Chhonzin Angmo: ಕಣ್ಣಿಲ್ಲದಿದ್ದರೂ ಛಲವಿದೆ! ಮೌಂಟ್ ಎವರೆಸ್ಟ್ ಏರಿದ ಭಾರತದ ಮೊದಲ ದೃಷ್ಟಿಹೀನ ಮಹಿಳೆ ಅಂಗ್ಮೋ
ಕಣ್ಣಿದ್ದವರಿಗೆ, ದೃಷ್ಟಿಯುಳ್ಳವರಿಗೇ ಎವರೆಸ್ಟ್ ಆರೋಹಣ ಬಲು ಕಷ್ಟ. ಅಂಥದರಲ್ಲಿ, ಕಣ್ಣಿಲ್ಲದಿದ್ದರೂ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಹಳ್ಳಿಯೊಂದರ ಬುಡಕಟ್ಟು ಮಹಿಳೆ ಛೋನ್ಜಿನ್ ಅಂಗ್ಮೋ ಛಲದಿಂದ ಎವರೆಸ್ಟ್ ಏರಿ ದಾಖಲೆ ಬರೆದಿದ್ದಾರೆ. ಎವರೆಸ್ಟ್ ಏರಿದ ಭಾರತದ ಮೊದಲ ದೃಷ್ಟಿಹೀನ ಮಹಿಳೆ ಎಂಬ ಸಾಹಸದ ದಾಖಲೆಯೂ ಅವರ ಹೆಸರಿನಲ್ಲಿ ಬರೆಯಲ್ಪಟ್ಟಿದೆ.
ಅಂಗ್ಮೋ ಸಂಪೂರ್ಣ ದೃಷ್ಟಿಹೀನರು. ಆದರೆ ತಮ್ಮ ದೈಹಿಕ ಸವಾಲು ಕನಸುಗಳ ಹಾದಿಗೆ ಅಡ್ಡಿಯಾಗಲು ಅವರು ಎಂದಿಗೂ ಅವಕಾಶ ನೀಡಲಿಲ್ಲ. ಜೀವನದಲ್ಲಿ ಸಾಧನೆ ಮಾಡಲು ದೃಷ್ಟಿ ಮಾತ್ರವಲ್ಲ, ದೃಢವಾದ ಸಂಕಲ್ಪವೂ ಮುಖ್ಯ ಎಂಬುದನ್ನು ಛೋನ್ಜಿನ್ ಅಂಗ್ಮೋ ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. ಭಾರತದ ಮೊದಲ ದೃಷ್ಟಿಹೀನ ಮಹಿಳೆಯಾಗಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಅವರು, ಜಗತ್ತಿನಲ್ಲೇ ಈ ಸಾಧನೆ ಮಾಡಿದ ಐದನೇ ದೃಷ್ಟಿಹೀನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎವರೆಸ್ಟ್ ಶಿಖರದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಹೆಲೆನ್ ಕೆಲ್ಲರ್ ಮಾತುಗಳಿಂದ ಪ್ರೇರಣೆ
ಛೋನ್ಜಿನ್ ಅಂಗ್ಮೋ ಅವರು ಪ್ರಸಿದ್ಧ ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಹೆಲೆನ್ ಕೆಲ್ಲರ್ ಅವರನ್ನು ತಮ್ಮ ಆದರ್ಶವಾಗಿ ಪರಿಗಣಿಸುತ್ತಾರೆ. "ದೃಷ್ಟಿ ಇಲ್ಲದಿರುವುದಕ್ಕಿಂತ ಕೆಟ್ಟ ಸಂಗತಿಯೆಂದರೆ, ದೃಷ್ಟಿ ಇದ್ದರೂ ಜೀವನದ ಬಗ್ಗೆ ದೂರದೃಷ್ಟಿ ಇಲ್ಲದಿರುವುದು" ಎಂಬ ಹೆಲೆನ್ ಕೆಲ್ಲರ್ ಅವರ ಮಾತುಗಳು ಅಂಗ್ಮೋ ಅವರಿಗೆ ಸದಾ ಪ್ರೇರಣೆ ನೀಡುತ್ತವೆ. ಕಣ್ಣಿನ ದೃಷ್ಟಿ ಇಲ್ಲದಿದ್ದರೂ ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬಹುದು ಮತ್ತು ಅವುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಅಂಗ್ಮೋ ಅವರ ಸಾಧನೆಯೇ ಸಾಕ್ಷಿ.
