Bengaluru Second International Airport: 3 ತಿಂಗಳಾದರೂ ಬಾರದ AAI ವರದಿ! ಕೇಂದ್ರದತ್ತ ರಾಜ್ಯ ಸಚಿವರು..
ಬೆಂಗಳೂರು, ಜುಲೈ 06: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಹೆಚ್ಚಿನ ಪ್ರಕ್ರಿಯೆ ಚುರುಕಾಗಿ ನಡೆದಿದ್ದವು. ಇದೀಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ವರದಿ ಸಲ್ಲಿಕೆ ಆಗದೇ ವಿಳಂಬವಾಗಿದೆ. ಜೂನ್ ಮಧ್ಯಭಾಗದಲ್ಲಿ ಇನ್ನೂ 15 ದಿನ ಕಾಲಾವಕಾಶ ಕೇಳಿದ್ದ ಎಎಐ ಅಧಿಕಾರಿಗಳು ಜುಲೈ ಹೊತ್ತಿಗೆ ವರದಿ ಸಲ್ಲಿಸುವ ನಿರೀಕ್ಷೆ ಇತ್ತು, ಅದು ಆಗಿಲ್ಲ. ಹಾಗಾದ್ರೆ ಮುಂದೇನು? ರಾಜ್ಯ ಸಚಿವರ ನಡೆ ಏನು? ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು ಸಮೀಪವೇ ಎರಡನೇ ವಿಮಾನ ನಿಲ್ದಾನ ನಿರ್ಮಿಸಬೇಕು (Bengaluru Second International Airport) ಎಂಬ ರಾಜ್ಯ ಸರ್ಕಾರದ ವೇಗಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ. ಈಗಾಗಲೇ ತಮಿಳುನಾಡು ಸರ್ಕಾರ ಕೈಗೊಂಡ ಹೊಸ ಏರ್‌ಪೋರ್ಟ್ ನಿರ್ಮಾಣ ಕುರಿತು ಎಎಐ ತಂಡ ವರದಿ ನೀಡಿದೆ. ಆದರೆ ಕರ್ನಾಟಕಕ್ಕೆ ಇನ್ನೂ ನೀಡಿಲ್ಲ. ಇದರಿಂದ ಕೊಂಚ ತಡವಾಗಿದ್ದು, ಕೇಂದ್ರ ಸಚಿವಾಲಯವನ್ನು ಕರ್ನಾಟಕ ಸರ್ಕಾರ ಸಂಪರ್ಕಿಸುವ ಸಾಧ್ಯತೆ ಇದೆ.

ಕೇಂದ್ರ ಎಎಐ ತಂಡವು ಏರ್‌ಪೋರ್ಟ್ ಯೋಜನೆಗೆ ರಾಜ್ಯ ಸರ್ಕಾರ ಗುರುತಿಸಿದ್ದ ಮೂರು ಸ್ಥಳಗಳನ್ನು ಕಳೆದ ಏಪ್ರಿಲ್ ಎರಡನೇ ವಾರವೇ ಪರಿಶೀಲಿಸಿತ್ತು. ಅಲ್ಲಿಂದ ಈವರೆಗೆ ಮೂರು ತಿಂಗಳು ಕಳೆದಿವೆ. ಇತ್ತೀಚೆಗೆ ಮತ್ತೆ ಎರಡು ವಾರ ಸಮಯ ಬೇಕೆಂದು ಕೇಳಿದ್ದ AAI ತಂಡ ಜುಲೈಗು ಮೊದಲೇ ರಾಜ್ಯ ಸರ್ಕಾರಕ್ಕೆ ಸ್ಥಳ ಅಂತಿಮಗೊಳಿಸಿ ವರದಿ ಸಲ್ಲಿಸಬೇಕಿತ್ತು. ಜುಲೈ ಮೊದಲ ವಾರ ಕಳೆದರೂ ಇನ್ನೂವರೆಗೂ ವರದಿ ಸಲ್ಲಿಕೆ ಆಗಿಲ್ಲ.
ಕೇಂದ್ರಕ್ಕೆ ಪ್ರಸ್ತಾವನೇ ಕಳುಹಿಸಿ 4 ತಿಂಗಳು
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣ ಯೋಜನೆ ರೂಪಿಸಿತ್ತು. ಅದರಂತೆ ಹಾರೋಹಳ್ಳಿ, ಕನಕಪುರ ರಸ್ತೆ ಹಾಗೂ ಕುಣಿಗಲ್ ರಸ್ತೆಯಲ್ಲಿನ ತಲಾ ಒಂದು ಸ್ಥಳ ಸೇರಿ ಒಟ್ಟು ಮೂರು ಸ್ಥಳ ಗುರುತಿಸಿತ್ತು. ಪರಿಶೀಲಿಸಿ, ಫೈನಲ್ ಮಾಡಿ ವರದಿ ಸಲ್ಲಿಕೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ನಾಲ್ಕು ತಿಂಗಳು ಕಳೆದಿವೆ. ಎಎಐ ತಂಡ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಬೇಕಿದೆ.
ಕೇಂದ್ರ ಸಚಿವರ ಭೇಟಿಗೆ ಎಂಬಿ ಪಾಟೀಲ್ ನಿರ್ಧಾರ?
ವರದಿ ಬರುವುದು ವಿಳಂಬವಾದರೆ ರಾಜ್ಯ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ಅವರು ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಹೆಚ್ಚುವರಿ 15 ದಿನ ಕೇಳಿದ್ದರೆಂದು ಸುಮ್ಮನಿದ್ದ ಸಚಿವರು ಇನ್ನೊಂದು ವಾರದಲ್ಲಿ ದೆಹಲಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಇದಕ್ಕು ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಎಂಬಿ ಪಾಟೀಲ್ ಅವರು ಚರ್ಚಿಸಿ ದೆಹಲಿಗೆ ತೆರಳುವ ನಿರೀಕ್ಷೆ ಇದೆ.

