ಮೇಕ್ ಇನ್ ಇಂಡಿಯಾದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ : ಮೋದಿ
ಬೆಂಗಳೂರು, ಫೆ. 18: ಭಾರತೀಯ ಸೇನೆ ವರ್ಷದಿಂದ ವರ್ಷಕ್ಕೆ ಹಲವು ರೀತಿಯಲ್ಲಿ ಶಕ್ತಿಯುತಗೊಳ್ಳುತ್ತಿದೆ. ಸ್ವಾವಲಂಬನೆ ಸಾಧಿಸಲು ಡಿಆರ್‌ಡಿಓ, ಇಸ್ರೋ ಸೇರಿದಂತೆ ಹಲವು ಸಂಸ್ಥೆಗಳು ಅವಿರತ ಶ್ರಮಿಸುತ್ತಿವೆ. ಆದರೂ, ಭಾರತ ಶಸ್ತ್ರಾಸ್ತ್ರ ಆಮದಿಗೆ ಪ್ರತಿ ವರ್ಷ ಹಲವು ಸಹಸ್ರ ಕೋಟಿ ರು.ಗಳನ್ನು ವ್ಯಯಿಸುತ್ತಿದೆ.
ಈ ಕುರಿತು ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2015ರಲ್ಲಿ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಖೇದ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ರಕ್ಷಣಾ ಸಾಮಗ್ರಿ ತಯಾರಿಕೆಯೇ ಮುಖ್ಯ ಸ್ಥಾನ ವಹಿಸಲಿದೆ ಎಂದು ಹೇಳಿದ್ದಾರೆ. [ಸಾಹಸಕ್ಕೆ ಮೋದಿ ಸಾಕ್ಷಿ]
ಮೋದಿ ಹೇಳಿದ್ದೇನು? : "ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ನಾವು ಜಗತ್ತಿನಲ್ಲಿಯೇ ನಂ. 1 ಸ್ಥಾನದಲ್ಲಿದ್ದೇವೆ. ಈ ಮಾತು ಹಲವರಿಗೆ ಇಂಪಾಗಿ ಕೇಳಬಹುದು. ಆದರೆ, ನಾವು ನಂ. 1 ಆಗಲು ಇಚ್ಛಿಸದ ಕ್ಷೇತ್ರವೆಂದರೆ ಇದೊಂದೇ" ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
"ಭಾರತ ತಂತ್ರಜ್ಞಾನದಲ್ಲಿ ಉನ್ನತಿ ಸಾಧಿಸುವ ಮೂಲಕ ನಮ್ಮ ಯುದ್ಧ ಸಾಮಗ್ರಿಗಳನ್ನು ನಾವೇ ತಯಾರಿಸಿಕೊಳ್ಳಬೇಕಿದೆ" ಎಂದು ತಿಳಿಸಿದ್ದಾರೆ. [ವಾಹನ ಮಾರ್ಗ ಬದಲಾವಣೆ]

"ಏರೋ ಇಂಡಿಯಾ ಕಾರ್ಯಕ್ರಮ ಕೇವಲ ರಕ್ಷಣಾ ಸಾಮಗ್ರಿಗಳ ವ್ಯಾಪಾರಿ ಮೇಳವಲ್ಲ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಾಧನಗಳ ಜಾಗತಿಕ ಪೂರೈಕೆದಾರರ ದೊಡ್ಡ ಸಭೆ" ಎಂದು ಹೇಳಿದ್ದಾರೆ.
"ಬಹು ನಿರೀಕ್ಷಿತ ರಕ್ಷಣಾ ಇಲಾಖೆಯ ಖರೀದಿ ವಿಧಾನ (DPP) ಜಾರಿಗೆ ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರಕ್ಷಣಾ ಸಾಮಗ್ರಿಗಳನ್ನು ಭಾರತದಲ್ಲಿಯೇ ತಯಾರಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ" ಎಂದು ತಿಳಿಸಿದ್ದಾರೆ. [ವಿಮಾನಗಳ ಸಾಹಸ ಚಿತ್ರಗಳಲ್ಲಿ ನೋಡಿ]
"ಇದರಿಂದ ಭಾರತದಲ್ಲಿ ಬಂಡವಾಳ ಹೂಡಿಕೆ ಹೆಚ್ಚಲಿದೆ, ಉತ್ಪಾದನೆ ವೃದ್ಧಿಸಲಿದೆ, ವಿವಿಧ ಉದ್ಯಮಗಳಿಗೆ ಬೆಂಬಲ ಸಿಗಲಿದೆ, ತಾಂತ್ರಿಕ ಮಟ್ಟವನ್ನು ಎತ್ತರಿಸಲಿದೆ ಹಾಗೂ ಭಾರತದ ಆರ್ಥಿಕತೆಯನ್ನು ವೃದ್ಧಿಸಲಿದೆ" ಎಂದು ಮೋದಿ ಹೇಳಿದರು.
ಆಮದಿಗೆ ಸಹಸ್ರಾರು ಕೋಟಿ ವ್ಯಯ : ನಮ್ಮ ಅಗತ್ಯದಲ್ಲಿ ಶೇ. 60ಕ್ಕಿಂತ ಹೆಚ್ಚು ಪ್ರಮಾಣದ ಯುದ್ಧ ಸಾಮಗ್ರಿಗಳಿಗೆ ನಾವು ಆಮದನ್ನು ಅವಲಂಬಿಸಿದ್ದೇವೆ. ನಮ್ಮ ಖಾಸಗಿ ರಕ್ಷಣಾ ಸಂಸ್ಥೆಗಳು ಅತ್ಯಂತ ಚಿಕ್ಕದಾಗಿವೆ. ಆದ್ದರಿಂದ ಆಮದಿಗೆ ಹಲವು ಸಹಸ್ರ ಕೋಟಿ ರು.ಗಳನ್ನು ಸುರಿಯುತ್ತಿದ್ದೇವೆ. ಭಾರತದಲ್ಲಿಯೇ ಯುದ್ಧ ಸಾಮಗ್ರಿ ತಯಾರಿಸಿದರೆ ಶೇ. 20ರಿಂದ 25ರಷ್ಟು ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೆ, 1ರಿಂದ 1.2 ಲಕ್ಷ ಉದ್ಯೋಗಗಳೂ ಸೃಷ್ಟಿಯಾಗುತ್ತವೆ ಎಂದು ಮೋದಿ ಅಭಿಪ್ರಾಯಪಟ್ಟರು.
ಐದು ವರ್ಷಗಳಲ್ಲಿ ದೇಶೀಯ ಉತ್ಪಾದನೆಯನ್ನು ಶೇ. 40ರಿಂದ ಶೇ. 70ಕ್ಕೆ ಹೆಚ್ಚಿಸಬೇಕು. ಆದ್ದರಿಂದಲೇ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ರಕ್ಷಣಾ ವಲಯದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಾಗುತ್ತಿದೆ ಎಂದು ತಿಳಿಸಿದರು.












Click it and Unblock the Notifications