ಭಾರತ ಮತ್ತು ಟಿಬೆಟ್ ಗಡಿಯ ಸಮೀಪವಿರುವ ಹಿಮಾಚಲ ಪ್ರದೇಶದ ಚಾಂಗೋ ಎಂಬ ಪುಟ್ಟ ಹಳ್ಳಿಯಲ್ಲಿ ಛೋನ್ಜಿನ್ ಅಂಗ್ಮೋ ಜನಿಸಿದರು. ಎಂಟನೇ ವಯಸ್ಸಿನಲ್ಲಿ ಅವರು ಸಂಪೂರ್ಣ ದೃಷ್ಟಿ ಕಳೆದುಕೊಂಡರು. ಆದರೆ ದೃಷ್ಟಿಹೀನತೆ ಅವರ ಶಿಕ್ಷಣಕ್ಕೆ ಅಡ್ಡಿಯಾಗಲಿಲ್ಲ. ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಪ್ರಸ್ತುತ ದೆಹಲಿಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರಾಹಕ ಸೇವಾ ಸಹವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅಂಗ್ಮೋ ಅವರ ತಂದೆ ಅಮರ್ ಚಂದ್ ಅವರು ತಮ್ಮ ಮಗಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. "ನನ್ನ ಮಗಳು ನಮಗೆ ಹೆಮ್ಮೆ ತಂದಿದ್ದಾಳೆ. ಆಕೆಯ ಸಾಧನೆಯಿಂದ ನಾವೆಲ್ಲರೂ ಬಹಳ ಸಂತೋಷವಾಗಿದ್ದೇವೆ" ಎಂದು ಅವರು ಹೇಳಿದ್ದಾರೆ. ಅಂಗ್ಮೋ ಅವರ ಸಾಧನೆ ಅವರ ಸ್ವಗ್ರಾಮದಲ್ಲಿಯೂ ಸಂಭ್ರಮ ಮೂಡಿಸಿದೆ. ಬಾಲ್ಯದಿಂದಲೂ ಅವರು ಧೈರ್ಯಶಾಲಿ ಮತ್ತು ದೃಢನಿಶ್ಚಯದ ವ್ಯಕ್ತಿಯಾಗಿದ್ದರು ಎಂದು ಅವರ ಸಂಬಂಧಿ ಯಮ್ಚಿನ್ ಹೇಳಿದ್ದಾರೆ.
ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿದ ಸಾಧಕಿ
ಛೋನ್ಜಿನ್ ಅಂಗ್ಮೋ ಅವರ ಜೀವನದ ಹಾದಿ ಸುಲಭವಾಗಿರಲಿಲ್ಲ. ಅನೇಕ ಸವಾಲುಗಳನ್ನು ಎದುರಿಸಿದರೂ ಅವರು ತಮ್ಮ ಕನಸುಗಳನ್ನು ಕೈಬಿಡಲಿಲ್ಲ. "ನನ್ನ ಕಥೆ ಈಗಷ್ಟೇ ಆರಂಭವಾಗಿದೆ. ನನ್ನ ದೃಷ್ಟಿಹೀನತೆ ನನ್ನ ದೌರ್ಬಲ್ಯವಲ್ಲ, ಅದು ನನ್ನ ಶಕ್ತಿ" ಎಂದು ಅವರು ಈ ಹಿಂದೆ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಪರ್ವತ ಶಿಖರಗಳನ್ನು ಏರುವುದು ಬಾಲ್ಯದಿಂದಲೂ ಅವರ ಕನಸಾಗಿತ್ತು. ಆದರೆ ಆರ್ಥಿಕ ಸಂಕಷ್ಟಗಳು ದೊಡ್ಡ ಸವಾಲಾಗಿದ್ದವು. "ಪರ್ವತ ಶಿಖರಗಳನ್ನು ಏರುವುದು ನನ್ನ ಬಾಲ್ಯದ ಕನಸು. ಆದರೆ ಆರ್ಥಿಕ ಸಮಸ್ಯೆಗಳು ದೊಡ್ಡ ಅಡ್ಡಿಯಾಗಿದ್ದವು. ಈಗ ನಾನು ಇನ್ನೂ ಏರದಿರುವ ಉಳಿದ ಪರ್ವತ ಶಿಖರಗಳನ್ನು ಏರುವ ಪ್ರಯತ್ನ ಮಾಡುತ್ತೇನೆ" ಎಂದು ಅಂಗ್ಮೋ ಹೇಳಿದ್ದರು.
