ಕುಳ್ಳ ದೇವರಾಜ್ ವಿರುದ್ಧ ಮತ್ತೊಂದು ಎಫ್‌ಐಆರ್: ಸ್ಟೇಷನ್‌ನಿಂದ ತಪ್ಪಿಸಿಕೊಂಡವನು ರಸ್ತೆ ಅಪಘಾತದಲ್ಲಿ ಅಂತ್ಯ
ಬೆಂಗಳೂರು ಡಿ. 20: ಲೋಕಾಯುಕ್ತ ಕಚೇರಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ವಿರುದ್ಧ ಎಫ್ಐಆರ್. ಕುಳ್ಳ ದೇವರಾಜ್ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲು. ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು. ಇದು ಬೆಂಗಳೂರು ಅಪರಾಧ ಸುದ್ದಿಯ ವಿವರ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ವಿರುದ್ಧ ಎಫ್ಐಆರ್:
ನಿವೇಶನ ವಿವಾದ ವಿಚಾರವಾಗಿ ಲೋಕಾಯುಕ್ತ ಕಚೇರಿ ಎದುರು ವಿಷಯ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ವಿಧಾನಸೌಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಂಜುನಾಥರೆಡ್ಡಿ ವಿರುದ್ಧ ಕೇಸು ದಾಖಲಾಗಿದೆ.
ಎರಡು ದಿನದ ಹಿಂದೆ ಲೋಕಾಯುಕ್ತ ಸ್ವಾಗತಕಾರರ ಕಚೇರಿ ಬಳಿ ಬಂದಿದ್ದ ಮಂಜುನಾಥ ರೆಡ್ಡಿ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ನಡುವೆ ಮಂಜುನಾಥ್ ಹೋರಾಟ ನಡೆಸುತ್ತಿದ್ದು, ಇದೀಗ ಆತ್ಮಹತ್ಯೆಗೆ ಯತ್ನಿಸಿದ ಅತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಮ್ಮ ತಂದೆ ಖರೀದಿಸಿದ್ದ ನಿವೇಶನವನ್ನು ಕೇಶವ್ ಎಂಬುವರು ಕಬಳಿಸಿದ್ದಾರೆ. ನಾನು ಸಾವನ್ನಪ್ಪಿದ್ದರೆ, ಕೇಶವ್ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಮಂಜುನಾಥರೆಡ್ಡಿ ವಿರುದ್ಧ ವಿಧಾನಸೌಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕುಳ್ಳ ದೇವರಾಜ್ ವಿರುದ್ಧ ಮತ್ತೊಂದು ಎಫ್ಐಆರ್:
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರೌಡಿ ಶೀಟರ್ ಕುಳ್ಳ ದೇವರಾಜ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಜೀವ ಬೆದರಿಕೆ ಹಾಗೂ ಜಾತಿನಿಂದನೆ ಮಾಡಿದ ಆರೋಪದಡಿ ಯಲಹಂಕ ನ್ಯೂಟೌನ್ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ನಿವೇಶನ ವಿಚಾರವಾಗಿ ಕೃಷ್ಣಮೂರ್ತಿ ಎಂಬುವರಿಗೆ ಧಮ್ಕಿ ಹಾಕಿದ್ದ ದೇವರಾಜ್, ಕೆಲ ದಿನಗಳ ಹಿಂದಷ್ಟೇ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ.

ಠಾಣೆಯಿಂದ ಎಸ್ಕೇಪ್ ಆದ ವ್ಯಕ್ತಿ ಅಪಘಾತದಲ್ಲಿ ಸಾವು:
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿ ಠಾಣೆಯಿಂದ ತಪ್ಪಿಸಿಕೊಂಡು ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಶಕ್ತಿವೇಲು ಮೃತಪಟ್ಟ ವ್ಯಕ್ತಿ. ಈ ಸಂಬಂಧ ಕೆ.ಆರ್.ಪುರಂ ಸಂಚಾರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪತ್ನಿಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಪತಿ ಶಕ್ತಿವೇಲು ಎಂಬಾತನನ್ನು ಕೆ.ಆರ್. ಪುರಂ ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಠಾಣೆಯ ಲಾಕಪ್‌ನಲ್ಲಿದ್ದ ಶಕ್ತಿವೇಲು ಶೌಚಾಲಯಕ್ಕೆ ಹೋಗಬೇಕು ಎಂದು ಕೇಳಿದ್ದಾನೆ. ಲಾಕಪ್‌ನಿಂದ ಹೊರ ಬಿಟ್ಟ ಕೂಡಲೇ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಕೆ.ಆರ್. ಪುರಂ ಮೇಲ್ಸೇತುವೆ ಬಳಿ ಓಡಿ ಹೋಗುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.ಕೆ.ಆರ್. ಪುರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications