Commercial LPG Cylinder: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ದಿಢೀರ್ ಏರಿಕೆ, ಇಲ್ಲಿದೆ ಹೊಸ ದರ
ಮೇ 1 ರಂದು (ಇಂದು) ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ, ಅದರಲ್ಲೂ ವಿಶೇಷವಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಭಾರಿ ಆಘಾತ ನೀಡುವಂತಹ ನಿರ್ಧಾರ ಪ್ರಕಟಿಸಿವೆ. 19 ಕೆಜಿಯ ಕಮರ್ಷಿಯಲ್ ಎಲ್ ಪಿ ಜಿ ಸಿಲಿಂಡರ್ ಬೆಲೆ ಯಲ್ಲಿ ಬರೋಬ್ಬರಿ 993 ರೂಪಾಯಿಗಳ ಭಾರಿ ಏರಿಕೆಯಾಗಿದೆ. ಇಂದಿನಿಂದಲೇ ಈ ಹೊಸ ದರಗಳು ಜಾರಿಗೆ ಬಂದಿದ್ದು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 3,071.50 ರೂಪಾಯಿಗಳಿಗೆ ತಲುಪಿದೆ. ಇದು ಕಮರ್ಷಿಯಲ್ ಸಿಲಿಂಡರ್ ಬಳಸುವ ಸಣ್ಣ ಹಾಗೂ ದೊಡ್ಡ ವ್ಯಾಪಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಆದರೆ, ಈ ಭಾರಿ ಬೆಲೆ ಏರಿಕೆಯ ನಡುವೆಯೂ ಸಾಮಾನ್ಯ ಜನರಿಗೆ ಕೊಂಚ ನೆಮ್ಮದಿಯ ವಿಚಾರವೆಂದರೆ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 14.2 ಕೆಜಿ ತೂಕದ ಗೃಹಬಳಕೆಯ ಸಿಲಿಂಡರ್ ದರಗಳು ಹಿಂದಿನ ತಿಂಗಳಂತೆಯೇ ಯಥಾಸ್ಥಿತಿಯಲ್ಲಿ ಮುಂದುವರಿದಿವೆ. ಇದರಿಂದಾಗಿ ಮನೆಗಳಲ್ಲಿ ಅಡುಗೆ ಅನಿಲ ಬಳಸುವ ಜನಸಾಮಾನ್ಯರ ಜೇಬಿಗೆ ಸದ್ಯಕ್ಕೆ ಕತ್ತರಿ ಬಿದ್ದಿಲ್ಲ.

ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿನ ಈ ಏರಿಕೆ ಇದೇ ಮೊದಲಲ್ಲ. ಕಳೆದ ತಿಂಗಳಷ್ಟೇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳು ಮತ್ತು 5 ಕೆಜಿ ಮಿನಿ ಸಿಲಿಂಡರ್‌ಗಳೆರಡರ ಬೆಲೆಗಳನ್ನು ಹೆಚ್ಚಿಸಿದ್ದವು. ಕಳೆದ ತಿಂಗಳು 5 ಕೆಜಿ ಸಿಲಿಂಡರ್ ಬೆಲೆಯಲ್ಲಿ 51 ರೂಪಾಯಿ ಏರಿಕೆಯಾಗಿದ್ದರೆ, 19 ಕೆಜಿ ಸಿಲಿಂಡರ್ ಬೆಲೆಯು 195 ರೂಪಾಯಿಯಿಂದ 218 ರೂಪಾಯಿಗಳವರೆಗೆ ದುಬಾರಿಯಾಗಿತ್ತು. ಇದೀಗ ಮತ್ತೆ ಮೇ 1ರಂದು ಬರೋಬ್ಬರಿ 993 ರೂ. ಏರಿಕೆ ಮಾಡಲಾಗಿದ್ದು, ವಾಣಿಜ್ಯ ಬಳಕೆಯ ಗ್ಯಾಸ್ ದರ ಗಗನಕ್ಕೇರಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಧಿಕೃತ ಮೂಲಗಳ ಪ್ರಕಾರ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಭೌಗೋಳಿಕ-ರಾಜಕೀಯ ಬೆಳವಣಿಗೆಗಳು, ವಿಶೇಷವಾಗಿ ಅಮೆರಿಕ-ಇರಾನ್-ಇಸ್ರೇಲ್ ನಡುವಿನ ಸಂಘರ್ಷವೇ ಈ ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ 'ಹಾರ್ಮುಜ್ ಜಲಸಂಧಿ'ಯಲ್ಲಿ ಉಂಟಾಗಿರುವ ಅಡೆತಡೆಗಳಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತವು ತನ್ನ ಎಲ್‌ಪಿಜಿ ಅಗತ್ಯಗಳ ಸುಮಾರು ಶೇ 60 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದರಿಂದ, ಅಲ್ಲಿನ ಯುದ್ಧದ ವಾತಾವರಣವು ನೇರವಾಗಿ ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಕಮರ್ಷಿಯಲ್ ಸಿಲಿಂಡರ್ ಬೆಲೆಗಳ ವಿವರ ಇಲ್ಲಿದೆ:
ಬೆಂಗಳೂರು - 3,154.00 ರೂಪಾಯಿ
ದೆಹಲಿ - 3,071.50 ರೂಪಾಯಿ
ಕೋಲ್ಕತ್ತಾ - 3,202.00 ರೂಪಾಯಿ
ಚೆನ್ನೈ - 3,237.00 ರೂಪಾಯಿ
ಮುಂಬೈ - 3,024.00 ರೂಪಾಯಿ
ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೊಡೆತ
ಕಮರ್ಷಿಯಲ್ ಎಲ್ ಪಿ ಜಿ ಸಿಲಿಂಡರ್ ಬೆಲೆ ದಿಢೀರ್ 3,000 ರೂಪಾಯಿಗಳ ಗಡಿ ದಾಟಿರುವುದರಿಂದ ಹೋಟೆಲ್, ಕ್ಯಾಂಟೀನ್, ಬೇಕರಿ ಮತ್ತು ರೆಸ್ಟೋರೆಂಟ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ವ್ಯಾಪಾರಸ್ಥರ ನಿರ್ವಹಣಾ ವೆಚ್ಚ ವಿಪರೀತ ಹೆಚ್ಚಾಗುವುದರಿಂದ ಮುಂಬರುವ ದಿನಗಳಲ್ಲಿ ಹೋಟೆಲ್ ಊಟ, ತಿಂಡಿಗಳ ಬೆಲೆಯೂ ದುಬಾರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ












Click it and Unblock the Notifications