ಎಂಜಿ ರಸ್ತೆಯಲ್ಲಿ ಪ್ರತ್ಯಕ್ಷಳಾದ ಜೈಲು ಹಕ್ಕಿ ಶಶಿಕಲಾ!
ಬೆಂಗಳೂರು, ಆಗಸ್ಟ್ 21: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಹಾಗೂ ಇಳವರಸಿಗೆ ಜೈಲಿನಿಂದ ಹೊರಕ್ಕೆ ಹೋಗಲು ಅವಕಾಶ ನೀಡಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಶಶಿಕಲಾ ಅವರು ಬುರ್ಖಾ ತೊಟ್ಟು, ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಓಡಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ.

ಡಿಐಜಿ ರೂಪಾ ಅವರು ಎಸಿಬಿಯ ತನಿಖಾಧಿಕಾರಿಗಲಿಗೆ ಸಲ್ಲಿಸಿರುವ ವರದಿಯಲ್ಲಿ ಸಿಸಿಟಿವಿ ದೃಶ್ಯಗಳು ಕೂಡಾ ಇವೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಶಶಿಕಲಾ ಮತ್ತು ಇಳವರಸಿ ಬ್ಯಾಗ್ ಹಿಡಿದು ಸಾಮಾನ್ಯ ವಸ್ತ್ರದಲ್ಲಿ ಜೈಳಿನ ಒಳಗೆ ಪ್ರವೇಶಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇದು ಶಶಿಕಲಾ ಮತ್ತು ಇಳವರಸಿ ಅವರಿಗೆ ಜೈಲಿನಿಂದ ಹೊರಗೆ ಹೋಗಲು ಜೈಲಿನ ಅಧಿಕಾರಿಗಳು ಅವಕಾಶ ನೀಡಿದ್ದಾರೆ ಎಂಬುದನ್ನು ಪುಷ್ಟಿಕರಿಸುತ್ತದೆ.
ಪರಪ್ಪನ ಅಗ್ರಹಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮಗಳನ್ನು ಬಯಲಿಗೆಳೆದ ಡಿಐಜಿ ರೂಪಾ ಅವರಿಗೆ ಈ ಬಗ್ಗೆ ಮಾಹಿತಿ ಒದಗಿಸುವಂತೆ ಎಸಿಬಿ ತಂಡವು ಜುಲೈ 31ರಂದು ಸಮನ್ಸ್ ನೀಡಿತ್ತು. ಎಸಿಬಿ ಎದುರು ವಿಚಾರಣೆಗೆ ಹಾಜರಾದ ರೂಪಾ ಅವರು ತಮ್ಮ ಬಳಿ ಇದ್ದ ದಾಖಲೆ, ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದಾರೆ.
ಆದರೆ, ಶಶಿಕಲಾ ಹಾಗೂ ಇಳವರಸಿ ಅವರು ಯಾವ ಸಮಯದಲ್ಲಿ ಜೈಲಿನಿಂದ ಹೊರಕ್ಕೆ ಹೋದರು. ಎಂಜಿ ರಸ್ತೆಗೆ ಹೋಗಿ ಬಂದಿದ್ದು ನಿಜವೇ? ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಯಬೇಕಿದೆ. ಈ ಹಿಂದೆ ಶಶಿಕಲಾ ಅವರಿಗೆ ಫೈವ್ ಸ್ಟಾರ್ ಸೌಲಭ್ಯ ನೀಡಿರುವ ಬಗ್ಗೆ ಚಿತ್ರಗಳು ಹರಿದಾಡಿದ್ದನ್ನು ಸ್ಮರಿಸಬಹುದು.











Click it and Unblock the Notifications