ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!
ಜೀವನೋತ್ಸಾಹವೇ ಹಾಗೆ. ಎಲ್ಲಿ ಯಾವಾಗ ಪುಟಿದೇಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ವ್ಯವಸ್ಥೆಗಳು ಕಾಲ ಬುಡದಲ್ಲಿಯೇ ಇದ್ದರೂ ನಮಗೆ ಇನ್ನೇನೋ ಬೇಕು ಎನ್ನುವ ತವಕ ಕೊನೆಯಾಗುವುದೇ ಇಲ್ಲ.
ಹೊಟ್ಟೆ ತುಂಬಾ ತಿಂದು, ಗಡದ್ದಾಗಿ ನಿದ್ರೆ ಮಾಡಿ, ಅಂತರ್ಜಾಲ, ಫೇಸ್ ಬುಕ್, ಮೊಬೈಲ್ ನಲ್ಲೇ ದಿನದ ಬಹುತೇಕ ಸಮಯವನ್ನು ವೆಚ್ಚ ಮಾಡುವ ನಮಗೆ ಜೀವನೋತ್ಸಾಹ ಎಂಬ ಪದದ ಅರ್ಥ ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.
ಹೊಟ್ಟೆ ಪಾಡಿಗೆ ಹಲವಾರು ಕೆಲಸ. ಇದರಲ್ಲೇನು ವಿಶೇಷ ಇಲ್ಲ ಬಿಡಿ. ಅವರವರ ಕ್ಷೇತ್ರದಲ್ಲಿ ಅವರವರೇ ಪರಿಣಿತರು. ಸಾಕಷ್ಟು ತಪ್ಪುಗಳನ್ನು ದಿನವೂ ಮಾಡುತ್ತಿದ್ದರೂ ಬೇರೆಯವರ ಮೇಲೆ ಹೊರಿಸಿ ಕೈ ತೊಳೆದುಕೊಳ್ಳುವುದು ನಮಗೆ ಹೊಸತಲ್ಲ.

ಇಷ್ಟೆಲ್ಲಾ ಹಲುಬಲು ಕಾರಣ ಮಾಡಿಕೊಟ್ಟವಳು ಒಬ್ಬಳು ಅಜ್ಜಿ. ಬೆಂಗಳೂರು ಮಡಿವಾಳದಿಂದ ಸೆಂಟ್ ಜಾನ್ಸ್ ಕಡೆ ತಿರುಗುವಲ್ಲಿ ತರಕಾರಿ ಮಾರುಕಟ್ಟೆಯೊಂದಿದೆ. ಮಾರುಕಟ್ಟೆಯ ಒಂದು ತುದಿಗೆ ಅಜ್ಜಿಯ ಪಡ್ಡು ಅಂಗಡಿ. ಹೊಟ್ಟೆ ಪಾಡಿಗೆ ಪಡ್ಡು ಬೇಯಿಸುತ್ತಿದ್ದಾಳೆ ಎಂದು ಅಂದುಕೊಂಡರೆ ಅದು ನಿಮ್ಮ ನೋಟಕ್ಕೆ ಮಾತ್ರ ಸೀಮಿತವಾದ ಸಂಗತಿ ಎಂದು ಬಿಟ್ಟಾಕಬಹುದು.
ಅದೇನು ಹೈ ಫೈ ಅಂಗಡಿಯೇನಲ್ಲ. ಅಲ್ಲಿರುವುದು ಎರಡು ಕಟ್ಟಿಗೆ ಒಲೆ, ಅದರ ಮೇಲೆರಡು ಪಡ್ಡು ಬೇಯಿಸುವ ಕಾವಲಿ. ಆದರೆ ಈ ಪಡ್ಡಿನ ಕತೆಯ ಬೆನ್ನು ಹತ್ತಿದರೆ ಹಲವಾರು ಸಂಗತಿಗಳು ತೆರೆದುಕೊಳ್ಳುತ್ತವೆ. ಅವು ಕೆಲವರಿಗೆ ಕ್ಷುಲ್ಲಕ ಎಂದು ಅನಿಸಬಹುದು.[ಜೋಳದ ರೊಟ್ಟಿ ಎಣಗಾಯ್ ಪಲ್ಯ ಗುರೆಳ್ಳು ಚಟ್ನಿ, ವಾಹ್!]
ಕೆಲಸವೊಂದರ ನಿಮಿತ್ತ ಮಡಿವಾಳಕ್ಕೆ ಭೇಟಿ ನೀಡಿದ್ದಾಗ ಕಂಡದ್ದು ಅಜ್ಜಿಯ ಪಡ್ಡು ಸ್ಟಾಲ್. ವರದಿ ಸಂಗ್ರಹಿಸಿ ಹಸಿದಿದ್ದ ಹೊಟ್ಟೆಗೆ ಆ ಕ್ಷಣಕ್ಕೆ ಅದೇ ಮೃಷ್ಟಾನ್ನ ಭೋಜನ. ಅವಳ ಅಂಗಡಿ, ಅಂಗಡಿ ಒಳಹೊಕ್ಕಾಗ ನನಗೆ ಒಂದು ಕ್ಷಣ ನಮ್ಮ ಊರು,ಕೇರಿ,ಮನೆ ನೆನಪಾಗಿದ್ದು ಸುಳ್ಳಲ್ಲ. ದೋಸೆ ಬೇಯಿಸುತ್ತಲೇ ಎರಡು ವರ್ಷದ ಹಿಂದೆ ತೀರಿಕೊಂಡ ನನ್ನ ಅಜ್ಜಿಯೂ ಕಣ್ಣೆದುರಿಗೆ ಹಾದು ಹೋದಂಥಾಗಿದ್ದು ಸುಳ್ಳಲ್ಲ.

ಸುಮಾರು 40 ವರ್ಷಕ್ಕೂ ಅಧಿಕ ಕಾಲದಿಂದ ಅಜ್ಜಿ ಪಡ್ಡು ಬೇಯಿಸುತ್ತಿದ್ದಾಳಂತೆ. ಆಕೆ ತಮಿಳು ನಾಡಿನಿಂದ ಬಂದವಳಾದರೂ ಕನ್ನಡದ ಉಸಿರಿನಲ್ಲಿ ಬೆರೆತು ಹೋಗಿದ್ದಾಳೆ. 10 ರೂ ಗೆ 3 ಪಡ್ಡು ಅದು ದೊಡ್ಡ ಗಾತ್ರದ್ದು. ನಿಮಗೆ ನಷ್ಟ ಆಗಲ್ಲವೇ? ಎಂದು ಮಾತಿಗೆ ಕೇಳಿದೆ. ಲಾಭ ಮಾಡಿಕೊಂಡು ಮಾಡೋದಾದರೂ ಏನನ್ನು? ಜೀವನ ನಡೆದರೆ ಸಾಕು. ಇದರಲ್ಲೇ ತೃಪ್ತಿ ಇದೆ ಎನ್ನುತ್ತಾಳೆ.[ಫಾದರ್ಸ್ ಡೇಗೆ 'ಅಪ್ಪ' ಸ್ಪೆಷಲ್!]
ಅಂಗಡಿಯಲ್ಲಿ ಕಟ್ಟಿಗೆ ಹೊಗೆ ತುಂಬಿರುತ್ತೆ, ನಮ್ಮ ಗುಜರಿ ವಾಹನಗಳು ಬಿಡುವುದಕ್ಕಿಂತ ಹೆಚ್ಚಿನದೇನಲ್ಲ ಬಿಡಿ. ಐದು ನಕ್ಷತ್ರದ ಹೋಟೆಲ್ ಮಾಣಿಗಳಂತೆ ಗರಗರಿ ಬಟ್ಟೆಯನ್ನೇನೂ ಹಾಕಿಲ್ಲ. ಇರುವ ಒಬ್ಬಳೇ ಎಲ್ಲ ಕೆಲಸವನ್ನು ಸರಿದೂಗಿಸಿಕೊಂಡು ಹೋಗುತ್ತಾಳೆ. ಮೊದಲು ಹೇಳಿದಂತೆ 10 ರೂ, ಗೆ 3 ಪಡ್ಡು ಅದಕ್ಕೆ ಬೇಕಾದಷ್ಟು ಚಣ್ನಿ. ಅಂಗಡಿಯಲ್ಲಿ ಪಡ್ಡು ಬಿಟ್ಟರೇ ಬೇರೆ ಏನನ್ನು ಮಾಡಲ್ಲ.

ಹದವಾಗಿ ಕತ್ತರಿಸಿದ ಈರುಳ್ಳಿ, ಸ್ವಲ್ಪ ಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ನಮ್ಮೆದುರಿಗೆ ಅಕ್ಕಿ ಹಿಟ್ಟಿನೊಂದಿಗೆ ಕಲಸುತ್ತಾಳೆ. ಕಾವಲಿಯ ಮೇಲೆ ಪಡ್ಡು ಬಿಡುವಾಗ ಬರುವ ಶಬ್ದ ಮತ್ತು ಆಕೆ ಹುಟ್ಟಿನಿಂದ ಹಿಟ್ಟು ಬಿಡುವ ರೀತಿ ಅವಳ ಅನುಭವವನ್ನು ಸಾರಿ ಹೇಳುತ್ತವೆ.
ಮಕ್ಕಳು ಏನು ಮಾಡುತ್ತಿದ್ದಾರೆ? ಎಂದು ಕೇಳಿದರೆ ಉತ್ತರಿಸಲು ಹಿಂಜರಿದಳು. ಬಿಡದೇ ಇನ್ನೊಮ್ಮೆ ಕೇಳಿದೆ ಆಗಲೂ ಆಕೆ ಯಾವ ಉತ್ತರವನ್ನು ನೀಡಲಿಲ್ಲ. ಏನೋ ಆಗಬಾರದ್ದು ಆಗಿರಬಹುದು ಎಂದು ಅಲ್ಲಿಗೆ ಸುಮ್ಮನಾದೆ. ಕುಟುಂಬಕ್ಕೆ ಸಂಬಂಧಿಸಿದ ಹೆಚ್ಚಿನ ಸಂಗತಿ ವಿಚಾರಿಸಿವ ಗೋಜಿಗೆ ಹೋಗಲಿಲ್ಲ.[ಹೌದಪ್ಪ! 'ಅಪ್ಪ' ನಮಗೂ ಗೊತ್ತಿದೆಯಪ್ಪ!]
