ್ದಾರೆ.
ನಡೆದಿದ್ದೇನು?: ವರದಕ್ಷಿಣೆ ಕಿರುಕುಳ ಸಂಬಂಧ ಮುಂಬೈ ಮೂಲದ ಅಜಯ್ ಎಂಬುವರ ವಿರುದ್ಧ ಆತನ ಪತ್ನಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಮಡಿವಾಳ ಪೊಲೀಸರು ಪತಿ ಅಜಯ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಯುವ ವೇಳೆ ಆರೋಪಿ ಪತಿ ಅಜಯ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆರೋಪಿಗೆ ಬಂಧನ ವಾರಂಟ್ ಜಾರಿಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಅರೋಪಿ ವಶಕ್ಕೆ: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುಂಬಯಿನಲ್ಲಿದ್ದ ಅಜಯ್‌ನನ್ನು ಮಡಿವಾಳ ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೇ ಅಜಯ್ ಪೋಷಕರನ್ನು ಸಹ ಮುಂಬಯಿನಿಂದ ಪೊಲೀಸರು ಕರೆಸಿದ್ದರು. ಕೋರ್ಟ್ ಆದೇಶದ ನಡುವೆಯೂ ಅಜಯ್‌ನಿಂದ ಹಣ ಪಡೆದು ಬಿಟ್ಟ ಕಳುಹಿಸಿದ್ದರು. ಅಜಯ್‌ನಿಂದ ಲಂಚದ ಹಣ ಪಡೆದು ಮಡಿವಾಳ ಪೊಲೀಸ್ ಇನ್ಸಪೆಕ್ಟರ್ ಸುನೀಲ್ ನಾಯಕ್ ಬಿಟ್ಟು ಕಳುಹಿಸಿದ್ದರು.

ಆದರೆ ಲಂಚ ಪಡೆದ ದೃಶ್ಯವನ್ನು ಸೆರೆ ಹಿಡಿದಿದ್ದ ಅಜಯ್, ವಿಡಿಯೋ ಸಮೇತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ದೂರು ನೀಡಿದ್ದರು. ದೂರನ್ನು ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಡಿಸಿಪಿ ಶ್ರೀನಾಥ್ ಜೋಶಿ ಅವರಿಗೆ ಆದೇಶ ಮಾಡಿದ್ದರು. ಈ ಕುರಿತು ತನಿಖೆ ನಡೆಸಿ ಡಿಸಿಪಿ ಶ್ರೀನಾಥ್ ಜೋಶಿ ವರದಿ ನೀಡಿದ್ದರು. ವರದಿಯಲ್ಲಿ ಮಡಿವಾಳ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ನಾಯಕ್ ಲಂಚ ಪಡೆದಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಸುನೀಲ್ ನಾಯಕ್ ಅವರನ್ನು ಅಮಾನತು ಮಾಡಿ ಆದೇಶ ಮಾಡಲಾಗಿದೆ.

ಭ್ರಷ್ಟಾಚಾರ ಆರೋಪ: ರಾಜಧಾನಿಯಲ್ಲಿ ಬೆಂಗಳೂರು ಪೊಲೀಸರ ಕಾರ್ಯ ಶೈಲಿ ಬಗ್ಗೆ ಇತ್ತೀಚೆಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಕೇವಲ ಮಾದಕ ವಸ್ತು ಪ್ರಕರಣಗಳ ತನಿಖೆಯಲ್ಲಿ ಮುಳುಗಿರುವ ಪೊಲೀಸರು ಕೌಟುಂಬಿಕ ಕಲಹ ಪ್ರಕರಣಗಳನ್ನು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅರ್ಚನಾ ರೆಡ್ಡಿಯನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅರ್ಚನಾ ರೆಡ್ಡಿಯ ಪುತ್ರಿಯನ್ನು ಬಿಟ್ಟಿಗೆ ಹಾಕಿಕೊಂಡಿದ್ದ ಮೂರನೇ ಪತಿಯೇ ಹತ್ಯೆಗೆ ಸಂಚು ರೂಪಿಸಿದ್ದ. ಈ ಕುರಿತು ಒಂದು ತಿಂಗಳ ಹಿಂದೆಯೇ ಅರ್ಚನಾ ರೆಡ್ಡಿ ದೂರು ನೀಡಿದ್ದರು. ಆದರೆ ಪೊಲೀಸರ ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿಯೇ ಆಕೆ ಕೊಲೆಯಲ್ಲಿ ಅಂತ್ಯವಾಗಿದ್ದಳು.

ಇದೇ ರೀತಿ ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದಂತೆ ಪೊಲೀಸರು ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮೇಲಾಧಿಕಾರಿಗಳ ಕಣ್ಣು ತಪ್ಪಿಸಲು ಎನ್ ಸಿಆರ್ ದಾಖಲಿಸಿಕೊಂಡು ಕೈತೊಳೆದುಕೊಳ್ಳುತ್ತಿದ್ದಾರೆ ಎಂದೇ ಆರೋಪಿಸಲಾಗಿದೆ. ಇನ್ನೊಂದಡೆ ಈ ರೀತಿ ಲಂಚ ಪ್ರಕರಣಗಳಲ್ಲಿ ಅಂತ್ಯವಾಗುತ್ತಿವೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗುತ್ತಿರುವ ದೂರುಗಳು, ಅವುಗಳ ತನಿಖೆ, ವಿಲೇವಾರಿ, ವಸ್ತುಸ್ಥಿತಿ ಕುರಿತು ಮೇಲಾಧಿಕಾರಿಗಳು ಕೂಡ ಮೇಲ್ವಿಚಾರಣೆ ನಡೆಸುವುದನ್ನು ಮರೆತಂದಿದೆ. ಹೀಗಾಗಿ ಸಾಕಷ್ಟ ಆರೋಪಗಳು ಕೇಳಿ ಬರುತ್ತಿವೆ.












Click it and Unblock the Notifications