ಎವರೆಸ್ಟ್ ಬೇಸ್ ಕ್ಯಾಂಪ್ನಿಂದ ಎವರೆಸ್ಟ್ ಶಿಖರದವರೆಗೆ
2024ರ ಅಕ್ಟೋಬರ್ನಲ್ಲಿ ಛೋನ್ಜಿನ್ ಅಂಗ್ಮೋ ಅವರು 5,364 ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಚಾರಣ ಪೂರ್ಣಗೊಳಿಸಿದ ಭಾರತದ ಮೊದಲ ದೃಷ್ಟಿಹೀನ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದಕ್ಕೂ ಮೊದಲು ಅವರು ಲಡಾಖ್ನ 6,250 ಮೀಟರ್ ಎತ್ತರದ ಕಾಂಗ್ ಯತ್ಸೆ-2 ಪರ್ವತ ಶಿಖರವನ್ನು ಏರಿದ್ದರು. ಕೇಂದ್ರಾಡಳಿತ ಪ್ರದೇಶದಲ್ಲಿ ಸುಮಾರು 6,000 ಮೀಟರ್ ಎತ್ತರದ ಹೆಸರಿಲ್ಲದ ಪರ್ವತ ಶಿಖರವನ್ನು ಏರಿದ ಅಂಗವಿಕಲರ ತಂಡದ ಸದಸ್ಯೆಯಾಗಿಯೂ ಅವರು ಸಾಧನೆ ಮಾಡಿದ್ದರು.
ಅಂಗ್ಮೋ ಅವರ ಸಾಧನೆ ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿಯೂ ಉಲ್ಲೇಖವಾಗಿತ್ತು. ಈ ಮೂಲಕ ಪ್ರಧಾನಿ ಮೋದಿ ಅವರು ಅವರ ತಂಡದ ಸಾಧನೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕ್ರೀಡೆಯಲ್ಲಿಯೂ ಅನೇಕ ಸಾಧನೆಗಳು
ಪರ್ವತಾರೋಹಣ ಮಾತ್ರವಲ್ಲದೆ ಛೋನ್ಜಿನ್ ಅಂಗ್ಮೋ ಅವರು ಕ್ರೀಡಾ ಕ್ಷೇತ್ರದಲ್ಲಿಯೂ ಅನೇಕ ಸಾಧನೆಗಳನ್ನು ಮಾಡಿದ್ದಾರೆ.
- ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
- ರಾಷ್ಟ್ರೀಯ ಮಟ್ಟದ ಜೂಡೋ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಾರೆ.
- ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
- ದೆಹಲಿ ಮ್ಯಾರಥಾನ್ನಲ್ಲಿ ಮೂರು ಬಾರಿ ಭಾಗವಹಿಸಿದ್ದಾರೆ.
- ಪಿಂಕ್ ಮ್ಯಾರಥಾನ್ ಮತ್ತು ದೆಹಲಿ ವೇದಾಂತ ಮ್ಯಾರಥಾನ್ಗಳಲ್ಲಿಯೂ ಭಾಗವಹಿಸಿದ್ದಾರೆ.
- ಫುಟ್ಬಾಲ್ನಲ್ಲಿ ವಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ.
ಪರ್ವತಾರೋಹಣದ ಕನಸನ್ನು ನನಸಾಗಿಸಿಕೊಳ್ಳಲು ಅವರು 2016ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಮತ್ತು ಸಂಬಂಧಿತ ಕ್ರೀಡಾ ಸಂಸ್ಥೆಯಲ್ಲಿ ಮೂಲಭೂತ ಪರ್ವತಾರೋಹಣ ತರಬೇತಿ ಪಡೆದರು. ಈ ತರಬೇತಿಯಲ್ಲಿ ಅತ್ಯುತ್ತಮ ತರಬೇತುದಾರ್ತಿ ಎಂಬ ಗೌರವಕ್ಕೂ ಪಾತ್ರರಾದರು.
