ಬೆಂಗಳೂರು: ಈ ರಸ್ತೆಯಲ್ಲಿ ಜೂನ್ 14ರಿಂದ ಟೋಲ್, ದರ
ಬೆಂಗಳೂರು, ಜೂನ್ 10: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು ನಗರದ ಹೊರವಲಯದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್)ನಲ್ಲಿ ಟೋಲ್ ಸಂಗ್ರಹ ಆರಂಭಿಸಲಿದೆ. ಜೂನ್ 14 ರಿಂದ ವಾಹನ ಸವಾರರು ಟೋಲ್ ಪಾವತಿಸಬೇಕಿದೆ.
ಡಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಮಾಡಲು ಮುಂದಾಗಿದ್ದು, ದರಪಟ್ಟಿಯನ್ನು ಪ್ರಕಟಿಸಿದೆ.

2023ರ ನವೆಂಬರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರವನ್ನು ಆರಂಭಿಸುವ ಮೂಲಕ ಹೊಸಕೋಟೆ-ದೊಡ್ಡಬಳ್ಳಾಪುರ ನಡುವಿನ 34 ಕಿ. ಮೀ. ವ್ಯಾಪ್ತಿಯಲ್ಲಿ ಭಾಗಶಃ ವಾಹನ ಸಂಚಾರಕ್ಕೆ ಅವಕಾಶ ನೀಡಿದೆ. ಈಗ ಸಂಪೂರ್ಣ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಹೊಸಕೋಟೆ-ದೊಡ್ಡಬಳ್ಳಾಪುರ (34.15) ಕಿ. ಮೀ. ಮಾರ್ಗದಲ್ಲಿ ಈಗಾಗಲೇ ಟೋಲ್ ಸಂಗ್ರಹ ಆರಂಭವಾಗಿದೆ. ಇದೇ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಡಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವಿನ 42 ಕಿ. ಮೀ. ಮಾರ್ಗದಲ್ಲಿ ಟೋಲ್ ಸಂಗ್ರಹ ಆರಂಭವಾಗಲಿದೆ. ಎರಡು ಟೋಲ್‌ಗಳಲ್ಲಿ ಯಾವುದೇ ಸಿಬ್ಬಂದಿ ಇರುವುದಿಲ್ಲ.
ಟೋಲ್ ದರಪಟ್ಟಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಡಾಬಸ್‌ಪೇಟೆ-ದೊಡ್ಡಬಳ್ಳಾಪುರ ನಡುವಿನ ಮಾರ್ಗದಲ್ಲಿ ಟೋಲ್ ಸಂಗ್ರಹ ಮಾಡುವ ಕುರಿತು ಪ್ರಕಟಣೆ ಹೊರಡಿಸಿದೆ. ಹುಲಿಕುಂಟೆಯಲ್ಲಿ ನಿರ್ಮಾಣ ಮಾಡಿರುವ ಟೋಲ್ ಬೂತ್‌ನಲ್ಲಿ ವಾಹನ ಸವಾರರು ಟೋಲ್ ಪಾವತಿಸಬೇಕಿದೆ ಎಂದು ಹೇಳಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಒಳಪಡುವ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 648ಕ್ಕೆ ಕರ್ನಾಟಕದಲ್ಲಿ 42 ಕಿ. ಮೀ. ವ್ಯಾಪ್ತಿಯಲ್ಲಿ ಟೋಲ್ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲಾ ವಾಹನಗಳ ಸ್ಥಳೀಯ ಮಾಸಿಕ ಪಾಸು ದರ 340 ರೂ. ಆಗಿದೆ.
ಕಾರು/ ಜೀಪು/ ವ್ಯಾನ್/ ಎಲ್‌ಎಂವಿ ಒಂದು ಕಡೆ ಸಂಚಾರಕ್ಕೆ 105 ರೂ., ವಾಪಸ್ ಬರಲು 155, ತಿಂಗಳಿನಲ್ಲಿ 50 ಸಲ ಸಂಚಾರ ನಡೆಸಲು ಮಾಸಿಕ ಪಾಸು 3490 ರೂ., ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 50 ರೂ.ಗಳು.
