ನೂರು ಮೋದಿ ಬಂದರೂ ಕಾಂಗ್ರೆಸ್‌ಮುಕ್ತವಾಗಿಸಲು ಸಾಧ್ಯವಿಲ್ಲ
Recommended Video

ಬೆಂಗಳೂರು, ಮೇ 2: ನೂರು ಮೋದಿ ಬಂದರೂ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎನ್ನುವುದು ಚಿಕ್ಕಪೇಟೆ ಶಾಸಕ, ಆರ್.ವಿ ದೇವರಾಜ್ ಮಾತು.
2013ರಲ್ಲಿ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದಿದ್ದ ಆರ್.ವಿ. ದೇವರಾಜ್, ಈಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಅವರು ಒನ್ ಇಂಡಿಯಾದೊಂದಿಗೆ ಕೆಲವು ಮಾತುಗಳನ್ನು ಹಂಚಿಕೊಂಡರು.
ದೇಶದಲ್ಲಿ ಎಲ್ಲೆಡೆ ಕಾಂಗ್ರೆಸ್ ಸೋಲು ಅನುಭವಿಸಿದ್ದಾಗ ಇಂದಿರಾಗಾಂಧಿ ಅವರನ್ನು ಗೆಲ್ಲಿಸಿ ಮತ್ತೆ ಪ್ರಧಾನಿ ಮಾಡಿದ್ದು ಕರ್ನಾಟಕ. ಸೋನಿಯಾ ಗಾಂಧಿ ಅವರನ್ನೂ ಈ ನೆಲ ಗೆಲ್ಲಿಸಿದೆ. ದೇಶದಲ್ಲಿ ಎಲ್ಲಿಯೇ ಕಾಂಗ್ರೆಸ್ ಸೋತರೂ ಕರ್ನಾಟಕ ಅದರ ಕೈ ಹಿಡಿಯುತ್ತದೆ.

ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್ ಬರುತ್ತದೆ ಎಂದಿದ್ದೆ. ಕೆಲವು ಏಜೆಂಟ್ ಪಕ್ಷಗಳು ಮತ ಒಡೆದು ಬಿಜೆಪಿ ಗೆಲ್ಲಿಸಿದರು. ಮುಂದೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಸೂಪರ್ ರಿಸಲ್ಟ್ ಬರುತ್ತದೆ. ಕರ್ನಾಟಕದಲ್ಲಂತೂ 130 ಸೀಟುಗಳು ಬರುವುದು ಅನುಮಾನವೇ ಇಲ್ಲ ಎನ್ನುತ್ತಾರೆ ದೇವರಾಜ್.
ಅನ್ನ ತಿಂದ ಯಾರೂ ಕಾಂಗ್ರೆಸ್‌ಗೆ ಮೋಸ ಮಾಡೊಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಸ್ಲಂಗಳಲ್ಲಿ ಉಚಿತ ನೀರು ಕೊಡುತ್ತಿದ್ದೇವೆ. ಅಕ್ಕಿ ಸಿಗುತ್ತಿದೆ. ಹತ್ತು ರೂಪಾಯಿಗೆ ಊಟ ಕೊಡುತ್ತಿದ್ದಾರೆ, ಅವರು ಮತ್ತೆ ಮುಖ್ಯಮಂತ್ರಿ ಆಗುವುದು ಖಚಿತ.
ಸಿದ್ದರಾಮಯ್ಯ ಅವರ ಯೋಜನೆಗಳಲ್ಲಿ ರಾಜ್ಯದ ಪ್ರತಿಯೊಬ್ಬರೂ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಏನು ಕೆಲಸ ಮಾಡುತ್ತಾರೆ? ಅವರು ಮಾಡೋದು ಭಾರತವನ್ನು ಒಡೆದು ಆಡೋದು. ಭಾಯಿಯೊ ಔರ್ ಬೆಹೆನೋ ಎಂದು ಸುಳ್ಳುಗಳನ್ನು ನಂಬಿಸಿ ಮತ ಕದಿಯುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪ್ರವಾಸ ಮಾಡಬೇಕು. ಅವರ ಪ್ರಚಾರದ ಅಗತ್ಯ ಬಹಳ ಇದೆ. ಅವರು ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡರಲ್ಲಿಯೂ ಗೆಲ್ಲುವುದು ನಿಶ್ಚಿತ. ಬಳಿಕ ಬಾದಾಮಿ ಕ್ಷೇತ್ರಕ್ಕೆ ರಾಜೀನಾಮೆ ನೀಡ್ತಾರೆ.
ಈ ಬಾರಿಯೂ 2013ರ ಚುನಾವಣೆ ಪುನರಾವರ್ತನೆ ಆಗುತ್ತದೆ. ಆಗ ಸಿಂಪತಿ ಇತ್ತು. ಹೋರಾಟ ಕೂಡ ನಡೆಸಿ ಗೆದ್ದೆವು. ಈಗ ಕೆಲಸ ಮಾಡಿದ್ದಕ್ಕೆ ಅಧಿಕಾರ ಬರುತ್ತದೆ. ಸುಮ್ಮನೆ ಅಧಿಕಾರ ಸಿಗುವುದಿಲ್ಲ. ಅಭಿವೃದ್ಧಿ ಮಾಡಿದ್ದೇವೆ.
ಕೆಲಸಕ್ಕೆ ಮತ ನೀಡುತ್ತಾರೆ
2013ರಲ್ಲಿ ಮೊದಲ ಬಾರಿಗೆ ಇಲ್ಲಿ ಗೆದ್ದೆ. ಆಗ ಜನರಿಗೆ ಒಂದು ಮಾತು ಹೇಳಿದ್ದೆ. ನನಗೆ ಒಮ್ಮೆ ಮತ ನೀಡಿ. ಕೆಲಸ ಮಾಡಿ ತೋರಿಸುತ್ತೇನೆ. ಕೆಲಸ ಮಾಡಿದ್ದರೆ ಓಟು ಹಾಕಿ ಎಂದಿದ್ದೆ.
1.000 ಕೋಟಿವರೆಗೂ ದುಡ್ಡು ತಂದು ಕೆಲಸ ಮಾಡಿದ್ದೇನೆ. ಬೆಳಿಗ್ಗೆ 5 ರಿಂದ ಸಂಜೆ 12 ವರೆಗೂ ಜನರಿಗೆ ಸಿಗುತ್ತೇನೆ. ಜನರು ಕೆಲಸ ಮಾಡಿದವರಿಗೆ ಮೋಸ ಮಾಡೊಲ್ಲ. ಹೀಗಾಗಿ ನಾನಿದ್ದಲ್ಲಿ ಜನರು ತಾವಾಗಿಯೇ ಸೇರುತ್ತಾರೆ.
ಮನೆಯವರು, ಮಕ್ಕಳು, ಜನರು ನನ್ನ ಪರವಾಗಿ ಪ್ರಚಾರ ಮಾಡ್ತಿದ್ದಾರೆ. ಇಲ್ಲಿ ನಾವು ಗೆಲ್ಲಲು ಯಾರೂ ಪ್ರಚಾರಕ್ಕೆ ಬೇಕಾಗಿಲ್ಲ. ನಾವೇ ಸಾಕು.
ಸಹಜ ಜೀವನ ನಡೆಸುತ್ತಿದ್ದೇವೆ. ದೇವರು ಸಾಕಷ್ಟು ಕೊಟ್ಟಿದ್ದಾನೆ. ನನ್ನ ಏಳಿಗೆಗೆ ಜನರೇ ಕಾರಣ. ಅವರಿಲ್ಲದೆ ಏನೂ ಇಲ್ಲ. ಅವರೇ ಸಂಬಂಧಿಗಳು, ಅಣ್ಣತಮ್ಮಂದಿರು. ಈ ಮಟ್ಟಕ್ಕೆ ಬರಲು ಜನರು ಹಾಕಿದ ಮತ ಭಿಕ್ಷೆ. ಅವರನ್ನು ಯಾವುದೇ ಕಾರಣಕ್ಕೂ ಮರೆಯೊಲ್ಲ ಎನ್ನುತ್ತಾರೆ ದೇವರಾಜ್.
ನನಗೆ ಕೆಲಸ ಮಾಡುವ ಸಾಮರ್ಥ್ಯವಿದೆ. ಇನ್ನೂ 15 ವರ್ಷ ನಾನೇ ಇಲ್ಲಿ ಶಾಸಕನಾಗುತ್ತೇನೆ. ಇಲ್ಲಿ ಸ್ಪರ್ಧಿಸಬೇಕು ಎಂದು ನನ್ನ ಮಗ ಎಂದೂ ಕೇಳಿಲ್ಲ. ಆತ ಕಾರ್ಪೊರೇಟರ್ ಆಗಿದ್ದಾನೆ. ಮುಂದೆ ಮೇಯರ್ ಆಗಲಿ. ಅಲ್ಲಿವರೆಗೆ ನಾನೇ ರಾಜಕಾರಣದಲ್ಲಿ ಇರುತ್ತೇನೆ.
ಅಭಿವೃದ್ಧಿಗೆ ಮಾತ್ರ ಮತ ನೀಡಿ. ಕೆಲಸ ಮಾಡದೆ ಇದ್ದರೆ ಮತ ಹಾಕಬೇಡಿ ಎಂದೇ ಜನರನ್ನು ಕೇಳುತ್ತೇನೆ. ಈಗ ಸಾಕಷ್ಟು ಕೆಲಸ ಮಾಡಿದ್ದೇನೆ. ಹಳ್ಳಿಯಂತಿದ್ದ ಇಲ್ಲಿನ ಕೆಲವು ಪ್ರದೇಶಗಳು ಡೆಲ್ಲಿ ಆಗಿವೆ. ಇನ್ನೂ ಮಾಡುವುದು ಇದೆ. ಉತ್ತಮ ಆಡಳಿತಕ್ಕೆ ಮತ ನೀಡುವಂತೆ ಕೋರುತ್ತೇನೆ ಎಂದು ಅವರು ಹೇಳುತ್ತಾರೆ.











Click it and Unblock the Notifications