ವರದಿ ಸಲ್ಲಿಕೆ, ಅನುಮೋದನೆ ಸಿಕ್ಕರೆ ಮುಂದೇನು?
ಮೂರು ಸ್ಥಳಗಳಲ್ಲಿ ಒಂದನ್ನು ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಿದರೆ ವರದಿ ಮೂಲಕ ಅನುಮೋದನೆ ನೀಡಿದರೆ ಮುಂದೇನು? ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೂ ಈಗಾಗಲೇ ರಾಜ್ಯ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಒಪ್ಪಿಗೆ ಸಿಗುತ್ತಿದ್ದಂತೆ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುತ್ತದೆ. ಇದರೊಂದಿಗೆ ಮುಂಬೈ ಹಾಗೂ ಇತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ರಾಜ್ಯದ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
ಯಾವ ಮಾದರಿಯಲ್ಲಿ ನಿರ್ಮಾಣ ಮಾಡಬೇಕು ಎಂಬುದರ ಮಾಹಿತಿ ಕಲೆ ಹಾಕಲಿದ್ದಾರೆ. ಕೇಂದ್ರ ಒಪ್ಪಿದ ಜಾಗದಲ್ಲಿ ಯಾವ ಭಾಗದಲ್ಲಿ ಟರ್ಮಿನಲ್ ಬರಬೇಕು, ರನ್ ವೇ ಬರಬೇಕು, ಪ್ರವೇಶ, ನಿರ್ಗಮನ, ಹೆದ್ದಾರಿ ಸಂಪರ್ಕ, ಪಾರ್ಕಿಂಗ್, ಬೋರ್ಡಿಂಗ್ ಏರಿಯಾ ಹೀಗೆ ಎಲ್ಲ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಎಎಐ ವರದಿಯಲ್ಲಿ ಏನೇನಿರಲಿದೆ?
ರಾಜ್ಯ ಸರ್ಕಾರವು ಮೂರು ಸ್ಥಳಗಳ ಪರಿಶೀಲಿಸಿ ವರದಿ ನೀಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) 1.21 ಕೋಟಿ ರೂಪಾಯಿ ನೀಡಿದೆ. ಹಾಗಾದ್ರೆ ವರದಿಯಲ್ಲಿ ಏನೆಲ್ಲ ಅಂಶಗಳು ಇರಲಿವೆ. ಆಯ್ಕೆಯಾಗುವ ಸ್ಥಳದ ಹವಾಮಾನ ವರದಿ, ಹವಾಮಾನ ಭವಿಷ್ಯ, ಜಾಗಗಳ ಜಾಮಿತಿಯ ಲಕ್ಷಣ, ಭಾರತೀಯ ಸರ್ವೇ ಇಲಾಖೆ ನಕ್ಷೆ, ಯಾಕೆ ಇಲ್ಲಿ ನಿರ್ಮಿಸಿದರೆ ಉತ್ತಮ, ಈ ಜಾಗದಲ್ಲಿ ನಿರ್ಮಾಣ ಮಾಡದಿರಲು ಕಾರಣ, ಪರಿಣಾಮ ಸೇರಿ ಹಲವು ಅಂಶಗಳು ವರದಿಯಲ್ಲಿ ಇರಲಿವೆ.












Click it and Unblock the Notifications