ಎಲ್‌ಸಿವಿ/ ಎಲ್‌ಜಿವಿ/ ಮಿನಿ ಬಸ್ ಒಂದು ಕಡೆ ಸಂಚಾರಕ್ಕೆ 170 ರೂ., ವಾಪಸ್ ಬರಲು 255, ತಿಂಗಳಿನಲ್ಲಿ 50 ಸಲ ಸಂಚಾರ ನಡೆಸಲು ಮಾಸಿಕ ಪಾಸು 5635 ರೂ., ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 85 ರೂ.ಗಳು.
ಟ್ರಕ್/ ಬಸ್ (2 ಆಕ್ಸೆಲ್) ಒಂದು ಕಡೆ ಸಂಚಾರಕ್ಕೆ 355 ರೂ., ವಾಪಸ್ ಬರಲು 530, ತಿಂಗಳಿನಲ್ಲಿ 50 ಸಲ ಸಂಚಾರ ನಡೆಸಲು ಮಾಸಿಕ ಪಾಸು 11805 ರೂ., ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 175 ರೂ.ಗಳು.
3 ಆಕ್ಸೆಲ್ ವಾಣಿಜ್ಯ ವಾಹನಗಳು ಒಂದು ಕಡೆ ಸಂಚಾರಕ್ಕೆ 385 ರೂ., ವಾಪಸ್ ಬರಲು 580, ತಿಂಗಳಿನಲ್ಲಿ 50 ಸಲ ಸಂಚಾರ ನಡೆಸಲು ಮಾಸಿಕ ಪಾಸು 12880 ರೂ., ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 195 ರೂ.ಗಳು.
ನಿರ್ಮಾಣ ಹಂತದ ಭಾರೀ ವಾಹನ/ ಅರ್ಥ್ ಮೂವಿಂಗ್ ಎಕ್ಯುಪ್‌ಮೆಂಟ್/ ಮಲ್ಪಿ ಆಕ್ಸೆಲ್ ವಾಹನಗಳು (4-6 ಆಕ್ಸೆಲ್) ಒಂದು ಕಡೆ ಸಂಚಾರಕ್ಕೆ 555 ರೂ., ವಾಪಸ್ ಬರಲು 835, ತಿಂಗಳಿನಲ್ಲಿ 50 ಸಲ ಸಂಚಾರ ನಡೆಸಲು ಮಾಸಿಕ ಪಾಸು 18515 ರೂ., ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 280 ರೂ.ಗಳು.
ಭಾರೀ ವಾಹನಗಳು (7 ಮತ್ತು ಹೆಚ್ಚಿನ ಆಕ್ಸೆಲ್). ಒಂದು ಕಡೆ ಸಂಚಾರಕ್ಕೆ 675 ರೂ., ವಾಪಸ್ ಬರಲು 1015, ತಿಂಗಳಿನಲ್ಲಿ 50 ಸಲ ಸಂಚಾರ ನಡೆಸಲು ಮಾಸಿಕ ಪಾಸು 22540 ರೂ., ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಣಿಜ್ಯ ವಾಹನಗಳಿಗೆ 340 ರೂ.ಗಳು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಮಹತ್ವದ ಉದ್ದೇಶದಿಂದ ಈ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ಯೋಜನೆ ರೂಪಿಸಿದೆ. ಈ ರಸ್ತೆ ಎನ್‌ಎಚ್ 48 (ತುಮೂರು ರಸ್ತೆ), ಎನ್‌ಹೆಚ್ 44 (ಬಳ್ಳಾರಿ ರಸ್ತೆ) ಮತ್ತು ಎನ್‌ಹೆಚ್ 75 (ಕೋಲಾರ ರಸ್ತೆ)ಯನ್ನು ಸಂಪರ್ಕಿಸುತ್ತದೆ.
ಡಾಬಸ್‌ಪೇಟೆ-ದೊಡ್ಡಬಳ್ಳಾಪುರ ಮಾರ್ಗ ಸಂಚಾರಕ್ಕೆ ಮುಕ್ತವಾದ ಬಳಿಕ ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಬರುವ ಭಾರೀ ವಾಹನಗಳ ಪ್ರಮಾಣ ಶೇ 40ರಷ್ಟು ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಅಲ್ಲದೇ ಬೆಂಗಳೂರು-ಕೋಲಾರ ಮಾರ್ಗದ ವಾಹನಗಳು ನಗರ ಪ್ರವೇಶ ಮಾಡದೇ ಸಾಗಲಿದ್ದು, ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.












Click it and Unblock the Notifications