ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣ: ಗುಂಡೇಟಿನ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ
CJ Roy: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ವರದಿಯಲ್ಲಿ ಗುಂಡೇಟಿನ ಕುರಿತು ವಿವರ ಬಹಿರಂಗವಾಗಿದೆ. ಈ ಅಂಶಗಳು ತನಿಖೆಗೆ ಹೊಸ ಆಯಾಮ ನೀಡುವ ಸಾಧ್ಯತೆಯಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಹಾಗೂ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಹಲವು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಸಿಜೆ ರಾಯ್ ಅವರು ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಅಧಿಕೃತವಾಗಿ ದೃಢಪಟ್ಟಿದೆ. ಈ ವೈದ್ಯಕೀಯ ವರದಿ ತನಿಖೆಗೆ ಸ್ಪಷ್ಟ ದಿಕ್ಕು ನೀಡಿದೆ ಎನ್ನಲಾಗುತ್ತಿದೆ.

ವರದಿ ಹೇಳುವುದೇನು?: ಮರಣೋತ್ತರ ಪರೀಕ್ಷೆಯ ವಿವರಗಳ ಪ್ರಕಾರ, ಸಿಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಅತ್ಯಂತ ಸಮೀಪದ ಅಂತರದಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡು ಹೃದಯವನ್ನು ಸೀಳಿ ಶ್ವಾಸಕೋಶ ಹಾಗೂ ಪ್ರಮುಖ ರಕ್ತನಾಳಗಳ ಮೂಲಕ ಹಾದುಹೋಗಿದೆ. ಕೊನೆಗೆ ಬೆನ್ನಿನ 11ನೇ ಪಕ್ಕೆಲುಬಿನ ಬಳಿ ಸಿಲುಕಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪರೀಕ್ಷೆಯ ವೇಳೆ ಈ ಬುಲೆಟ್ ಅನ್ನು ಹೊರತೆಗೆದು, ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಯ್ ಹೆಸರಿನಲ್ಲಿದ್ದ ಪಿಸ್ತೂಲ್: ಆತ್ಮಹತ್ಯೆಗೆ ಬಳಸಲಾಗಿದೆ ಎನ್ನಲಾದ NP ಬೋರ್ 0.25 ಪಿಸ್ತೂಲ್ ಸಿಜೆ ರಾಯ್ ಅವರ ಹೆಸರಿನಲ್ಲೇ ಪರವಾನಗಿ ಪಡೆದ ಆಯುಧವಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ, ಸಿಜೆ ರಾಯ್ ಅವರ ಸಾವಿನ ಹಿಂದಿರುವ ನಿಖರ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಅವರ ಮೊಬೈಲ್ ಫೋನ್‌ನಲ್ಲಿರುವ ಮಾಹಿತಿಯನ್ನು ಮರುಪಡೆಯಲು ಸಿಐಡಿ ಸೈಬರ್ ಸೆಲ್‌ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತ್ಯಕ್ರಿಯೆ ಎಲ್ಲಿ?: ಯಾವುದೇ ಸ್ಪಷ್ಟ ಸಾಲಬಾಧೆ ಅಥವಾ ವೈಯಕ್ತಿಕ ಶತ್ರುಗಳ ಬಗ್ಗೆ ಮಾಹಿತಿ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, ಐಟಿ ಅಧಿಕಾರಿಗಳ ವಿಚಾರಣೆಯ ಒತ್ತಡ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಇನ್ನೂ ಮತ್ತೊಂದೆಡೆ, ಸಿಜೆ ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಬಳಿಯ ಕಾಸಾಗ್ರ್ಯಾಂಡ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗ ಹಾಗೂ ಉದ್ಯಮ ವಲಯದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ರಾಯ್ ಬೆಳೆದುಬಂದಿದ್ದು ಹೇಗೆ?: ಡಾ.ಸಿ.ಜೆ. ರಾಯ್ ಅವರು ಶೂನ್ಯದಿಂದ ಆರಂಭಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ ಸಾಧಕನಾಗಿ ಗುರುತಿಸಿಕೊಂಡಿದ್ದರು. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು, ವೃತ್ತಿಜೀವನದ ಆರಂಭದಲ್ಲಿ ಸಣ್ಣ ಮಟ್ಟದ ಉದ್ಯಮ ನಡೆಸಿ, ಬಳಿಕ ದುಬೈವರೆಗೂ ವ್ಯವಹಾರ ವಿಸ್ತರಿಸಿದರು. ನಂತರ ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಕಾನ್ಫಿಡೆಂಟ್ ಗ್ರೂಪ್ ಅನ್ನು ಸ್ಥಾಪಿಸಿದ ಅವರು, ಅದನ್ನು ಸುಮಾರು 8,500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಂಸ್ಥೆಯಾಗಿ ಬೆಳೆಸಿದ್ದರು.
ಇನ್ನೂ ಇದೀಗ ಮರಣೋತ್ತರ ಪರೀಕ್ಷೆ ವರದಿ ಹೊರಬಿದ್ದಿದ್ದು, ಇದನ್ನು ಆಧರಿಸಿ ಪೊಲೀಸರು ಮತ್ತು ತನಿಖಾಧಿಕಾರಿಗಳು ಇತರೆ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳು ಮತ್ತು ಸಿಜೆ ರಾಯ್ ಅವರ ವೈಯಕ್ತಿಕ ದಾಖಲೆಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟ ನಿಖರ ಪರಿಸ್ಥಿತಿಗಳು ಏನಾಗಿದ್ದವು ಎಂಬುದನ್ನು ಸ್ಪಷ್ಟಪಡಿಸಲು ಈ ವೈದ್ಯಕೀಯ ವರದಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿ ಅಧಿಕೃತ ಹೊರಬೀಳುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications