ರಾಹುಲ್ ಗಾಂಧಿ ಅನರ್ಹತೆ: ಬಿಜೆಪಿ ಷಡ್ಯಂತ್ರದ ವಿರುದ್ಧ ಮೌನ ಪ್ರತಿಭಟನೆ ನಡೆಸುತ್ತೇವೆ ಎಂದ ಡಿಕೆ ಶಿವಕುಮಾರ್
ಬೆಂಗಳೂರು, ಜುಲೈ. 10: "ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಬಿಜೆಪಿ ನಡೆಸುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಜುಲೈ 12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, "ಈ ಮೌನ ಪ್ರತಿಭಟನೆಯಲ್ಲಿ ನಾನು, ಮುಖ್ಯಮಂತ್ರಿಗಳು ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಎಲ್ಲಾ ಮಂತ್ರಿಗಳು, ಸಂಸದರು, ಶಾಸಕರು, ಕಾರ್ಯಕರ್ತರು, ಬ್ಲಾಕ್ ಕಾಂಗ್ರೆಸ್, ಮುಂಚೂಣಿ ಘಟಕದ ಅಧ್ಯಕ್ಷರು, ಕೌನ್ಸಿಲರ್‌ಗಳು ಭಾಗವಹಿಸುತ್ತೇವೆ" ಎಂದಿದ್ದಾರೆ.

'ರಾಹುಲ್ ಗಾಂಧಿ ಅವರು ಎಂದಿಗೂ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತಂದಿಲ್ಲ. ರಾಜ್ಯದಲ್ಲಿ ಅವರು ಮಾಡಿದ ಭಾಷಣವನ್ನೇ ಮುಂದಿಟ್ಟುಕೊಂಡು ರಾಜಕೀಯವಾಗಿ ಅವರನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಅದನ್ನು ನಾವು ಖಂಡಿಸುತ್ತೇವೆ. ದೇಶದ ಪರವಾಗಿ, ಸತ್ಯದ ಪರವಾಗಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಅವರ ಪರವಾಗಿ ಇಡೀ ದೇಶ ಹಾಗೂ ವಿರೋಧ ಪಕ್ಷಗಳು ನಿಲ್ಲುವ ಸಂದೇಶ ರವಾನಿಸಬೇಕಾಗಿದೆ" ಎಂದು ಹೇಳಿದ್ದಾರೆ.
ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಜನರಿಂದ ಸಿಕ್ಕ ಪ್ರೀತಿ ವಿಶ್ವಾಸ, ಕರ್ನಾಟಕ ರಾಜ್ಯದಲ್ಲಿ ಅವರಿಗೆ ಸಿಕ್ಕ ಭವ್ಯ ಯಶಸ್ಸು ಸಹಿಸಲಾಗದೇ ರಾತ್ರೋರಾತ್ರಿ ಅವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ. ರಾಜ್ಯದಲ್ಲಿ ಅವರು ಯಾತ್ರೆ ಮಾಡಿದ ಮಾರ್ಗದ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಮುಂದೆ ಅವರಿಗೆ ದೇಶದ ಪೂರ್ವದಿಂದ ಪಶ್ಚಿಮದವರೆಗೆ ಯಾತ್ರೆ ಮಾಡುವ ಸಲಹೆ ಬಂದಿದ್ದು, ಅವರ ಈ ಯಶಸ್ಸು, ಜನಪ್ರಿಯತೆ ಸಹಿಸಲಾಗದೇ ಬಿಜೆಪಿಯವರು ಈ ಷಡ್ಯಂತ್ರ ರೂಪಿಸಿದ್ದಾರೆ" ಎಂದಿ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಈ ಹಿನ್ನೆಲೆ ಎಐಸಿಸಿಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೇಶದ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಇನ್ನು, ಲೋಕಸಭಾ ಚುನಾವಣೆಗ ಎತಯಾರಾಗುತ್ತಿರುವ ವಿಪಕ್ಷಗಳು ಎರಡನೇ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಿವೆ. ಈ ಬಗ್ಗೆ ಮಾತನಾಡಿರುವ ಅವರು ಜುಲೈ 17- 18ರಂದು ದೇಶದ ವಿರೋಧ ಪಕ್ಷಗಳ ನಾಯಕರ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನ ನೀಡಿದ್ದಾರೆ. ಅವರು ಕೂಡ ಭಾಗವಹಿಸುವ ಸಂದೇಶ ಬಂದಿದೆ. ಈ ಸಭೆಯಲ್ಲಿ ಭಾಗವಹಿಸುತ್ತಿರುವ ದೇಶದ ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಎಲ್ಲಾ ರಾಜ್ಯಗಳಲ್ಲಿ ಮೌನ ಸತ್ಯಾಗ್ರಹವನ್ನು ಆಚರಿಸಲಿದೆ. ಎಲ್ಲ ರಾಜ್ಯ ಸಮಿತಿಗಳು ಬುಧವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ರಾಜ್ಯದ ರಾಜಧಾನಿಯ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ನಡೆಸಲಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಭಾನುವಾರ ಪ್ರಕಟಿಸಿದ್ದರು.
2019 ರಲ್ಲಿ ಕೋಲಾರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ "ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ" ಎಂಬ ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೋಡಲಾಗಿತ್ತು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿಯವರು ಶಿಕ್ಷೆಗೊಳಗಾದ ನಂತರ ಮಾರ್ಚ್ 23 ರಂದು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ವಿಚಾರಣಾ ನ್ಯಾಯಾಲಯ, ಸೆಷನ್ಸ್ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್‌ನಲ್ಲಿ ರಾಹುಲ್ ಗಾಂಧಿಯವರ ದೋಷಾರೋಪಣೆಗೆ ತಡೆಯಾಜ್ಞೆ ಪಡೆಯಲು ಅವರ ವಕೀಲರು ವಿಫಲರಾಗಿದ್ದಾರೆ.












Click it and Unblock the Notifications