Induastry: ರೈತರಿಂದ ನೇರ ಭೂಮಿ ಖರೀದಿ, ಹೆಚ್ಚುವರಿ ಪರಿಹಾರದ ಪ್ರಮೇಯವಿಲ್ಲ: ಎಂಬಿ ಪಾಟೀಲ್
ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಯಾದ ಕಲಬುರಗಿಯ ಸೇಡಂ ತಾಲ್ಲೂಕಿನಲ್ಲಿ ರಾಜಶ್ರೀ ಸಿಮೆಂಟ್ಸ್ ಕಂಪನಿಗೆ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ 573 ಎಕರೆ ಮತ್ತು ಗಣಿಗಾರಿಕೆಗೆಂದು 398.23 ಎಕರೆ ಜಮೀನನ್ನು ರೈತರಿಂದ ನೇರವಾಗಿ ಖರೀದಿಸಲು 2010ರಲ್ಲೇ ಅನುಮೋದನೆ ನೀಡಲಾಗಿತ್ತು. ಹೀಗಾಗಿ, ಈಗ ಸಂತ್ರಸ್ತ ರೈತರಿಗೆ ಹೆಚ್ಚಿನ ಪರಿಹಾರ ಕೊಡಬೇಕೆಂದು ಆಗ್ರಹಿಸುವುದು ಸರಿಯಲ್ಲ ಮತ್ತು ಇದರಲ್ಲಿ ಸರ್ಕಾರದ ಪಾತ್ರವೂ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ನೆನ್ನೆಯಿಂದ ವಿಧಾನ ಪರಿಷತ್ ಅಧಿವೇಶನ ನಡೆಯುತ್ತಿದೆ. ಈ ವೇಳೆ ವಿಧಾನಪರಿಷತ್ ಸದಸ್ಯ ಡಾ.ತಳವಾರ್ ಸಾಬಣ್ಣ ಅವರು ಮಂಗಳವಾರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಸೇಡಂ ತಾಲ್ಲೂಕಿನ ಹಂಗನಹಳ್ಳಿ ಊಡಗಿ, ಹುಡಾ(ಬಿ) ಮತ್ತು ನೃಪತುಂಗ ನಗರಗಳಲ್ಲಿ ರಾಜಶ್ರೀ ಸಿಮೆಂಟ್ಸ್ ಭೂಮಿ ಕೇಳಿತ್ತು. ಅದರ ಮನವಿಯನ್ನು ಪರಿಗಣಿಸಿ 2010ರ ನ.27ರಂದು ಮತ್ತು 2011ರ ಜ.25ರಂದು ಸರ್ಕಾರ 1961ರ ಭೂ ಸುಧಾರಣೆ ಕಾಯ್ದೆಯಡಿ ಅನುಮೋದನೆ ನೀಡಿತ್ತು.

ಇದರ ನಂತರ ಕಂಪನಿಯು ಭೂ ಖರೀದಿಗೆ ಸಂಬಂಧಿಸಿದಂತೆ ರೈತರೊಂದಿಗೆ ನೇರ ಒಪ್ಪಂದ ಮಾಡಿಕೊಂಡಿತ್ತು. ಆಗ ಎಕರೆಗೆ 70 ಸಾವಿರ ರೂ. ಬೆಲೆ ಇತ್ತು. ಅಂತಹ ಸಂದರ್ಭದಲ್ಲಿ ಕಂಪನಿಯು 921 ಎಕರೆ ಖರೀದಿಸಿದ್ದು, ಪ್ರತೀ ಎಕರೆಗೆ 3.50 ಲಕ್ಷ ರೂ. ಪರಿಹಾರಧನ ನೀಡಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂತ್ರಸ್ತ ರೈತರು, ತಮ್ಮ ಕುಟುಂಬಗಳ ತಲಾ ಒಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಬೇಕೆಂಬ ಆಗ್ರಹ ಮುಂದಿಟ್ಟಿದ್ದರು. ಆಗ ಕಾರ್ಖಾನೆಯು ಉದ್ಯೋಗದ ಬದಲು ಎಕರೆಗೆ ತಲಾ 2.75 ಲಕ್ಷ ರೂ. ಹೆಚ್ಚುವರಿ ಹಣವನ್ನೇ ನೀಡಿತು. ಇದಾದ ಮೇಲೂ ಕೆಲವು ರೈತರು ಮತ್ತೂ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸಿದರು. ಆಗ ಕಾರ್ಖಾನೆಯು ಎಲ್ಲ ಸಂತ್ರಸ್ತ ರೈತರಿಗೂ ಪುನಃ ಹೆಚ್ಚುವರಿಯಾಗಿ ಎಕರೆಗೆ 1.75 ಲಕ್ಷ ರೂ. ಕೊಟ್ಟಿದೆ. ಅಂದರೆ, ಒಟ್ಟಾರೆಯಾಗಿ ಅದು ಒಂದು ಎಕರೆಗೆ ತಲಾ 8 ಲಕ್ಷ ರೂ. ಮೊತ್ತವನ್ನು ಪರಿಹಾರವಾಗಿ ನೀಡಿದೆ ಎಂದು ಅವರು ವಿವರಿಸಿದರು.
ಕಂಪನಿ ಮತ್ತು ರೈತರ ನಡುವೆಯೇ ಒಪ್ಪಂದವಾಗಿದ್ದರಿಂದ ಇದರಲ್ಲಿ 1961ರ ಭೂ ಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ. ಈ ವರ್ಷದ ಮಾರ್ಚ್‌ವರೆಗಿನ ಅಂಕಿಅಂಶಗಳ ಪ್ರಕಾರ, ಈ ಕಂಪನಿಯು ಒಟ್ಟು 1,345 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. ಇದು ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚಾಗಿದೆ ಎಂದು ಸಚಿವರು ಹೇಳಿದರು.












Click it and Unblock the Notifications