ಗ್ಯಾಸ್, ಸೀಮೆ ಎಣ್ಣೆ ಒಲೆಗಳೇ ಹಾಸು ಹೊಕ್ಕಾಗಿದ್ದರೂ ಅಜ್ಜಿ ಇನ್ನು ಕಟ್ಟಿಗೆ ಒಲೆಯನ್ನೇ ನೆಚ್ಚಿಕೊಂಡಿದ್ದಾಳೆ. ಇದಕ್ಕೆ ಕಾರಣ ಏನು ಎಂದು ಕೇಳಿದೆ? ಇಲ್ಲಾ ಸ್ವಾಮಿ ಕಟ್ಟಿಗೆ ಒಲೆ ರುಚಿ ಬೇರೆ ಒಲೆಗಳಲ್ಲಿ ಬರಲ್ಲ. ಅಲ್ಲದೇ ಗ್ಯಾಸ್ ಸಿಲಿಂಡರ್ ತಂದುಕೊಳ್ಳಲು ನೂರಾರು ತಾಪತ್ರಯ. ಹಾಗಾಗಿ ಹೇಗೆ ನಡೆದುಕೊಂಡು ಬರುತ್ತಿದೆಯೋ ಹಾಗೆ ಇದೆ ಎಂದು ತನ್ನ ಉತ್ತರ ಸಮರ್ಥಿಸಿಕೊಂಡಳು.
ಬೆಂಗಳೂರು ಬದಲಾವಣೆಯಾಗಿದೆಯಾ ಎಂದು ಕೇಳಿದರೆ, ಅದೇನು ಗೊತ್ತಿಲ್ಲಾ ಸ್ವಾಮಿ. ಮನುಷ್ಯರ ನಡುವಿನ ನಂಬಿಕೆ ವಿಶ್ವಾಸ ಕಡಿಮೆಯಾಗಿದೆ. ಮೊದಲು ಅಂಗಡಿ ನಡೆಸಿಕೊಂಡು ಹೋಗಲು ಯಾರ ಬಳಿಯೂ ಕೈ ಕಾಲು ಹಿಡಿಯಬೇಕಿರಲಿಲ್ಲ. ಈಗ ಒಮ್ಮೆ ನಗರಸಭೆ(ಬಿಬಿಎಂಪಿಯಾದರೂ ಆಕೆಯಿನ್ನು ನಗರಸಭೆ ಕಲ್ಪನೆಯಲ್ಲೇ ಇದ್ದಾಳೆ) ಯವರು, ಒಮ್ಮೊಮ್ಮೆ ಪೊಲೀಸರು ಕಾರಣವಿಲ್ಲದೇ ಹಣ ಕೇಳ್ತಾರೆ. ಕಟ್ಟಿಗೆ ತರೋಕು ಆಗಲ್ಲ ಎಂದು ತಮಿಳು ಮಿಶ್ರಿತ ಕನ್ನಡದಲ್ಲಿ ತನ್ನ ಸಮಸ್ಯೆಗಳನ್ನು ಬಿಚ್ಚಿಟ್ಟಳು.
ಗುಂತು ಪೊಂಗಲು, ಅಪ್ಪ, ಅಪ್ಪಂ ಎಂದೆಲ್ಲಾ ಪ್ರಾದೇಶಿಕವಾಗಿ ಪಡ್ಡಿಗೆ ಕರೆಯುತ್ತಾರೆ. ಅಜ್ಜಿಗೆ ದಿನಕ್ಕೆ ಆಗುವುದು 8 ನೂರರಿಂದ ಸಾವಿರ ರೂ. ವ್ಯಾಪಾರ. ಅವರಿಗೆ ಇವರಿಗೆ ಅಂಥ ಕೊಟ್ಟು ಉಳಿಯೋದು ಅಲ್ಪವೇ.
ಅಜ್ಜಿ ಇಷ್ಟು ವಯಸ್ಸಾದರೂ ಯಾಕೆ ಅಂಗಡಿ ನಡೆಸುತ್ತಾ ಇದ್ದೀರಾ? ಎಂದು ಕೇಳಿದರೆ ಆಕೆ ಉತ್ತರಿಸದೇ ತನ್ನ ಕಾಯಕದಲ್ಲಿ ಮುಂದುವರಿದಳು. ಆಕೆ ನೀಡಿದ್ದ ಮೂರು ಪಡ್ಡು ಅಲ್ಲಿಗೆ ಖಾಲಿಯಾಗುತ್ತಾ ಬಂದಿತ್ತು. ಆಕೆಯ ಜೀವನೋತ್ಸಾಹದ ಮುಂದೆ ನಾವಿನ್ನು ಹುಲ್ಲು ಕಡ್ಡಿ ಎಂದುಕೊಳ್ಳುತ್ತಾ ನನ್ನ ಬೈಕ್ ಏರಿದೆ.












Click it and Unblock the Notifications