ನಮ್ಮ ಮೆಟ್ರೋ ಸುರಂಗ ಮಾರ್ಗದಲ್ಲಿ ಸಂಚರಿಸಲು ಸಿದ್ಧರಾಗಿ
ಬೆಂಗಳೂರು, ಆಗಸ್ಟ್ 3 : ನಮ್ಮ ಮೆಟ್ರೋ ರೈಲಿನಲ್ಲಿ ಸುರಂಗ ಮಾರ್ಗದಲ್ಲಿ ಪ್ರಯಾಣಿಸುವ ಬೆಂಗಳೂರಿಗರ ಕನಸು ಶೀಘ್ರ ನನಸಾಗಲಿದೆ. ಬಿಎಂಆರ್‌ಸಿಎಲ್ ಕಬ್ಬನ್ ಪಾರ್ಕ್ ನಿಲ್ದಾಣದಿಂದ ಮಾಗಡಿ ರಸ್ತೆಯವರೆಗಿನ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಸಿದ್ಧತೆ ನಡೆಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಸೆಪ್ಟೆಂಬರ್‌ನಲ್ಲಿ ಕಬ್ಬನ್ ಪಾರ್ಕ್ ನಿಲ್ದಾಣದಿಂದ ಮಾಗಡಿ ರಸ್ತೆ ವರೆಗಿನ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಆರಂಭವಾದರೆ, ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯನ್ನು ಕೆಲವೇ ನಿಮಿಷಗಳಲ್ಲಿ ತಲುಪಬಹುದಾಗಿದೆ. [ಚಿತ್ರಗಳು : ಸುರಂಗ ಮಾರ್ಗದಲ್ಲಿ ಓಡಿದ ನಮ್ಮ ಮೆಟ್ರೋ]

ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ಮಾರ್ಗವಾದ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಸುಮಾರು 18 ಕಿ.ಮೀ ಉದ್ದವಿದ್ದು, 15ಕ್ಕೂ ಹೆಚ್ಚು ನಿಲ್ದಾಣಗಳನ್ನು ಒಳಗೊಂಡಿದೆ. ಸುರಂಗ ಮಾರ್ಗ ಮತ್ತು ಫ್ಲೈ ಓವರ್ ಮೇಲೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸಲಿದೆ. ['ನಮ್ಮ ಮೆಟ್ರೋ ಬೇಗ ಕಟ್ರೋಗೆ' 3 ವರ್ಷ]
ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ : ಬಿಎಂಆರ್‌ಸಿಲ್ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ. ಪರೀಕ್ಷಾರ್ಥ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಸುರಂಗ ಮಾರ್ಗದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. [ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ಕಂಡರೆ ಸಂಸದ ಪ್ರತಾಪ್ ಗೆ ತಿಳಿಸಿ]

ಪರೀಕ್ಷಾರ್ಥ ಸಂಚಾರ ಪೂರ್ಣಗೊಳ್ಳಲು ಸುಮಾರು 4 ತಿಂಗಳ ಕಾಲಾವಕಾಶ ಬೇಕಾಗಿದೆ. ನಂತರ ಮೆಟ್ರೋ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಕಬ್ಬನ್ ಪಾರ್ಕ್ ನೆಲದಡಿಯ ನಿಲ್ದಾಣದಲ್ಲಿ ಕಟ್ಟಡ ಸೇರಿದಂತೆ ಇತರ ಕಾರ್ಯಗಳು ಪೂರ್ಣಗೊಳ್ಳುತ್ತಿವೆ. ಇತ್ತ ವಿಧಾನಸೌಧದಲ್ಲಿ ಮುಂಭಾಗದ ನಿಲ್ದಾಣವೂ ಪೂರ್ಣಗೊಳ್ಳುತ್ತಾ ಬಂದಿದೆ.
ಪ್ರಾಯೋಗಿಕ ಸಂಚಾರ ನಡೆಯುತ್ತಿದೆ : ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ವರೆಗಿನ ಫ್ಲೈ ಓವರ್ ಮಾರ್ಗದಲ್ಲಿ ಈಗಾಗಲೇ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ರೈಲ್ವೆ ಇಲಾಖೆ ಅನುಮತಿ ಪತ್ರ ನೀಡಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಪ್ರಮುಖ ನಿಲ್ದಾಣಗಳು : ಬೈಯಪ್ಪನಹಳ್ಳಿಯಿಂದ ಹೊರಡುವ ರೈಲು ಇಂದಿರಾ ನಗರ, ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್, ಸಿಟಿ ರೈಲ್ವೆ ನಿಲ್ದಾಣ, ಮಾಗಡಿ ರಸ್ತೆ, ವಿಜಯನಗರ, ದೀಪಾಂಜಲಿ ನಗರ ಸೇರಿದಂತೆ ವಿವಿಧ ನಿಲ್ದಾಣಗಳ ಮೂಲಕ ಮೈಸೂರು ರಸ್ತೆ ತಲುಪಲಿದೆ. [ಚಿತ್ರಗಳು ಕಬ್ಬನ್ ಪಾರ್ಕ್ ನಿಲ್ದಾಣ]












Click it and Unblock the Notifications