Namma Metro: ಸಿಹಿ ಸುದ್ದಿ, ಬೆಂಗಳೂರು- ತುಮಕೂರು ಹಸಿರು ಮಾರ್ಗದ ಸಂಚಾರಕ್ಕೆ ಗ್ರೀನ್ ಸಿಗ್ನಲ್
ಬೆಂಗಳೂರು, ಅಕ್ಟೋಬರ್ 05: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಖುಷಿ ಸುದ್ದಿ ನೀಡಿದೆ. ಹಸಿರು ಮಾರ್ಗವಾದ ಬೆಂಗಳೂರು ತುಮಕೂರು ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ CMRS ತಂಡ ಸುರಕ್ಷತಾ ತಪಾಸಣೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿಸ್ತರಣೆ ಮಾರ್ಗದಲ್ಲಿ ಮೆಟ್ರೋ ರೈಲುಗಳು ಓಡಲಿವೆ.
ನಮ್ಮ ಮೆಟ್ರೋ ರೇಷ್ಮೆ ಸಂಸ್ಥೆಯಿಂದ ನಾಗಸಂದ್ರ ವರೆಗಿನ ಹಸಿರು ಮಾರ್ಗವನ್ನು ನಾಗಸಂದ್ರದಿಂದ ಮಾದವರವರೆಗೆ 3.7ಕಿಲೋ ಮೀಟರ್ ವಿಸ್ತರಣೆ ಮಾಡಲಾಗಿದೆ. ಹಲವು ಅಡೆತಡೆ ಬಳಿಕ ಮಾರ್ಗವು ಕಾಮಗಾರಿ ಮುಗಿಸಿ ಯಶಸ್ವಿ ಪ್ರಾಯೋಗಿಕ ಸಂಚಾರ ಕಂಡಿತ್ತು. ಇದೀಗ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಎರಡು ದಿನಗಳ ತಪಾಸಣೆ ನಡೆಸಿ ಮೆಟ್ರೋ ಓಡಿಸಲು ಅನುಮೋದನೆ ನೀಡಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಮಾದಾವರದಿಂದ ನಾಗಸಂದ್ರ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ನಿಗದಿಯಂತೆ ಅಕ್ಟೋಬರ್ 3 ಮತ್ತು 4 ರಂದು ಪರಿಶೀಲನೆ ನಡೆಸಿದರು. ವಿಸ್ತರಣೆ ಮಾರ್ಗದಲ್ಲಿ ರೈಲು ಓಡಾಟದ ಸುರಕ್ಷತೆ ಖಚಿತ ಪಡಿಸಿಕೊಂಡರು. ಸದರಿ ಮಾರ್ಗದ ವಾಣಿಜ್ಯ ಸೇವೆಗೆ ಅನುಮತಿ ದೊರಕಿದೆ ಎಂದು ಬಿ.ಎಂ.ಆರ್.ಸಿ.ಎಲ್
ಮುಖ್ಯ ಸಾರ್ವಜನಿಕ ಸಂಪರ್ಕ ಆಧಿಕಾರಿ ತಿಳಿಸಿದ್ದಾರೆ.
ಸದ್ಯ ಈ ವಿಸ್ತರಣೆ ಮೆಟ್ರೋ ಮಾರ್ಗದಿಂದ ಮಾದವರ ಹಾಗೂ ನೆಲಮಂಗಲ ಕಡೆಯಿಂದ ಬರುವ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ಸಂಚಾರ ದಟ್ಟಣೆ ಇಳಿಕೆಗೂ ಇದು ಕೊಡುಗೆ ನೀಡುತ್ತಿದೆ. ಆದರೆ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಉಂಟಾಗುತ್ತದೆ.
ಹೆಚ್ಚುತ್ತಾ ಜನದಟ್ಟಣೆ ಸಮಸ್ಯೆ?
ಸದ್ಯ ಹಾಲಿ ನಮ್ಮ ಮೆಟ್ರೋ ಪ್ರಯಾಣಿಕರ ದೈನಂದಿನ ಸಂಖ್ಯೆ 8 ಲಕ್ಷ ದಾಟಿದೆ. ಅಷ್ಟೇ ರೈಲುಗಳು ಇದೇ ವಿಸ್ತರಣೆ ಮಾರ್ಗದಲ್ಲಿ ಓಡಾಡಬೇಕಿದೆ. ಇದರಿಂದ ಜನದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ರೈಲ್ವೆ ಕೋಚ್‌ಗಳು ಬರುವುದು ಇನ್ನು ತಡ ಎನ್ನಲಾಗಿದೆ. ಅಲ್ಲಿಯವರೆಗೆ ನಾಗಸಂದ್ರವರೆಗೆ ಓಡಾಡುತ್ತಿದ್ದ ಮೆಟ್ರೋ ಇದೀಗ ಮಾದವರವರೆಗೂ ಸಂಚರಿಸಬೇಕಿದೆ. ಪೀಕ್ ಸಮಯದಲ್ಲಿ ರೈಲಿನಲ್ಲಿ ಕಾಲಿಡದಷ್ಟು ಸಮಸ್ಯೆ ಉಂಟಾಗುವ ಆತಂಕ ಎದುರಾಗಿದೆ.
ಸದ್ಯ ಒಟ್ಟು 55 ಮೆಟ್ರೋ ರೈಲುಗಳು ಕಾರ್ಯ ನಿರ್ವಹಿಸುತ್ತವೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ 65ಕ್ಕೂ ಹೆಚ್ಚು ನಿಲ್ದಾಣಗಳು ಇವೆ. ಮಾರ್ಗ ವಿಸ್ತರಣೆ ಆಗುತ್ತಿದ್ದಂತೆ ನಿಲ್ದಾಣಗಳು ಏರಿಕೆ ಆಗುತ್ತವೆ. ಜನರ ಮೆಟ್ರೋ ಅವಲಂಬನೆ ಹೆಚ್ಚಾಗುತ್ತದೆ. ಇದರಿಂದ ಇನ್ನಷ್ಟು ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ. ಶೀಘ್ರವೇ ಹೆಚ್ಚು ಮೆಟ್ರೋ ರೈಲುಗಳು ಬೆಂಗಳೂರಿಗೆ ಬಂದರೆ ಈ ಸಮಸ್ಯೆಗೆ ಮುಕ್ತಿ ಹಾಡಬಹುದಾಗಿದೆ.












Click it and Unblock the Notifications