ಕೋವಿಡ್ ಪರೀಕ್ಷೆ ಟಾರ್ಗೆಟ್; ತಳಮಟ್ಟದ ಚಿತ್ರಣವೇ ಬೇರೆ
ಬೆಂಗಳೂರು, ಆಗಸ್ಟ್ 25: ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಸರ್ಕಾರ ಪ್ರತಿದಿನ ಇಷ್ಟು ಪರೀಕ್ಷೆಗಳನ್ನು ನಡೆಸಬೇಕು ಎಂದು ಟಾರ್ಗೆಟ್ ನೀಡುತ್ತಿದೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಷ್ಟು ಪರೀಕ್ಷೆ ಮಾಡಲು ಸಾಧ್ಯವಿಲ್ಲ.
Recommended Video
ಒಂದು ಕಡೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಸಿಬ್ಬಂದಿಗಳ ಸಂಖ್ಯೆ ಕಡಿಮೆ. ಮತ್ತೊಂದು ಕಡೆ ಸೋಂಕಿತರ ಜೊತೆ ಸಂಪರ್ಕದಲ್ಲಿರುವ ಜನರು ಕೋವಿಡ್ ಪರೀಕ್ಷೆಗೆ ಒಳಪಡಲು ಹಿಂಜರಿಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 140 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೊದಲು 250 ಪರೀಕ್ಷೆಗಳನ್ನು ಮಾಡಬೇಕು ಎಂದು ಹೇಳಲಾಗಿತ್ತು. ಬಳಿಕ ಅದನ್ನು 500ಕ್ಕೆ ಏರಿಕೆ ಮಾಡಲಾಗಿದೆ. ಆದರೆ, ಇದು ಸಾಧ್ಯವಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.

ಸೋಂಕಿತರ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳು ಪರೀಕ್ಷೆಗೆ ಒಳಪಡಬೇಕು. ಆದರೆ, ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ಪರೀಕ್ಷೆ ಕೈಗೊಂಡಾಗ ಬೇರೆ ಜನರು ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಭಂದಿಗಳ ಕೊರತೆ ಇದೆ. ಒಂದು ಕಡೆ ಸ್ವ್ಯಾಬ್ ಸಂಗ್ರಹ ಮಾಡಲು ಅನುಭವ ಹೊಂದಿರುವ ಸಿಬ್ಬಂದಿ ಕೊರತೆ ಇದೆ. ಮತ್ತೊಂದು ಕಡೆ ಲ್ಯಾಬ್ ಟೆಕ್ನಿಶಿಯನ್ ಕೊರತೆ ಇದೆ. ಇಂತಹ ಸನ್ನಿವೇಶದಲ್ಲಿ 500 ಮಾದರಿಗಳ ಪರೀಕ್ಷೆ ಹೇಗೆ? ಎಂಬುದು ಸಿಬ್ಬಂದಿಗಳ ಪ್ರಶ್ನೆ.
ಬಿಬಿಎಂಪಿ ಅಧಿಕಾರಿಗಳು ಮಾದರಿಗಳ ಪರೀಕ್ಷೆಗೆ ಟಾರ್ಗೆಟ್ ನೀಡಲಾಗಿದೆ ಎಂಬುದನ್ನು ತಳ್ಳಿ ಹಾಕಿದ್ದಾರೆ. "ಈ ರೀತಿಯ ಯಾವುದೇ ಟಾರ್ಗೆಟ್ ನೀಡಿಲ್ಲ. ಆದರೆ, ಅಧಿಕಾರಿಗಳಿಗೆ ಸೋಂಕಿನ ಲಕ್ಷಣ ಇರುವ ವ್ಯಕ್ತಿಗಳ ಪರೀಕ್ಷೆ ನಡೆಸಲು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
ತಳ ಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಟಾರ್ಗೆಟ್ ನೀಡಲಾಗುತ್ತಿದೆ. ಇದರಿಂದಾಗಿ ಸಿಬ್ಬಂದಿಗಳ ಮೇಲೆ ಒತ್ತಡ ಬೀಳುತ್ತಿದೆ ಎಂದು ಸಿಬ್ಬಂದಿಗಳು ಆರೋಪಗಳನ್ನು ಮಾಡುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಸೋಮವಾರ 1918 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 109793ಕ್ಕೆ ಏರಿಕೆಯಾಗಿದೆ.












Click it and Unblock the Notifications