ಚೆನ್ನೈ ಮೆಟ್ರೋಗೆ ಬೆಂಗಳೂರಿನಲ್ಲಿ 70 ರೈಲುಗಳ ಉತ್ಪಾದನೆ
ಬೆಂಗಳೂರು, ಡಿಸೆಂಬರ್ 14: ಈಗಾಗಲೇ ವಂದೇ ಭಾರತ್ ಸ್ಲೀಪರ್ ರೈಲು ಬೋಗಿ ತಯಾರಿಸಿ ಕೊಟ್ಟಿರುವ ಬೆಂಗಳೂರು ಮೂಲದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಮತ್ತೊಂದು ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಚೆನ್ನೈ ಮೆಟ್ರೋ ರೈಲು ಬೋಗಿ ತಯಾರಿಕೆಯ ಕಾರ್ಯವನ್ನು ಬಿಇಎಂಎಲ್ ಪಡೆದುಕೊಂಡಿದೆ. ಮೂರು ಬೋಗಿಗಳ 70 ರೈಲುಗಳನ್ನು ತಯಾರಿಸಿ ಕೊಡುವುದಲ್ಲದೇ ಅದರ ನಿರ್ವಹಣೆಯನ್ನು ಸಹ ನೋಡಿಕೊಳ್ಳಲಿದೆ.
ಚೆನ್ನೈ ಮೆಟ್ರೋ ರೈಲು ಯೋಜನೆಯು ಭಾರತದ ಪ್ರಮುಖ ಉತ್ಪಾದನಾ ಸಂಸ್ಥೆಯಾದ ಬೆಂಗಳೂರು ಮೂಲದ ಬಿಇಎಂಎಲ್‌ಗೆ ಬೋಗಿ ತಯಾರಿಕೆಯ ಟೆಂಡರ್ ನೀಡಿದೆ. ಈ ಒಪ್ಪಂದದ ಭಾಗವಾಗಿ ಮೂರು ಬೋಗಿಯ ರೈಲುಗಳನ್ನು ನಿರ್ಮಾಣ ಮಾಡಿಕೊಡುವ ಜೊತೆಗೆ, ಡಿಪೋ ಯಂತ್ರೋಪಕರಣ, ತರಬೇತಿ ಮತ್ತು 15 ವರ್ಷಗಳ ಕಾಲ ನಿರ್ವಹಣೆಯನ್ನು ಮಾಡಿಕೊಡಬೇಕಿದೆ.

ಮುಖ್ಯವಾಗಿ ಈ ರೈಲುಗಳು ಸ್ವಯಂಚಾಲಿತ ರೈಲು ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಣೆ ಮಾಡುವಂತೆ ಉನ್ನತ ತಾಂತ್ರಿಕ ಅಗತ್ಯತೆಗಳ ಜೊತೆಗೆ ನಿರ್ಮಾಣವಾಗಲಿವೆ. ಈ ಹೊಸ ರೈಲುಗಳನ್ನು ಚೆನ್ನೈ ಮೆಟ್ರೋ ರೈಲು ಯೋಜನೆಯ ಹಂತ 2ರ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಮೂರು ಹೊಸ ಮಾರ್ಗಗಳಲ್ಲಿ ಓಡಿಸಲಾಗುತ್ತದೆ.
ಹೊಸ ಮಾರ್ಗವು 118.9 ಕಿ. ಮೀ. ಇರಲಿದ್ದು, 76.3 ಕಿ. ಮೀ. ಎತ್ತರದ ಮತ್ತು 42.6 ಕಿ. ಮೀ. ಸುರಂಗ ಮಾರ್ಗವನ್ನು ಒಳಗೊಂಡಿದೆ. ಲೈನ್ 3 45.8 ಕಿ. ಮೀ., ಲೈನ್ 4 26.1 ಕಿ. ಮೀ. ಮತ್ತು ಲೈನ್ 5 47 ಕಿ. ಮೀ. ದೂರವಿದೆ. ಒಪ್ಪಂದದ ಪ್ರಕಾರ ಮೊದಲ ರೈಲನ್ನು ಬಿಇಎಂಎಲ್ 2027ರ ಜನವರಿಯಲ್ಲಿ ಹಸ್ತಾಂತರ ಮಾಡಲಿದೆ. 2029ರ ಏಪ್ರಿಲ್‌ನೊಳಗೆ ಎಲ್ಲಾ ರೈಲುಗಳನ್ನು ಪೂರ್ಣವಾಗಿ ಹಸ್ತಾಂತರ ಮಾಡುವ ಗುರಿ ಇದೆ. ಬೋಗಿಯ ಹಸ್ತಾಂತರದ ಬಳಿಕ ಅದರ ನಿರ್ವಹಣೆಯ ಗುತ್ತಿಗೆ ಆರಂಭವಾಗಲಿದೆ.
ಬೆಂಗಳೂರಿನಲ್ಲಿಯೇ ತಯಾರಿ: ಈ ಒಪ್ಪಂದದ ಕುರಿತು ಬಿಇಎಂಎಲ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, "ನಾವು ಮೆಟ್ರೋ ಬೋಗಿಗಳನ್ನು ಉತ್ಪಾದಿಸಿ ಕೊಡಲು ಬದ್ಧರಾಗಿದ್ದೇವೆ. ಚೆನ್ನೈ ಮೆಟ್ರೋ ಬೇಡಿಕೆಯಂತೆ ಉತ್ತಮ ದರ್ಜೆಯ ಬೋಗಿಯನ್ನು ಬೆಂಗಳೂರು ರೈಲು ಕಾಂಪ್ಲೆಕ್ಸ್‌ನಲ್ಲಿಯೇ ತಯಾರಿಸಲಿದ್ದೇವೆ" ಎಂದು ಹೇಳಿದರು.
"ನಾವು ಬಿಇಎಂಎಲ್‌ನಲ್ಲಿ ಇಂತಹ ಕೆಲಸಗಳನ್ನು ಕೈಗೊಳ್ಳುವ ಮೂಲಕ ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ನೀಡುತ್ತಿದ್ದೇವೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದರು.
ಬಿಇಎಂಎಲ್ ದೇಶದ ಹಲವು ಪ್ರಮುಖ ಸಂಸ್ಥೆಗಳಿಗೆ ವಿವಿಧ ಉತ್ಪನ್ನಗಳ ತಯಾರಿಯನ್ನು ಮಾಡಿಕೊಡುತ್ತಿದೆ. ಮೈಸೂರಿನ ಬಿಇಎಂಎಲ್‌ನಲ್ಲಿ ರಕ್ಷಣಾ ಇಲಾಖೆಯ ಮುಖ್ಯ ಯುದ್ಧ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಮೊದಲ ಸ್ವದೇಶಿ ನಿರ್ಮಿತ 1500 ಎಚ್‌ಪಿ ಎಂಜಿನ್‌ನ ಪರೀಕ್ಷಾರ್ಥ ಉಡಾವಣೆಯೂ ನಡೆದಿತ್ತು.
ಭಾರತೀಯ ರೈಲ್ವೆಗೆ ವಂದೇ ಭಾರತ್ ಸ್ಲೀಪರ್ ರೈಲು ಬೋಗಿಯನ್ನು ಸಹ ಬಿಇಎಂಎಲ್ ತಯಾರಿಸಿ ಕೊಟ್ಟಿದೆ. ಸೆಪ್ಟೆಂಬರ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಿಇಎಂಎಲ್‌ನ ಬೆಂಗಳೂರು ಘಟಕದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೆಟ್ ಅನ್ನು ಅನಾವರಣಗೊಳಿಸಿದ್ದರು.
ಕೇವಲ 9 ತಿಂಗಳಲ್ಲಿ ಬಿಇಎಂಎಲ್ ಈ ರೈಲು ಬೋಗಿಯ ಸೆಟ್ ತಯಾರು ಮಾಡಿತ್ತು. ಭಾರತೀಯ ರೈಲ್ವೆ ಮತ್ತು ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಹಿರಿಯ ಅಧಿಕಾರಿಗಳ ಜೊತೆಗೆ ಬಿಇಎಂಎಲ್ ವಿನ್ಯಾಸಗೊಳಿಸಿದ ವಂದೇ ಭಾರತ್ ಸ್ಲೀಪರ್ ರೈಲು ಬೋಗಿಯ ವಿನ್ಯಾಸಗಳನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ.
ಅಲ್ಲದೇ ಬಿಇಎಂಎಲ್ ಈಗಾಗಲೇ ಮುಂಬೈ-ಅಹಮದಾಬಾದ್ ಮಾರ್ಗದ ಬುಲೆಟ್ ಟ್ರೈನ್ ಯೋಜನೆಗೆ 8 ಕೋಚ್‌ನ ಗಂಟೆಗೆ ಗರಿಷ್ಠ 249 ಕಿ. ಮೀ. ವೇಗದಲ್ಲಿ ಚಲಿಸುವ ಎರಡು ರೈಲುಗಳನ್ನು ತಯಾರಿಸಿಕೊಡುವ ಒಪ್ಪಂದವನ್ನು ಪಡೆದುಕೊಂಡಿದೆ. 866.87 ಕೋಟಿ ಮೌಲ್ಯದ ಗುತ್ತಿಗೆ ಇದು. ಈ ಮಾದರಿಯ ಒಂದು ರೈಲನ್ನು 27.86 ಕೋಟಿ ರೂ. ವೆಚ್ಚದಲ್ಲಿ ತಯಾರು ಮಾಡಲಾಗುತ್ತದೆ. 2027ರಲ್ಲಿ ಈ ರೈಲು ಬೋಗಿಯನ್ನು ಬಿಇಎಂಎಲ್ ನೀಡಲಿದೆ.












Click it and Unblock the Notifications