ಲಾಟರಿ ಹಗರಣ; ಅಧಿಕೃತವಾಗಿ ಸಿಬಿಐ ತನಿಖೆ ಶುರು
ಬೆಂಗಳೂರು, ಆಗಸ್ಟ್ 11: ಕರ್ನಾಟಕದ ಬಹುಕೋಟಿ ಲಾಟರಿ ಹಗರಣದ ತನಿಖೆ ಮಂಗಳವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.
ಲಾಟರಿ ನಿಷೇಧ ಕಾಯ್ದೆ ಹಾಗೂ ಕ್ರಿಮಿನಲ್ ಸಂಚು ಸೇರಿದಂತೆ ಅನೇಕ ದಂಡ ಸಂಹಿತೆ ಅನ್ವಯ ಅನಾಮಧೇಯ ವ್ಯಕ್ತಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ?]
ಈ ಮುಂಚೆ ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಆದೇಶದ ಅನ್ವಯ ರಾಜ್ಯದ ಅಬಕಾರಿ ನಿಯಂತ್ರಣ ಹಾಗೂ ಲಾಟರಿ ನಿಷೇಧ ವಿಭಾಗ, ಕೆಜಿಎಫ್, ಕೋಲಾರ(ಕರ್ನಾಟಕ) ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ (FIR No.64/2015) ಹಾಕಿದ್ದಾರೆ ಎಂದು ಸಿಬಿಐ ವಕ್ತಾರರು ಹೇಳಿದರು.

ಸಾರ್ವಜನಿಕರ ಮತ್ತು ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದಿದ್ದ ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಆದರೆ, ಪ್ರಕರಣದ ತನಿಖೆ ಆರಂಭಿಸುವ ಮೊದಲು ಸಿಬಿಐ ಪ್ರಾಥಮಿಕ ಮಾಹಿತಿ ಸಂಗ್ರಹಣೆ ಮಾಡಿದೆ. ಅದರ ಅನ್ವಯ ಈ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. [ಲಾಟರಿ ಹಗರಣ ಸಿಬಿಐ ತನಿಖೆ ಎಲ್ಲಿಗೆ ಬಂತು?]
ಒಂದಂಕಿ ಲಾಟರಿ ಹಗರಣದಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಭಾಗಿಯಾಗಿರುವ ಕುರಿತು ಸೂಕ್ತವಾದ ಸಾಕ್ಷ್ಯಗಳು ಸಿಕ್ಕಿಲ್ಲ. ಕರ್ನಾಟಕ ಸರ್ಕಾರ ಅಲೋಕ್ ಕುಮಾರ್ ಹೆಸರು ಕೇಳಿಬಂದ ತಕ್ಷಣ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು. [ಲಾಟರಿ ಸಾಮ್ರಾಜ್ಯಕ್ಕೆ ಈತನೇ ಕಿಂಗ್]
ಲಾಟರಿ ಹಗರಣ ಕಿಂಗ್ ಪಿನ್ ಪಾರಿರಾಜನ್ ಪರಿಚಯವಿದೆ. ಆದರೆ, ಆತನ ಜೊತೆ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ತಮ್ಮ ಮೇಲೆ ಆರೋಪ ಕೇಳಿಬಂದಾಗಲೇ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದರು. ಈಗ ಸಿಬಿಐ ಸಹ ತನ್ನ ಪ್ರಾಥಮಿಕ ತನಿಖೆ ಯಿಂದ ತಿಳಿದು ಬಂದಿದೆ.
2015ರ ಮೇ 26ರಂದು ಕರ್ನಾಟಕ ಸರ್ಕಾರ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಒನ್ ಇಂಡಿಯಾ ಸುದ್ದಿ)












Click it and Unblock the Notifications