ಮಾದಿಗರಿಗೆ ಸಿಗದ ಸಚಿವ ಸ್ಥಾನ: ಮಾಜಿ ಸಚಿವ ಆಂಜನೇಯ ಆಕ್ರೋಶ
ಬೆಂಗಳೂರು, ಸೆಪ್ಟೆಂಬರ್ 29: ಕರ್ನಾಟಕದ ಇತಿಹಾಸದಲ್ಲಿ ಈವರೆಗೂ ರಚನೆಯಾಗಿರುವ ಎಲ್ಲಾ ಸರ್ಕಾರಗಳಲ್ಲಿ ಪರಿಶಿಷ್ಟ ಪಂಗಡದ ಎಡ ಸಮುದಾಯಗಳ ಪೈಕಿ ಮಾದಿಗ ಸಮುದಾಯದ ಒಬ್ಬರು ಸಚಿವರಾಗಿರುತ್ತಿದ್ದರು.
ಇದೇ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮಾದಿಗರಿಗೆ ಸ್ಥಾನ ಕೊಡದೆ ಅನ್ಯಾಯವೆಸಗಲಾಗಿದೆ ಎಂದು ಮಾಜಿ ಸಚಿವ ಎಚ್ ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಮಾದಿಗರಿಗೆ ಈ ಬಾರಿ ಅವಕಾಶವನ್ನು ಕೊಡಲೇ ಬೇಕು, ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ಮಾದಿಗರಿದ್ದಾರೆ.

ಇಷ್ಟು ಜನಸಂಖ್ಯೆಯುಳ್ಳ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲದಿರುವುದು ಇದೇ ಮೊದಲ ಬಾರಿ, ಈ ಅನ್ಯಾಯವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಹೈಮಾಂಡ್ ಸರಿಪಡಿಸುತ್ತದೆ ಎಂಬ ವಿಶ್ವಾಸವಿದೆ ಇಲ್ಲದಿದ್ದರೆ ನಮ್ಮ ಸಮುದಾಯದ ಜನರಿಗೆ ಅನ್ಯಾಯವಾಗುತ್ತದೆ ಎಂದರು.
ರಾಜ್ಯಸಭಾ ಸದಸ್ಯ ಎನ್ ಹನುಮಂತಯ್ಯ ಮಾತನಾಡಿ, ಸಚಿವ ಸಂಪುಟದಲ್ಲಿ ರೂಪಾ ಶಶಿಧರ್ ಅವರಿಗೆ ಅವಕಾಶ ನೀಡಬೇಕು ಅದರಿಂದ ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ರಾಜ್ಯಸರ್ಕಾರ ಸದಾಶಿವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.












Click it and Unblock the Notifications