ರಾಜಕೀಯ ಫುಟ್‌ಬಾಲ್ ಅಲ್ಲ, ಚೆಸ್ ಆಟ: ಡಿಕೆಶಿ ಖಡಕ್ ಎಚ್ಚರಿಕೆ
ಬೆಂಗಳೂರು, ಸೆಪ್ಟೆಂಬರ್ 09: ರಾಜಕೀಯವೆನ್ನುವುದು ಫುಟ್‌ಬಾಲ್ ಆಟವಲ್ಲ, ಇದು ಚೆಸ್ ಆಟವಿದ್ದಂತೆ ಎಂದು ಖಡಕ್ ಡೈಲಾಗ್ ಹೊಡೆದಿರುವ ಡಿಕೆ.ಶಿವಕುಮಾರ್ ಅವರು ತಮ್ಮ ವಿರೋಧಿಗಳಿಗೆ ಸೂಕ್ಷ್ಮ ಎಚ್ಚರಿಕೆ ರವಾನಿಸಿದ್ದಾರೆ.
ಇಡಿಯಿಂದ ಬಂಧನ ಭೀತಿ ಎದುರಿಸುತ್ತಿರುವ ಅವರು, ಸುದ್ದಿಗಾರರೊಂದಿಗೆ ಮಾತನಾಡಿ 'ಯಡಿಯೂರಪ್ಪ ನನ್ನ ಆತ್ಮೀಯರು ಆದರೆ ಪಾಲಿಟಿಕ್ಸ್ ಬೇರೆ ಗೆಳೆತನ ಬೇರೆ' ಎಂದು ಖಾರವಾಗಿ ನುಡಿದಿದ್ದಾರೆ. ಇದರಿಂದ ಇಬ್ಬರು ರಾಜಕೀಯ ಸ್ನೇಹಿತರ ನಡುವೆ ವೈಷಮ್ಯದ ಗೆರೆ ಮೂಡಿದಂತೆ ಭಾಸವಾಗುತ್ತಿದೆ.
ಯಡಿಯೂರಪ್ಪ ಅವರೇ ಡಿ.ಕೆ.ಶಿವಕುಮಾರ್ ವಿರುದ್ಧ ಐಟಿಗೆ ಪತ್ರ ಬರೆದಿದ್ದರು ಎಂಬ ಸುದ್ದಿಗೆ ಮೇಲಿನಂತೆ ಪ್ರತಿಕ್ರಿಯಿಸಿದ ಡಿಕೆಶಿ, ಪುಟ್ಟಸ್ವಾಮಿ ಬರೆದ ಪತ್ರಕ್ಕೆ ಯಡಿಯೂರಪ್ಪ ಕವರ್ ಕೊಟ್ಟಿದ್ದರು, ಎನ್ನುವ ಮೂಲಕ ತಮ್ಮ ಮೇಲೆ ದೂರು ಹೋಗಲು ಯಡಿಯೂರಪ್ಪ ಸಹ ಕಾರಣ ಎಂಬುದನ್ನು ಸೂಚ್ಯಗೊಳಿಸಿದರು.

ಇಂದು ನವದೆಹಲಿಗೆ ತೆರಳುತ್ತಿರುವ ಡಿ.ಕೆ.ಶಿವಕುಮಾರ್ ಅಲ್ಲಿ ಹಿರಿಯ ವಕೀಲರೊಂದಿಗೆ ಚರ್ಚೆ ನಡೆಸಲಿದ್ದಾರೆ. ವಕೀಲರು ಹಾಗೂ ಆಡಿಟರ್‌ಗಳ ತಂಡ ಡಿಕೆ.ಶಿವಕುಮಾರ್ ಅವರಿಗಾಗಿ ಕೆಲಸ ಮಾಡುತ್ತಿದೆ, ಅವರಿಗೆ ಇಡಿ ಪ್ರಕರಣದಿಂದ ಮುಕ್ತಿದೊರಕಿಸಲು ಸರ್ವ ಪ್ರಯತ್ನ ಜಾರಿಯಲ್ಲಿದೆ ಎನ್ನಲಾಗಿದೆ.
ಈ ಮಧ್ಯೆ ಮೋದಿ ಅವರನ್ನು ಭೆಟಿಯಾಗುವ ಕರ್ನಾಟಕದ ನಿಯೋಗದಲ್ಲಿ ಡಿ.ಕೆ.ಶಿವಕುಮಾರ್ ಅವರೂ ಸಹ ಇದ್ದು, ಸಿಎಂ ಕುಮಾರಸ್ವಾಮಿ ನೃತೃತ್ವದಲ್ಲಿ ಮೋದಿ ಅವರಿಗೆ ಕೊಡಗಿಗೆ ಸಹಾಯ ಮಾಡುವಂತೆ ಮನವಿ ಸಲ್ಲಿಸಲಿದ್ದಾರೆ.
ದೆಹಲಿಯಲ್ಲಿ ಕಪಿಲ್ ಸಿಬಲ್ ಸೇರಿದಂತೆ ಹಲವು ಪ್ರಮುಖ ವಕೀಲರ ಭೇಟಿ ಮಾಡಿ ಚರ್ಚೆ ಸಹ ನಡೆಸಲಿದ್ದಾರೆ.
ಜಾರಿ ನಿರ್ದೇಶನಾಲಯವು (ಇಡಿ) ಯಾವ ಸಮಯದಲ್ಲಿ ಬೇಕಾದರೂ ಡಿ.ಕೆ.ಶಿವಕುಮಾರ್ ಅವರ ಮೇಲೆ ಪ್ರಕರಣ ದಾಖಲಿಸಬಹುದು ಎನ್ನಲಾಗಿದೆ. ಸೋಮವಾರ ಸಂಜೆ ವೇಳೆಗೆ ಡಿ.ಕೆ.ಶಿವಕುಮಾರ್ ಅವರ ಬಂಧನದ ಸಾಧ್ಯತೆಯೂ ಇದೆ.












Click it and Unblock the Notifications