ಕೊರೊನಾ ಮೃತ ದೇಹದ ಶವಸಂಸ್ಕಾರ: ಡಿಕೆಶಿ ಕೊಟ್ಟ ಸಲಹೆ ಕಡೆ ಗಮನಕೊಡಿ
ಬೆಂಗಳೂರು, ಏಪ್ರಿಲ್ 20: ತಾಂಡವಾಡುತ್ತಿರುವ ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
"ಶವ ಸಂಸ್ಕಾರಕ್ಕೆ 35 ಸಾವಿರ ರೂಪಾಯಿ ಖರ್ಚು ಮಾಡಬೇಕು ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಅಷ್ಟು ದುಡ್ಡು ಕೊಟ್ಟರೂ ಕೆಲವು ಸ್ಮಶಾನಗಳಲ್ಲಿ ಜಾಗ ಸಿಗುತ್ತಿಲ್ಲ. ನಾನು ಸರಕಾರಕ್ಕೆ ಸಲಹೆಯೊಂದನ್ನು ನೀಡುತ್ತೇನೆ"ಎಂದು ಡಿಕೆಶಿ ಹೇಳಿದ್ದಾರೆ.
"ಕಂದಾಯ ಸಚಿವರೇ, ಬೆಂಗಳೂರು ಸುತ್ತಮುತ್ತ ಅಷ್ಟೊಂದು ಜಮೀನುಗಳಿವೆ. ಹೊರವಲಯದಲ್ಲಿ ಹತ್ತು ಎಕರೆ ಜಮೀನನ್ನು ಶವಸಂಸ್ಕಾರಕ್ಕೆ ತಾತ್ಕಾಲಿಕವಾಗಿ ಯಾಕೆ ಕೊಡಬಾರದು"ಎನ್ನುವ ಸಲಹೆಯನ್ನು ಡಿಕೆಶಿ ನೀಡಿದ್ದಾರೆ.

"ನಮ್ಮ ದೇಶದ ಆಸ್ತಿ ಏನಂದರೆ, ನಮ್ಮ ಸಂಸ್ಕೃತಿ, ನಮ್ಮ ಕುಟುಂಬದವರನ್ನು ಗೌರವಯುತವಾಗಿ ಕಳುಹಿಸಿ ಕೊಡುವುದು ಕರ್ತವ್ಯವಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕು. ಅದಕ್ಕೆ ಸರಕಾರ ಅವಕಾಶ ಮಾಡಿಕೊಡಬೇಕು"ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
"ಸೌದೆನೋ, ಕರೆಂಟೋ ಏನಾದರೂ ಬೆಂಗಳೂರಿನ ಏಳು ಕಡೆ ಹತ್ತತ್ತು ಎಕರೆ ಜಮೀನನ್ನು ತುರ್ತಾಗಿ ಮತ್ತು ತಾತ್ಕಾಲಿಕವಾಗಿ ನೀಡಿ. ಶವಸಂಸ್ಕಾರಕ್ಕೆ ಎಷ್ಟು ಜನರ ಮಾರ್ಗಸೂಚಿಯನ್ನು ನೀಡುತ್ತೀರೋ, ಅದರ ಪ್ರಕಾರ ಆ ಕೆಲಸ ನಡೆಯಲಿ"ಎಂದು ಡಿಕೆಶಿಯವರು ಸರಕಾರವನ್ನು ಒತ್ತಾಯಿಸಿದ್ದಾರೆ.
"ಇಂತಹ ಸಣ್ಣ ಕೆಲಸವನ್ನು ಮಾಡಲಾಗದ ಇದೂ ಒಂದು ಸರಕಾರನಾ, ಇದನ್ನೂ ನಮ್ಮ ಬಾಯಿಯಿಂದ ಕೇಳಿಸಿಕೊಳ್ಳಬೇಕಾ. ಇದೊಂದು ಬೇಸಿಕ್ ಕಾಮನ್ ಸೆನ್ಸ್ ಅಲ್ಲವೇ"ಎಂದು ಡಿ.ಕೆ.ಶಿವಕುಮಾರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications