ಭೀಮಣ್ಣ ಖಂಡ್ರೆ ಕನಸು; ಬಡ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಜಾಗ ಮಂಜೂರು: ಡಿ.ಕೆ.ಶಿವಕುಮಾರ್ ಭರವಸೆ
ಬೆಂಗಳೂರು: ಬಡ ಮಕ್ಕಳಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡುವ ದಿವಂಗತ ಭೀಮಣ್ಣ ಖಂಡ್ರೆ ಅವರ ಕನಸನ್ನು ನನಸಾಗಿಸಲು ಬೆಂಗಳೂರಿನಲ್ಲಿ ಜಾಗ ಮಂಜೂರು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭೀಮಣ್ಣ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೀಮಣ್ಣ ಖಂಡ್ರೆ ಅವರು ಬಡ ಮಕ್ಕಳಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಆ ಕನಸನ್ನು ಈ ಸರ್ಕಾರ ಸಾಕಾರಗೊಳಿಸಲಿದೆ ಎಂದು ತಿಳಿಸಿದರು.
ಡಾ.ಭೀಮಣ್ಣ ಖಂಡ್ರೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸಚಿವರು ಹಾಗೂ ನಾಡಿನ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಅವರು ಸಾಮಾಜಿಕ, ಶೈಕ್ಷಣಿಕ ಹಾಗೂ ವೀರಶೈವ ಸಮಾಜದ ಅಧ್ಯಕ್ಷರಾಗಿ ರಾಜ್ಯಾದ್ಯಂತ ಸಂಘಟನೆ ಬಲಪಡಿಸಿದರು. ಅವರ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ ಎಂದು ಹೇಳಿದರು.

ಭೀಮಣ್ಣ ಅವರೊಂದಿಗೆ ಕೆಲಸ ಮಾಡಿದ್ದೆ
ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಆದರೆ ಈ ಹುಟ್ಟು-ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದೇ ಮುಖ್ಯ. ಭೀಮಣ್ಣ ಖಂಡ್ರೆ ಅವರು ತಮ್ಮ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿದ್ದರು. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪರಿಷತ್ ಸದಸ್ಯರಾಗಿದ್ದಾಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ದೊರಕಿತ್ತು ಎಂದು ನೆನೆದರು.
ಇದಲ್ಲದೆ, ಅವರ ಪುತ್ರ ವಿಜಯ್ ಕುಮಾರ್ ಖಂಡ್ರೆ ಅವರು ನನ್ನೊಂದಿಗೆ ಶಾಸಕರಾಗಿ ಮತ್ತೊಬ್ಬ ಪುತ್ರ ಈಶ್ವರ್ ಖಂಡ್ರೆ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರ ಮೊಮ್ಮಗ ನಮ್ಮ ಪಕ್ಷದ ಸಂಸದರಾಗಿದ್ದಾರೆ. ಅವರು ಬಿಟ್ಟಿರುವ ಪರಂಪರೆ ಇಂದು ಕೂಡ ಮುಂದುವರಿಯುತ್ತಿದೆ ಎಂದು ಡಿಸಿಎಂ ಹೇಳಿದರು. ಭೀಮಣ್ಣ ಖಂಡ್ರೆ ಅವರ ಸಾಮಾಜಿಕ ಕಾಳಜಿ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಯನ್ನು ಸ್ಮರಿಸಿದ ಈ ನುಡಿನಮನ ಕಾರ್ಯಕ್ರಮದಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟೆಲ್ ನಿರ್ಮಾಣದ ಘೋಷಣೆ ಗಮನ ಸೆಳೆಯಿತು.
ಭೀಮಣ್ಣ ಖಂಡ್ರೆ ಅಜಾತಶತ್ರು
ಸಿಎಂ ಸಿದ್ದರಾಮಯ್ಯ ಮಾತನಾಡಿ, ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗಿದ್ದ ಖಂಡ್ರೆಯವರು, ನಂತರ ಜಿಲ್ಲೆಯ ಸಮಗ್ರ ಪ್ರಗತಿಗೆ ಗಣನೀಯ ಕೊಡುಗೆ ನೀಡಿದರು. ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾಗಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. ಅವರು ಕೈಗೊಂಡ ಕಾರ್ಯಗಳು ಇಂದು ಸಹ ಜನರ ಮನಸ್ಸಿನಲ್ಲಿ ಉಳಿದಿವೆ. ನನಗೆ ವೈಯಕ್ತಿಕವಾಗಿ ಭೀಮಣ್ಣ ಖಂಡ್ರೆಯವರೊಂದಿಗೆ ಉತ್ತಮ ಒಡನಾಡವಿತ್ತು. ಹಿರಿಯರಾಗಿ ಸದಾ ಯುವಕರನ್ನು ಪ್ರೋತ್ಸಾಹಿಸುವ ಗುಣ ಹೊಂದಿದ್ದ ಖಂಡ್ರೆಯವರು ಪಕ್ಷಾತೀತವಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅಜಾತಶತ್ರುವಾಗಿದ್ದರು ಎಂದು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಭಾಗವಹಿಸಿ, ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.












Click it and Unblock the Notifications