ಕೋವಿಡ್ ಹೆಚ್ಚಳ: ಮಕ್ಕಳು, ಗರ್ಭಿಣಿಯರಿಗಾಗಿ ಬೆಂಗಳೂರಿನಲ್ಲಿ 2 ಆಸ್ಪತ್ರೆ ಮೀಸಲು
ಬೆಂಗಳೂರು, ಜನವರಿ 11: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ದಾಖಲು ಪ್ರಮಾಣವೂ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಮಹಿಳೆಯರಿಗಾಗಿ ಬೆಂಗಳೂರಿನ ಎರಡು ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ.
ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕೊರೊನಾ ಕಾಣಿಸಿಕೊಳ್ಳುತ್ತಿರುವ ಕಾರಣ ಇದೀಗ ಎರಡು ಆಸ್ಪತ್ರೆಗಳನ್ನು ಕೋವಿಡ್ಗೆ ಮೀಸಲಿಡಲಾಗಿದ್ದು, ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣ ದಾಖಲಾಗುತ್ತಿರುವ ಕಾರಣಕ್ಕಾಗಿ ಇದೀಗ ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಮತ್ತು ಘೌಸಿಯಾ ಹೆರಿಗೆ ಆಸ್ಪತ್ರೆಯನ್ನು ಶಿಶು ವೈದ್ಯಕೀಯ ಮತ್ತು ಗರ್ಭಿಣಿ ಮಹಿಳೆಯ ಪ್ರಕರಣಗಳ ಚಿಕಿತ್ಸೆಗಾಗಿ ಕೋವಿಡ್-19 ಆಸ್ಪತ್ರೆ ಎಂದು ಘೋಷಿಸಲಾಗಿದೆ.

ಮಕ್ಕಳು ಮತ್ತು ಮಹಿಳೆಯರಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಈ ಎರಡು ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯ ಒದಗಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿಗೆ ಸಾವಿರಾರು ಜನರು ತುತ್ತಾಗುತ್ತಿದ್ದಾರೆ. ಹೀಗಾಗಿ ರೆಡ್ ಜೋನ್ ನಿರ್ಮಾಣವಾಗಿದೆ.

ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ. ಶರವೇಗದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ತಡೆಗೆ ರಾಜ್ಯ ಸರ್ಕಾರ ಕಠಿಣ ನಿರ್ಬಂಧಗಳನ್ನು ಹೇರಿದೆ. ವಾರಾಂತ್ಯದ ಕರ್ಫ್ಯೂ ಹೇರುವುದರೊಂದಿಗೆ ಕೊರೊನಾ ತಡೆಗೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ.
ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕೊರೊನಾ ತಡೆಗೆ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರ್ ರೂಮ್‌ಗೆ ಈಗ ರಾಷ್ಟ್ರಪ್ರಶಸ್ತಿ ಲಭಿಸಿದೆ. ಜೊತೆಗೆ COVID-19 ವಾರ್ ರೂಮ್ ತಂಡಕ್ಕೆ ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಅಭಿನಂದಿಸಿದ್ದಾರೆ.
5 ತಿಂಗಳ ಮಗುವಿನ ತುರ್ತು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿ
ಕೊರೊನಾ ನಿರ್ವಹಣೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಳಸುವ ವಿಭಾಗದಲ್ಲಿ ಈ ಪ್ರಶಸ್ತಿ ದೊರೆತಿದೆ. ಹೈದರಾಬಾದ್‌ನಲ್ಲಿ ನಡೆದ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಲನದಲ್ಲಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನೀಶ್ ಮೌದ್ಗಿಲ್ ತಂಡಕ್ಕೆ ರಾಷ್ಟ್ರಪ್ರಶಸ್ತಿ ದೊರೆತಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುನೀಶ್ ಮೌದ್ಗಿಲ್ ಅವರು, ''ಭಾರತದಲ್ಲಿ ರಾಕೆಟ್ ವೇಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜನವರಿ 1 ರಿಂದ 7 ರವರೆಗೆ ಕಳೆದ ಏಳು ದಿನಗಳಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ವೇಗವಾಗಿ ಹರಡುತ್ತಿವೆ.
ವಿಶ್ಲೇಷಣೆಯ ಪ್ರಕಾರ ಲಸಿಕೆ ಹಾಕದ ಜನರು ತೀವ್ರ ನಿಗಾ ಘಟಕಕ್ಕೆ ದಾಖಲಾಗುವ ಸಾಧ್ಯತೆ 30 ಪಟ್ಟು ಹೆಚ್ಚಿದ್ದು ಲಸಿಕೆ ಹಾಕದ ಜನರು ಲಸಿಕೆ ಹಾಕಿದವರಿಗಿಂತ 10 ಪಟ್ಟು ಹೆಚ್ಚು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದರು. ಜೊತೆಗೆ ಕೊರೊನಾ ತಡೆಗೆ ಲಸಿಕೆ ಸಹಾಯ ಮಾಡುತ್ತದೆ. ಅರ್ಹ ಪ್ರತಿಯೊಬ್ಬರು ಅದನ್ನು ತೆಗೆದುಕೊಳ್ಳಬೇಕು,'' ಎಂದು ಹೇಳಿದರು.
ಇ-ಆಡಳಿತ ವಿಧಾನವು ಪರಿಸ್ಥಿತಿಯನ್ನು ಪರಿಣಾಕಾರಿಯಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 'ಕೋವಿಡ್ ವಾರಿಯರ್ಸ್‌ಗೆ ನಾವು ಸಪೋರ್ಟ್ ನೆಟ್‌ವರ್ಕ್ ಆಗಿದ್ದೇವೆ. ಸರಿಯಾದ ಸಮಯಕ್ಕೆ ಸೂಕ್ತ ಮಾಹಿತಿಯನ್ನು ನೀಡಿ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ದಿನದ 24 ಗಂಟೆ ಕೆಲಸ ಮಾಡುತ್ತಿದ್ದು, ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಹೆಚ್ಚಿನ ಸಿಬ್ಬಂದಿಗಳು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ'' ಎಂದು ತಿಳಿಸಿದರು.
2020ರ ಮಾರ್ಚ್‌ನಲ್ಲಿ ಕೋವಿಡ್ ಮೊದಲ ಅಲೆ ರಾಜ್ಯಕ್ಕೆ ಅಪ್ಪಳಿಸಿತ್ತು. ಮೊದಲ ಅಲೆ ಆರಂಭವಾದ 2- 3 ದಿನಗಳಲ್ಲಿ ವಾರ್‌ರೂಮ್ ಸ್ಥಾಪಿಸಲಾಗಿತ್ತು. ಕೊರೊನಾ ವಾಚ್ ಮೊಬೈಲ್ ಅಪ್ಲಿಕೇಶನ್ ಅನ್ನು ಮೊದಲು ರಚಿಸಲಾಯಿತು. ಸೋಂಕಿತರ ಸಂಪರ್ಕ ಪತ್ತೆ ಹಚ್ಚುವಿಕೆಗಾಗಿ ಅಪ್ಲಿಕೇಶನ್ ಅನ್ನು ಬಳಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ.












Click it and Unblock the Notifications