ಬೆಂಗಳೂರಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಡಿವಾಣ: ಜಿಬಿಎ ವಾರ್ನಿಂಗ್
ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಇಂಜಿನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲನೆ ಸಭೆಯನ್ನು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ಸೋಮವಾರ (ನವೆಂಬರ್ 24)ರಂದು ನಡೆಸಿದ್ದು, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ PoW, SCP/TSP, ನಗರೋತ್ಥಾನ ಹಾಗೂ ಸರ್ಕಾರಿ ಅನುದಾನದಡಿ ಕೈಗೊಂಡಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ ಕಾಮಗಾರಿಗಳನ್ನು ಅದಷ್ಟು ಬೇಗ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರದಿಂದ ಅನುಮೋದನೆಗೊಂಡಿರುವ ಪರಿಷ್ಕೃತ ಕ್ರಿಯಾಯೋಜನೆ ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಅನ್ನು ಈಗಾಗಲೇ ಆಹ್ವಾನಿಸಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕಾಗಿ ಶೀಘ್ರದಲ್ಲಿ ಕೈಗೊಂಡು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಾರ್ಕ್ (MARCS- Multi-Agency road cutting coordination system) ನೊಂದಾಯಿಸದೇ ರಸ್ತೆ ಅಗೆಯುವಂತಿಲ್ಲ ಎನ್ನುವ ಸೂಚನೆಯನ್ನೂ ಇದೇ ಸಂದರ್ಭದಲ್ಲಿ ಕೊಡಲಾಗಿದೆ. ವಿವಿಧ ಸಂಸ್ಥೆಗಳಾದ ಬಿ.ಡಬ್ಲ್ಯೂ.ಎಸ್.ಎಸ್.ಬಿ, ಬೆಸ್ಕಾಂ, ಕೆಪಿಟಿಸಿಎಲ್,ಟಿ.ಎಸ್.ಪಿ, ಗೇಲ್ ಇತರೆ ಸಂಸ್ಥೆಗಳು ಸಾರ್ವಜನಿಕ ಸೇವೆಗಳನ್ನು ನೀಡಲು ರಸ್ತೆಗಳನ್ನು ಅಗೆದು ಹಾಳುಮಾಡುವುದನ್ನು ತಡೆಯಲು ಹಾಗೂ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ಮಾರ್ಕ್ಸ್ ನಲ್ಲಿ ನೋಂದಾಯಿಸದೇ ವಿನಾಃ ರಸ್ತೆ ಕತ್ತರಿಸಲು ಅನುಮತಿ ನೀಡಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಹಾಕಿ
ಇನ್ನು ಇದೇ ಸಂದರ್ಭದಲ್ಲಿ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ ಮುಂದೆ ಯಾವುದೇ ಹೊಸ ಕಟ್ಟಡ ನಕ್ಷೆ ಮಂಜೂರಾತಿ ಇಲ್ಲದೆ ಅಥವಾ ಅನುಮೋದಿತ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಾಣವಾಗದಂತೆ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಸಲುವಾಗಿ ಸಂಬಂಧಿತ ಅಧಿಕಾರಿಗಳಿಗೆ ಈಗಾಗಲೇ ಅಧಿಕಾರ ಪ್ರತ್ಯಾಯೋಜನೆ ಮಾಡಿದ್ದು, ಅನಧಿಕೃತ ಕಟ್ಟಡಗಳ ನಿರ್ಮಾಣದ ಬಗ್ಗೆ ದೂರು ಬಂದಲ್ಲಿ ಸಂಬಂಧಿತ ಅಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಗುತ್ತಿಗೆ ಆಧಾರದ ಮೇಲೆ ನಿಯೋಜನೆಗೊಂಡಿರುವ ಟ್ರ್ಯಾಕ್ಟರ್ ಮತ್ತು ಸಿಲ್ಟ್ ತಂಡವನ್ನು ಸಂಪರ್ಕವಾಗಿ ಬಳಸಿಕೊಂಡು ವಾರ್ಡ್ ವ್ಯಾಪ್ತಿಯ ಎಲ್ಲಾ ಡ್ರೈನ್ ಗಳಲ್ಲಿ ಸಿಲ್ಟ್ ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.
ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಂದಾಜು 200 ಕೀ.ಮೀ ಉದ್ದದ ರಾಜಕಾಲುವೆಗಳನ್ನು ಸುಸ್ಥಿಯಲ್ಲಿಡುವ ಸಲುವಾಗಿ AMC ಸೇವೆಯನ್ನು ಸದ್ಬಳಕೆ ಮಾಡಿಕೊಂಡು ಕಾಲುವೆಗಳಲ್ಲಿ ಸಿಲ್ಟ್ ತುಂಬದಂತೆ ಕ್ರಮವಹಿಸಿ, ಜನರು ರಾಜಕಾಲುವೆಗಳಿಗೆ ಪ್ಲಾಸ್ಟಿಕ್, ಹಳೆ ವಸ್ತುಗಳು ಇತರೆ ತ್ಯಾಜ್ಯಗಳನ್ನು ಹಾಕದಂತೆ ಅಗತ್ಯವಿರುವ ಕಡೆ ಚೈನ್ಲಿಂಕ್ ತಂತಿ ಬೇಲಿ ಅಳವಡಿಸಲು ಹಾಗೂ ಅಂತವರ ವಿರುದ್ಧ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಲು ಮತ್ತು ರಾಜಕಾಲುವೆಗಳ ಬಳಿ ಬ್ಲಾಕ್ ಸ್ಪಾಟ್ ಆಗುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಲು ಹಾಗೂ ಕಾಲುವೆಯಲ್ಲಿ ಒಳಚರಂಡಿ ನೀರು ಹರಿಯದಂತೆ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಸೌಂದರ್ಯಕ್ಕೆ ಧಕ್ಕೆಯಾಗಿರುವ ಅನಧಿಕೃತ ಜಾಹೀರಾತುಗಳನ್ನು ನಿರಂತರ ಕಾರ್ಯಾಚರಣೆ ಮೂಲಕ ತೆರವು ಮಾಡಿ,ಜಾಹೀರಾತು ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ವಿರುದ್ಧ KOPD ಕಾಯ್ದೆ ಅನ್ವಯ ದಂಡ ವಿಧಿಸಿ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ.
ORR ಪ್ರವೇಶ ಮತ್ತು ನಿರ್ಗಮನ ಸುಗಮಗೊಳಿಸಿ
ORRನಲ್ಲಿ ಅವೈಜ್ಞಾನಿಕ ಪ್ರವೇಶ ಮತ್ತು ನಿರ್ಗಮನದಿಂದಾಗಿ ಸಂಚಾರಿ ದಟ್ಟಣೆ ಉಂಟಾಗುತ್ತಿದ್ದು, ಸಂಚಾರಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯವಿರುವ ಕಡೆ ಮಾರ್ಪಾಡು ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಹೇಳಿದ್ದಾರೆ.












Click it and Unblock the Notifications