Valentine's Day: ಪ್ರೇಮಿಗಳ ದಿನದಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಗುಲಾಬಿ ಹೂ ದರ ಎಷ್ಟಿತ್ತು ಗೊತ್ತಾ?
Valentine's Day: ಪ್ರತಿವರ್ಷವೂ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಹಾಗೆಯೇ ನಿನ್ನೆ ಅಂದರೆ 2025ರ ಫೆಬ್ರವರಿ 14 ದಿನದಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಈ ಆಚರಣೆಯನ್ನು ಮಾಡಲಾಯಿತು. ಕೆಲವರು ನಗರದ ಸಮೀಪವಿರುವ ತಾಣಗಳಿಗೆ ಭೇಟಿ ನೀಡಿದರೆ, ಇನ್ನೂ ಕೆಲವರು ನಗರದಲ್ಲಿರುವ ತಾಣಗಳಲ್ಲಿ ಪ್ರೇಮ ನಿವೇದನೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಈ ದಿನ ಎಷ್ಟು ಗುಲಾಬಿ ಹೂ ಮಾರಾಟವಾಗಿವೆ ಎಂದು ಇಲ್ಲಿ ತಿಳಿಯಿರಿ.
ಪ್ರೇಮಿಗಳ ದಿನದಂದು ತಮ್ಮಿಷ್ಟದವರಿಗೆ ಪ್ರೇಮ ನಿವೇದನೆ ಮಾಡಲು ಪ್ರಮುಖವಾಗಿ ಬೇಕಾಗುವುದು ಒಂದೇ ಒಂದು ವಸ್ತು, ಅದು ಗುಲಾಬಿ ಹೂ. ಈ ಹೂ ಪ್ರೀತಿಯ ಸಂಕೇತವಾಗಿದೆ. ಆದ್ದರಿಂದ ಇದನ್ನು ಫೆಬ್ರವರಿ 14ರಂದು ಎಷ್ಟೇ ದರ ಇದ್ದರೂ ಕೊಂಡುಕೊಂಡು ಬರುತ್ತಾರೆ. ಎಲ್ಲಾ ದಿನಗಳಿಗಿಂತ ಆ ದಿನ ಮಾತ್ರ ಈ ಹೂವಿಗೆ ಭಾರೀ ಡಿಮ್ಯಾಂಡ್ ಇರುತ್ತದೆ. ಹಾಗೆಯೇ ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ನಿನ್ನೆ ದಾಖಲೆ ಮಟ್ಟದಲ್ಲಿ ಈ ಹೂವುಗಳು ಮಾರಾಟವಾಗಿವೆ.

ಕಬ್ಬನ್ ಉದ್ಯಾನ, ಲಾಲ್‌ಬಾಗ್, ಹಲಸೂರು ಕೆರೆ, ಸ್ಯಾಂಕಿ ಕೆರೆ, ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಕಾಫಿ ಡೇ ಹಾಗೂ ಪಬ್‌ಗ ಸೇರಿದಂತೆ ನಗರದ ಹತ್ತಿತರ ಪ್ರಮುಖ ತಾಣಗಳಲ್ಲಿ ಯುವಜೋಡಿಗಳು ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು, ತಮ್ಮಿಷ್ಟದವರಿಗೆ ಉಡುಗೊರೆ ನೀಡುವ ಮೂಲಕ ವಿಶೇಷವಾಗಿ ಪ್ರೇಮಿಗಳ ದಿನಾಚರಣೆ ಆಚರಣೆ ಮಾಡಿಕೊಂಡಿದ್ದಾರೆ.
ಇನ್ನು ವಿವಿಧ ಉದ್ಯಾನಗಳು, ರಸ್ತೆಗಳಲ್ಲಿ ಕೈ ಹಿಡಿದು ನಡೆಯುವ ಜೋಡಿಗಳು, ಅಲ್ಲಲ್ಲಿ ಒಬ್ಬರಿಗೊಬ್ಬರು ತಾಗಿಕೊಂಡು ಕುಳಿತುಕೊಂಡ ಜೋಡಿಗಳು, ಇನ್ನೂ ಕೆಲವೆಡೆ ಜೋಡಿಗಳು ಅಪ್ಪುಗೆಯಲ್ಲಿ ಮೈಮರೆತ ದೃಶ್ಯಗಳು ಕೂಡ ಕಂಡುಬಂದಿವೆ. ಅಲ್ಲದೆ, ಗುಲಾಬಿ ಹೂ ನೀಡುವ ಮೂಲಕ ಪ್ರೇಮನಿವೇದನೆಯನ್ನೂ ಹೇಳಿಕೊಂಡಿರುವ ಘಟನೆಗಳು ಕೂಡ ನಡೆದಿವೆ. ಈ ದಿನಾಚರಣೆ ಹಿನ್ನೆಲೆ ಗುಲಾಬಿ ಹೂಗಳ ದರ ಗಗನಕ್ಕೇರಿತ್ತು. ಆದರೂ ಇದೇ ಹೂಗಳನ್ನು ಖರೀದಿ ಮಾಡಿ ಹುಡುಗರು ಹುಡುಗಿಯರಿಗೆ ತಮ್ಮ ಪ್ರೇಮನಿವೇದನೆ ವ್ಯಕ್ತಪಡಿಸಿದರು.
ಎಂಜಿ ರಸ್ತೆ ಮೆಟ್ರೋ ನಿಲ್ದಾಣ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗಳಲ್ಲಿ ಒಂದು ಗುಲಾಬಿ ಹೂವಿಗೆ 10 ರೂಪಾಯಿ, ಕೆಲವು ಸಂದರ್ಭಗಳಲ್ಲಿ ಎರಡು ಗುಲಾಬಿ ಹೂಗಳು 10 ರೂಪಾಯಿಗೆ ಮಾರಾಟ ಆಗುತ್ತಿದ್ದವು. ಆದರೆ, ಪ್ರೇಮಿಗಳ ದಿನಾಚರಣೆ ಹಿನ್ನೆಲೆ ನಿನ್ನೆ (ಫೆಬ್ರವರಿ 14) ಒಂದು ಗುಲಾಬಿ 30ಕ್ಕೆ ಮಾರಾಟ ಮಾಡಿದ ಘಟನೆ ನಡೆದಿದೆ.
ಮತ್ತೊಂದೆಡೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಹೆಣ್ಣು ಹಾಗೂ ಗಂಡು ಕತ್ತೆ ಸೇರಿಸಿ ವಿವಾಹ ಮಾಡಿಸಿದರು. ಅಲ್ಲದೆ, ಮೆರವಣಿಗೆ ಮಾಡಿಸಿ ಗಮನ ಸೆಳೆದರು. ಅಲ್ಲದೆ, "ಪ್ರೇಮಿಗಳ ದಿನ ಯಾರೂ ಪ್ರೇಮಿಗಳಿಗೆ ತೊಂದರೆ ಕೊಡದಂತೆ ಸರ್ಕಾರ ರಕ್ಷಣೆ ನೀಡಬೇಕು. ಫೆಬ್ರವರಿ 14ರಂದು ರಜೆ ಘೋಷಣೆ ಮಾಡಬೇಕು. ವಿವಾಹ ಆಗುವ ಪ್ರೇಮಿಗಳಿಗೆ 2 ಲಕ್ಷ ಪ್ರೋತ್ಸಾಹಧನ ನೀಡಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದರು," ಎಂದು ಪ್ರಜಾವಾಣಿ ವರದಿ ಮಾಡಿದೆ.
ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಈ ಬಾರಿ ಫೆಬ್ರವರಿ 14ರಂದು ಗುಲಾಬಿ ಹೂವಿಗೆ ಬೇಡಿಕೆ ಹೆಚ್ಚಾಗಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ ಫೆಬ್ರವರಿ 1ರಿಂದ 14ರ ವರೆಗೆ ಒಟ್ಟು 88 ಲಕ್ಷ ಗುಲಾಬಿ ಹೂಗಳ ಮಾರಾಟ ಆಗಿದ್ದು, ಒಟ್ಟು 11 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಐಎಫ್‌ಎಬಿ ವ್ಯವಸ್ಥಾಪಕ ನಿರ್ದೇಶಕ ಎಂ.ವಿಶ್ವನಾಥ್ ಮಾಹಿತಿ ನೀಡಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.












Click it and Unblock the Notifications