ಸೈಕ್ಲಿಂಗ್ನಲ್ಲಿಯೂ ಸಾಹಸಮಯ ಸಾಧನೆ
ಛೋನ್ಜಿನ್ ಅಂಗ್ಮೋ ಅವರ ಸಾಹಸಮಯ ಪ್ರಯಾಣ ಪರ್ವತಾರೋಹಣಕ್ಕೆ ಮಾತ್ರ ಸೀಮಿತವಾಗಿಲ್ಲ.
2018ರಲ್ಲಿ ಅವರು ಮನಾಲಿಯಿಂದ, ಸಮುದ್ರ ಮಟ್ಟದಿಂದ ಸುಮಾರು 18,000 ಅಡಿ (5,486 ಮೀಟರ್) ಎತ್ತರದಲ್ಲಿರುವ ಖಾರ್ದುಂಗ್ ಲಾ ಪಾಸ್ವರೆಗೆ ಸೈಕ್ಲಿಂಗ್ ಮಾಡಿದರು. ತೀವ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿ 10 ದಿನಗಳಲ್ಲಿ ಈ ಸಾಹಸವನ್ನು ಪೂರ್ಣಗೊಳಿಸಿದರು.
2019ರಲ್ಲಿ ಮೂರು ರಾಜ್ಯಗಳ ಮೂಲಕ ಸಾಗುವ ನೀಲಗಿರಿ ಪ್ರದೇಶದ ಸೈಕ್ಲಿಂಗ್ ಸಾಹಸವನ್ನು ಕೇವಲ ಆರು ದಿನಗಳಲ್ಲಿ ಪೂರ್ಣಗೊಳಿಸಿದರು. 2024ರ ಜುಲೈನಲ್ಲಿ ಸ್ಪಿತಿ ಕಣಿವೆ ಮತ್ತು ಕಿನ್ನೌರ್ ಮೂಲಕ ಮನಾಲಿಯಿಂದ ಕಲ್ಪಾವರೆಗೆ ಏಳು ದಿನಗಳ ಸೈಕ್ಲಿಂಗ್ ಪ್ರಯಾಣವನ್ನೂ ಪೂರ್ಣಗೊಳಿಸಿದರು.
2021ರಲ್ಲಿ ಆಪರೇಷನ್ ಬ್ಲೂ ಫ್ರೀಡಂ ಅಡಿಯಲ್ಲಿ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಎಂದೇ ಹೆಸರಾದ ಸಿಯಾಚಿನ್ ಹಿಮನದಿಯನ್ನು ಏರಿದ ಅಂಗವಿಕಲರ ತಂಡದ ಏಕೈಕ ಮಹಿಳಾ ಪರ್ವತಾರೋಹಿಯಾಗಿದ್ದರು. ಈ ತಂಡವು ವಿಶ್ವ ದಾಖಲೆಯನ್ನೂ ನಿರ್ಮಿಸಿತ್ತು.
ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ಸಾಧಕಿ
ಛೋನ್ಜಿನ್ ಅಂಗ್ಮೋ ಅವರ ಸಾಧನೆಗಳನ್ನು ಗುರುತಿಸಿ ಹಲವು ಪ್ರಶಸ್ತಿಗಳು ಲಭಿಸಿವೆ. 2024ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅಂಗವಿಕಲರ ಸಬಲೀಕರಣಕ್ಕಾಗಿ ನೀಡುವ 'ಸರ್ವಶ್ರೇಷ್ಠ ದಿವ್ಯಾಂಗಜನ್ ರಾಷ್ಟ್ರೀಯ ಪ್ರಶಸ್ತಿ'ಯನ್ನು ಸ್ವೀಕರಿಸಿದರು.
ಇದರ ಜೊತೆಗೆ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ನಿಂದ 'ಎನ್ಎಬಿ ಮಧು ಶರ್ಮಾ ಯಂಗ್ ಅಚೀವರ್ ಪ್ರಶಸ್ತಿ', ಅಂಗವಿಕಲರ ಅಂತರರಾಷ್ಟ್ರೀಯ ದಿನದ ಪ್ರಶಸ್ತಿ ಮತ್ತು 'ಕ್ಯಾವಿನ್ಕೇರ್ ಎಬಿಲಿಟಿ ಮಾಸ್ಟರಿ ಪ್ರಶಸ್ತಿ'ಗಳನ್ನೂ ಪಡೆದಿದ್ದಾರೆ.


Click it and Unblock the Notifications
