ಲೋಕಾಯುಕ್ತರ ಮೇಲೆ ಹಲ್ಲೆ: ಇದು ಗೂಂಡಾ ರಾಜ್ಯನಾ ಎಂದ ದೇವೇಗೌಡರು
ಬೆಂಗಳೂರು, ಮಾರ್ಚ್ 07: ನ್ಯಾಯಮೂರ್ತಿಗೆ ಓರ್ವ ಬಂದು ಚಾಕುವಿನಿಂದ ಇರಿಯುತ್ತಾನೆ ಎಂದರೆ ನಾವು ಯಾವ ರಾಜ್ಯದಲ್ಲಿದ್ದೇವೆ, ಇದೇನು ಗೂಂಡಾ ರಾಜ್ಯಾನಾ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿತ ಪ್ರಕರಣವನ್ನು ಖಂಡಿಸಿರುವ ಮಾತನಾಡಿದ ಅವರು ಸರ್ಕಾರ ಲೋಕಾಯುಕ್ತವನ್ನು ಮುಗಿಸಿತು. ಇದೀಗ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಮೇಲೆಯೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಇದನ್ನು ನೋಡಿದರೆ ನಾವೆಲ್ಲಿದ್ದೇವೆ. ಇದು ಎಂತಹ ರಾಜ್ಯ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಾಯುಕ್ತರಿಗೇ ರಕ್ಷಣೆ ಇಲ್ಲದ ಮೇಲೆ ಮತ್ಯಾರಿಗೆ ಇವರು ರಕ್ಷಣೆ ಕೊಡುತ್ತಾರೆ ಇದೇನು ಗೂಂಡಾ ರಾಜ್ಯನಾ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ ಎಂದು ಕಿಡಿಕಾರಿದರು.

ಅಶೋಕ್ ಖೇಣಿ ಕಾಂಗ್ರೆಸ್ ಗೆ ಸೇರಿದ್ದರ ಬಗ್ಗೆ ಅಸೂಯೆ ಇಲ್ಲ, ಆದರೆ ಖೇಣಿ ಮೇಲೆ ಯಾವುದೇ ಕ್ರಮ ಇಲ್ಲ ಸದನ ಸಮಿತಿ ರಚನೆ ಆಗಿತ್ತು. ಸಿಬಿಐ ಅಥವಾ ಇಡಿ ಯಂತಹ ತನಿಖಾ ಸಂಸ್ಥೆ ಮೂಲಕ ನೈಸ್ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ಶಿಫಾರಸ್ಸು ಮಾಡಿದೆ.
ಹಿಂದೆ ಸ್ಪೀಕರ್ ಆಗಿದ್ದ ಕಾಗೋಡು, ರಮೇಶ್ ಕುಮಾರ್ ಅವರು ಸದನದಲ್ಲಿ ಮಾತಾನಾಡಿರುವ ಕಾಪಿ ನನ್ನ ಬಳಿ ಇದೆ. ಸಿಎಂ ಕೂಡ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಖೇಣಿ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋದಲ್ಲ, ಬೇಕಿದ್ದರೆ ಡಿಸಿಎಂ ಮಾಡಿಕೊಳ್ಳಲಿ ನನಗೇನು ಎಂದರು.
ಸದನ ಸಮಿತಿ ಕೊಟ್ಟ ವರದಿ ಅನ್ವಯ ಸಿಎಂ ಯಾವ ಹೆಜ್ಜೆ ಇಟ್ಟಿದ್ದಾರೆ , ಇದೇನಾ ಪಾರದರ್ಶಕ ಆಡಳಿತವೆಂದರೆ, ಟೋಲ್ ಕಲೆಕ್ಷನ್ ಮಾಡಕೂಡದು ಎಂದು ಸಮಿತಿ ಹೇಳಿದೆ , ಆದಾಗ್ಯೂ ಎಲ್ಲ ನಡೀತಾ ಇದೆ. ಖೇಣಿ ಕೋರ್ಟ್ ನಲ್ಲಿ ಸ್ಟೇ ತೆಗೆದುಕೊಳ್ಳುತ್ತಾರೆ. ಸರ್ಕಾರಕ್ಕೆ ಅಡ್ವೋಕೇಟ್ ಜನರಲ್ ಇಲ್ಲವಾ ಎಂದು ಪ್ರಶ್ನಿಸಿದರು.
ನಿಮ್ಮ ಮತ್ತು ಅವರ ನಡುವಿನ ಹೊಂದಾಣಿಕೆ ಏನು, ಇಲ್ಲವೇ ಎಲ್ಲವನ್ನೂ ಮಾಫಿ ಮಾಡಿದ್ದೇನೆ ಎಂದು ಹೇಳಿಬಿಡಿ, ನಾನೇನು ಜೈಲಿಗೆ ಕಳಿಸೋಕೆ ಸಾಧ್ಯಾನಾ ಎಂದು ಸಿಎಂ ಹೇಳುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.











Click it and Unblock the Notifications