ಫುಡ್ ಡೆಲಿವರಿ ಬಾಯ್ ಮೇಲೆ ದರ್ಪ ತೋರಿದ ಮಹಿಳೆ ಕೆಲಸದಿಂದ ವಜಾ
ಬೆಂಗಳೂರು, ಡಿ. 24: ಫುಡ್ ಡೆಲಿವರಿ ಬಾಯ್ ಕತ್ತು ಪಟ್ಟಿ ಹಿಡಿದು ಹೊರ ತಳ್ಳಿದ ಮಹಿಳಾ ಉದ್ಯೋಗಿ ಕೆಲಸಕ್ಕೆ ಕೋಕ್. ವೆಬ್ ತಾಣದಲ್ಲಿಯೇ ನಕಲಿ ಅಂಕಪಟ್ಟಿ ಮಾರಾಟ ಜಾಲ ಪತ್ತೆ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣವಿದು.
ಫುಡ್ ಡೆಲಿವರಿ ಬಾಯ್‌ಗೆ ಹಿಂಸೆ:
ಫುಡ್ ಡೆಲಿವರಿ ಮಾಡುವುದು ತಡವಾಗುತ್ತಿದೆ ಎಂದು ಕೇಳಿದ ಮಾತ್ರಕ್ಕೆ ಡೆಲಿವರಿ ಬಾಯ್ ಕುತ್ತಿಗೆ ಹಿಡಿದು ಹೊರ ತಳ್ಳಿರುವ ಘಟನೆ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ.
ಸಂಜಯ್ ರೆಸ್ಟೋರೆಂಟ್ ನಿಂದ ಹೊರದೂಡಲ್ಪಟ್ಟ ಫುಡ್ ಡೆಲಿವರಿ ಬಾಯ್. ಫುಡ್ ಡೆಲಿವರಿ ಅರ್ಡರ್ ಪಡೆದಿದ್ದ ಸಂಜಯ್ ಬೇಗ ಕೊಡುವಂತೆ ವೈಟ್ ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್‌ನ ಸಿಬ್ಬಂದಿಯನ್ನು ಕೇಳಿದ್ದಾರೆ. ಇಷ್ಟಕ್ಕೆ ಸಿಟ್ಟುಗೊಂಡ ಮಹಿಳಾ ಉದ್ಯೋಗಿ ಫುಡ್ ಡೆಲಿವರಿ ಬಾಯ್ ಕುತ್ತಿಗೆ ಹಿಡಿದು ರೆಸ್ಟೋರೆಂಟ್‌ನಿಂದ ಹೊರ ಹಾಕಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವೂ ನಡೆದಿದೆ.

ಈ ವಿಷಯ ತಿಳಿದು ರೆಸ್ಟೋರೆಂಟ್‌ಗೆ ಲಗ್ಗೆ ಹಾಕದ ಕನ್ನಡ ಪರ ಸಂಘಟನೆಗಳು ಡೆಲಿವರಿ ಬಾಯ್‌ನನ್ನು ಹೊರ ದಬ್ಬಿದ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸಿದವು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಗಮನಿಸಿದ ರೆಸ್ಟೋರೆಂಟ್ ಮಾಲೀಕರು, ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಮ್ಯಾನೇಜರ್ ಪ್ರಶಾಂತ್ ಆರೋಪಿತ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಬಾಗಿಲಿಗೆ ನಕಲಿ ಅಂಕಪಟ್ಟಿ ಕೊರಿಯರ್:
ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಪತ್ತೆ ಮಾಡಿದ ನಕಲಿ ಅಂಕಪಟ್ಟಿ ಜಾಲದ ಸ್ಫೋಟಕ ಸತ್ಯಗಳನ್ನು ಹೊರ ಹಾಕಿದ್ದಾರೆ. ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಿಸಿ ಹಣ ಪಾವತಿಸಿದವರ ಮನೆ ಬಾಗಲಿಗೆ ನಕಲಿ ಅಂಕಪಟ್ಟಿ ರವಾನಿಸುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದಾರೆ.

ಇಬ್ಬರು ಯುವಕರು ನಕಲಿ ಅಂಕಪಟ್ಟಿ ಆಧರಿಸಿ ವಿದೇಶಕ್ಕೆ ಹಾರಲು ಯತ್ನಿಸಿದ್ದರು. ಅನುರಾಗ್ ಮತ್ತು ಶಾಜಿ ಎಂಬಾತ ಇಮಿಗ್ರೇಷನ್ ವಿಭಾಗದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಗುಲ್ಬರ್ಗಾ ವಿಶ್ವ ವಿದ್ಯಾಲಯದ ಅಂಕಪಟ್ಟಿ ಪಡೆದಿದ್ದ ಇಬ್ಬರನ್ನು ವಿಚಾರಣೆ ನಡೆಸಿದಾಗ ನಕಲಿ ಅಂಕಪಟ್ಟಿಯ ದೊಡ್ಡ ಜಾಲ ಹೊರ ಬಂದಿದೆ.
ಕಿರಾತಕರು ಒನ್ ಟೈಮ್ ಸೆಟ್ಟಿಂಗ್ ಡಾಟ್ ಕಾಮ್ (onetimesetting.com) ವೆಬ್ ತಾಣದ ಮೂಲಕ ನೋಂದಣಿ ಮಾಡಿಸಿ ಹಣ ಪಾವತಿಸಿದವರಿಗೆ ನಕಲಿ ಅಂಕಪಟ್ಟಿಗಳನ್ನು ರವಾನಿಸುತ್ತಿದ್ದರು. ಅಲ್ಲದೇ ಯಲಹಂಕ ಎಜುಕೇಷನ್ ಕನ್ಸಲ್ಟೆನ್ಸಿ ಎಂಬ ಸಂಸ್ಥೆ ತೆರೆದು ಅನುರಾಗ್ ಗಿರಾಕಿಗಳನ್ನು ಹಿಡಿದು ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ. ವೆಬ್ ತಾಣದಲ್ಲಿ ಯಾವ ಅಂಕಪಟ್ಟಿ ಬೇಕು ಎಂದು ನೋಂದಣಿ ಮಾಡಿಸಿ ಹಣ ಪಾವತಿಸಿದರೆ ಕೊರಿಯರ್ ಮೂಲಕ ಅಂಕಪಟ್ಟಿ ರವಾನಿಸುತ್ತಿದ್ದರು. ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಪಡೆಯುತ್ತಿದ್ದರು. ದೇಶದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳ ಅಂಕಪಟ್ಟಿಗಳನ್ನು ನಕಲಿ ಮಾಡಿ ಮಾರಾಟ ಮಾಡಿದ್ದು, ಇದರ ಮೂವರು ಕಿಂಗ್ ಪಿನ್ ಗಳು ತಲೆ ಮರೆಸಿಕೊಂಡಿದ್ದಾರೆ. ಮೂವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.












Click it and Unblock the Notifications