ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ 600 ಗ್ರಾಂ ಚಿನ್ನಾಭರಣ ದರೋಡೆ!
ಬೆಂಗಳೂರು, ಜ. 01: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವು. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ 600 ಗ್ರಾಂ ಚಿನ್ನಭರಣ ದೋಚಿದ ದರೋಡೆಕೋರರು. ನೈಟ್ ರೌಂಡ್ಸ್ ನಲ್ಲಿ ಪೊಲೀಸರ ಜತೆ ಹೊಸ ವರ್ಷ ಆಚರಿಸಿದ ಪೊಲೀಸ್ ಆಯುಕ್ತ ಕಮಲಪಂತ್. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ ಪುಂಡರು.
ಪೊಲೀಸರ ಸೋಗಿನಲ್ಲಿ ರಾಬರಿ:
ನಾವು ತಿಪಟೂರು ಪೊಲೀಸರು ಎಂದು ಹೇಳಿಕೊಂಡು ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ಪಿಸ್ತೂಲಿನಿಂದ ಹೆದರಿಸಿ 600 ಗ್ರಾಂ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಾಲಕ್ಷ್ಮೀ ಲೇಔಟ್ ವೆಂಕಟೇಶ್ ಎಂಬುವರ ಮನಗೆ ಇಬ್ಬರು ಪೊಲೀಸರ ಸೋಗಿನಲ್ಲಿ ಹೋಗಿದ್ದಾರೆ.
ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿದ್ದಾರೆ. ನಾವು ತಿಪಟೂರು ಪೊಲೀಸರು ಎಂದು ಹೇಳಿಕೊಂಡು ಮನೆಯೊಳಗೆ ನುಗ್ಗಿದ್ದಾರೆ. ನಿಮ್ಮ ಮನೆಯಲ್ಲಿ ಶೋಧ ಮಾಡಬೇಕಿದೆ ಎಂದು ನಂಬಿಸಿದ್ದು, ಆನಂತರ ಪಿಸ್ತೂಲು ಹಣೆಗೆ ಇಟ್ಟು ಹೆದರಿಸಿದ್ದಾರೆ. ಯಾರಿಗೂ ಪೋನ್ ಮಾಡದಂತೆ ಬೆದರಿಕೆ ಹಾಕಿ ಮನೆಯಲ್ಲಿದ್ದ 600 ಗ್ರಾಂ ಚಿನ್ನ, ನಗದು ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಹೊಸ ವರ್ಷ ಆಚರಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮಹಾಲಕ್ಷ್ಮೀ ಲೇಔಟ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವೈದ್ಯರ ಸೋಗಿನಲ್ಲಿ ಜೆ.ಪಿ. ಪಾರ್ಕ್ ನ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಕೊರೊನಾ ಲಸಿಕೆ ಕೊಡುವ ಸೋಗಿನಲ್ಲಿ ದರೋಡೆ ಮಾಡಿದ್ದರು. ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ ದೋಚಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದರು. ಆರೋಪಿಗಳನ್ನು ಹಿಡಿಯಲು ಹೋಗಿದ್ದ ಪಿಎಸ್ಐ ಮೇಲೆ ಕಿರಾತಕರು ಹಲ್ಲೆ ಮಾಡಿದ್ದರು. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇದೀಗ ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿರುವುದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.
ಕಾರು ಅಪಘಾತದಲ್ಲಿ ಬೈಕ್ ಸವಾರ ಸಾವು:
ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ಬೆಳಗಿನ ಜಾವ ಮಡಿವಾಳ ಸಮೀಪ ಸಂಭವಿಸಿದೆ. ಕುಡಿದ ಅಮಲಿನಲ್ಲಿ ಕಾರು ಚಲಾವಣೆ ಮಾಡಿದ ಹಿನ್ನೆಲೆಯಲ್ಲಿ ಅಪಘಾತ ನಡೆದಿದೆ ಎನ್ನಲಾಗಿದೆ.

ಪುಂಡರಿಗಾಗಿ ಶೋಧ:
ಹೊಸ ವರ್ಷದ ಆಚರಣೆ ನೆಪದಲ್ಲಿ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿದ ಪುಂಡರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ನಾಗರಭಾವಿ ರಿಂಗ್ ರೋಡ್ ನಲ್ಲಿ ನಾಲ್ಕು ಬೈಕ್ ನಲ್ಲಿ ಪುಂಡರು ವ್ಹೀಲಿಂಗ್ ಮಾಡಿ ಪುಂಡಾಟ ತೋರಿದ್ದಾರೆ. ಒಂದೊಂದು ಬೈಕ್ ನಲ್ಲಿ ಮೂವರು ಕೂತು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಚಮಕ್ ಕೊಟ್ಟಿದ್ದಾರೆ. ಈ ಕುರಿತು ಸೆರೆಯಾದ ದೃಶ್ಯ ಆಧರಿಸಿ ಪುಂಡರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸರಳವಾಗಿ ಹೊಸ ವರ್ಷ ಆಚರಿಸಿದ ಪಂತ್:
Recommended Video
ಪೊಲೀಸರ ಜತೆ ಕೇಕ್ ಕತ್ತರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಸರಳವಾಗಿ ನೂತನ ವರ್ಷವನ್ನು ಆಚರಿಸಿದರು. ನೈಟ್ ರೌಂಡ್ಸ್ ನಲ್ಲಿದ್ದ ಕಮಲಪಂತ್ ಹೊಸ ವರ್ಷದ ಸಂಭ್ರಮದ ವೇಳೆ ಲಾಲ್‌ಬಾಗ್ ಸೌತ್ ಗೇಟ್ ಸಮೀಪ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸರ ಜತೆ ಹೊಸ ವರ್ಷ ಅಚರಿಸಿಕೊಂಡಿದ್ದಾರೆ. ಕೇಕ್ ಕತ್ತರಿಸಿ ಸಿಬ್ಬಂದಿಗೆ ತಿನ್ನಿಸುವ ಮೂಲಕ ಕಮಲಪಂತ್ ಸರಳವಾಗಿ ಹೊಸ ವರ್ಷ ಆಚರಿಸಿದ್ದಾರೆ.












Click it and Unblock the Notifications