Bengaluru 2nd Airport: ಈ ಜಾಗದಲ್ಲೇ ವಿಮಾನ ನಿಲ್ದಾಣ! ಪರೋಕ್ಷವಾಗಿ ಮುನ್ಸೂಚನೆ ಕೊಟ್ರಾ ಡಿ.ಕೆ ಶಿವಕುಮಾರ್?
ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದ್ದು, ಸ್ಥಳ ಯಾವುದು ಎಂದು ಅಂತಿಮಗೊಳಿಸಲು ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಿದೆ. ಡಾಬಸ್‌ಪೇಟೆ, ನೆಲಮಂಗಲ, ಮಾಗಡಿ, ಬಿಡದಿ, ಹಾರೋಹಳ್ಳಿ ಬಳಿ ಸ್ಥಳ ಗುರುತಿಸಲಾಗಿದ್ದು ಇವುಗಳಲ್ಲಿ ಯಾವುದಾದರೂ ಒಂದನ್ನು ಅಂತಿಮಗೊಳಿಸುವುದು ಖಚಿತವಾಗಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ತಮಿಳು ನಾಡು ಸರ್ಕಾರ ಮುಂದಾಗಿರುವುದು ರಾಜ್ಯ ಸರ್ಕಾರಕ್ಕೆ ಸ್ಥಳ ಅಂತಿಮಗೊಳಿಸಲು ಹೊಸ ಸವಾಲು ನೀಡಿದೆ.
ನೆಲಮಂಗಲ, ಡಾಬಸ್‌ಪೇಟೆ ಬಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೂ ಬೆಂಗಳೂರು-ಕನಕಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಹಾರೋಹಳ್ಳಿ ಸಮೀಪ ಜಾಗವನ್ನು ಗುರುತಿಸಲಾಗಿದ್ದು, ಇದು ಕೂಡ ಆಯ್ಕೆಯಾದರೆ ಅಚ್ಚರಿಪಡಬೇಕಿಲ್ಲ ಎನ್ನಲಾಗಿದೆ.

ಹಾರೋಹಳ್ಳಿ ಗುರುತಿಸಿರುವ ಸ್ಥಳವು ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ 17 ಕಿಲೋ ಮೀಟರ್ ದೂರವಿದ್ದು, ನೈಸ್ ರಸ್ತೆಯಿಂದ 35 ಕಿ.ಮೀ. ದೂರದಲ್ಲಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಬೆಂಗಳೂರು ದಕ್ಷಿಣ, ಪಶ್ಚಿಮ ಭಾಗಕ್ಕೆ ಹತ್ತಿರವಾಗಲಿದೆ.
ಜಮೀನು ಮಾರಬೇಡಿ ಅಂದಿದ್ಯಾಕೆ ಡಿಕೆ ಶಿವಕುಮಾರ್
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಿಂದಲೂ ಕನಕಪುರ ಸುತ್ತಮುತ್ತಲಿನ ಜನತೆಗೆ ಜಮೀನು ಮಾರಬೇಡಿ ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬರುತ್ತೆ ಯಾವುದೇ ಕಾರಣಕ್ಕೂ ಆಸ್ತಿಯನ್ನು ಮಾರಬೇಡಿ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕೂಡ ಅವರು ಇದೇ ಮಾತನ್ನು ಮತ್ತೊಮ್ಮೆ ಹೇಳಿದ್ದು, ಮಧ್ಯವರ್ತಿಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಆಸ್ತಿಯನ್ನು ಮಾರಬೇಡಿ. ಇಲ್ಲಿನ ಜಮೀನಿಗೆ ಚಿನ್ನದ ಬೆಲೆ ಬರುತ್ತೆ, ಮೊದಲು ಇದನ್ನೇ ಹೇಳಿದ್ದೆ ಈಗಲೂ ಅದೇ ಹೇಳುತ್ತಿದ್ದೇನೆ ಜಮೀನು ಮಾರಬೇಡಿ ಎಂದು ಮನವಿ ಮಾಡಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣದ ಮುನ್ಸೂಚನೆ?
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳನ್ನು ಕೇಳಿದ ಬಳಿಕ ಈ ಭಾಗದಲ್ಲೇ ವಿಮಾನ ನಿಲ್ದಾಣ ನಿರ್ಮಾಣವಾಗಬಹುದಾ ಎನ್ನುವ ಪ್ರಶ್ನೆಗಳು ಕೂಡ ಶುರುವಾಗಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಾರೋಹಳ್ಳಿ ಸಮೀಪ ಗುರುತಿಸಿರುವ ಜಾಗದಲ್ಲೇ ವಿಮಾನ ನಿಲ್ದಾಣಕ್ಕೆ ಡಿಸಿಎಂ ಒತ್ತಾಯಿಸಬಹುದು ಎಂದು ಕೂಡ ಹೇಳಲಾಗಿದೆ.
ವಿಮಾನ ನಿಲ್ದಾಣ ಜಾಗ ಅಂತಿಮಗೊಳಿಸಲು ಅಭಿವೃದ್ಧಿಯನ್ನು ಮಾತ್ರ ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ. ಯಾವ ನಾಯಕರೂ ಈ ವಿಚಾರದಲ್ಲಿ ಒತ್ತಾಯ ಮಾಡಿಲ್ಲ, ಇಲ್ಲಿ ಯಾವುದೇ ರಾಜಕೀಯ ಮಾಡಲ್ಲ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಈ ಮೊದಲೇ ಹೇಳಿದ್ದಾರೆ.
ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ತಮಿಳುನಾಡು ಸರ್ಕಾರ ಮುಂದಾಗಿರುವ ಕಾರಣ, ಹಾರೋಹಳ್ಳಿ ಸಮೀಪ ವಿಮಾನ ನಿಲ್ದಾಣ ಸ್ಥಾಪನೆ ಏರ್ ಟ್ರಾಫಿಕ್‌ಗೆ ಕಾರಣವಾಗಬಹುದು ಎಂದು ಕೂಡ ಹೇಳಲಾಗಿದೆ. ಆದರೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಉತ್ತೇಜನ ಕೊಡುತ್ತಿರುವ ಕಾರಣ, ಭೂಮಿಯ ಬೆಲೆ ಏರಿಕೆಯಾಗುತ್ತಲೇ ಇದೆ.
ಮಹತ್ವದ ಯೋಜನೆಗಳು ಬರಲಿವೆ ಎನ್ನುವ ಕಾರಣಕ್ಕೆ ಡಿ.ಕೆ ಶಿವಕುಮಾರ್ ಜಮೀನು ಮಾರದಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಎರಡನೇ ವಿಮಾನ ನಿಲ್ದಾಣ ಜಾಗವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.












Click it and Unblock the Notifications