Bengaluru Bandh: ಬೆಂಗಳೂರು ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ: ಕುರುಬೂರು ಶಾಂತಕುಮಾರ್
ಬೆಂಗಳೂರು, ಸೆ.25: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಗುವುದು. ಫ್ರೀಡಂ ಪಾರ್ಕ್‌ವಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಹೇಳಿದರು.

ರಾಮನಗರ, ಮಂಡ್ಯ, ಮಳವಳ್ಳಿ, ಟಿ ನರಸೀಪುರ ಸೇರಿದಂತೆ ಹಲವು ಕಡೆಗಳಲ್ಲಿ ಬಂದ್ ಮಾಡುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಕೂಡಲೇ ನೀರು ನಿಲ್ಲಿಸದೇ ಇದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
150ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ
ವಿದ್ಯಾರ್ಥಿಗಳ ಸಂಘ, ಎಪಿಎಂಸಿ ಕಾರ್ಯಕರ್ತರ ಸಂಘ, ಉದ್ಯಮಿಗಳ ಸಂಸ್ಥೆ, ವಿವಿಧ ನೌಕರರ ಸಂಘ, ಬಿಎಂಟಿಸಿ ಚಾಲಕರ ಸಂಘ, ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟಗಾರರ ಸಂಘಟನೆಗಳು, ಆಟೋ ಚಾಲಕರ ಸಂಘಟನೆಗಳು, ಟ್ಯಾಕ್ಸಿ ಕ್ಯಾಬ್ ಚಾಲಕರ ಸಂಘಟನೆಗಳು, ಐಟಿಬಿಟಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಕಲಾವಿದರ ಸಂಘಗಳು, ಹೋಟೆಲ್ ಮಾಲಿಕರ ಸಂಘಟನೆಗಳು, ರಾಜಕೀಯ ಪಕ್ಷಗಳು, ಬೆಂಗಳೂರು ರಸ್ತೆ ಬದಿ ವ್ಯಾಪಾರಿಗಳ ಸಂಘ, ಬಿಬಿಎಂಪಿ ನೌಕರರ ಸಂಘ ಸೇರಿದಂತೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಚಂದ್ರು ಮನವಿ
ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು, ಎಲ್ಲಾ ನಾಗರೀಕರು ಈ ಬಂದ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಕುಡಿಯುವ ನೀರು ಎಲ್ಲರಿಗೂ ಬೇಕು, ಭಾಷೆ, ಜಾತಿ, ಪಕ್ಷಗಳನ್ನು ಮರೆತು ನಮ್ಮ ಹೋರಾಟಕ್ಕೆ ಬೆಂಬಲ ಕೊಡಿ ಎಂದರು.
ತಮಿಳುನಾಡಿಗೆ ಕೂಡಲೇ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು, ನೀರು ಖಾಲಿಯಾದ ಮೇಲೆ ನಾವು ಬಂದ್ ಮಾಡಿದರೂ ಪ್ರಯೋಜನ ಇಲ್ಲ ಅದಕ್ಕಾಗಿ ಹೆಚ್ಚಿನ ಸಮಯ ವ್ಯರ್ಥ ಮಾಡದೇ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದರು.
ಇನ್ನು ಶಾಂತಿಯುತವಾಗಿ ಬಂದ್ ಆಚರಿಸಬೇಕು, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದು. ಸಾರ್ವಜನಿಕರಿಗೆ ತೊಂದರೆ ಮಾಡಬಾರದು, ಎಲ್ಲರ ಮನವೊಲಿಸಿ ಬಂದ್‌ನಲ್ಲಿ ಭಾಗವಹಿಸುವಂತೆ ಮಾಡಿ ಎಂದು ಸಂಘಟನೆಗಳ ಮುಖಂಡರು ಹೋರಾಟಗಾರರಿಗೆ ಮನವಿ ಮಾಡಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆಗೆ ಒತ್ತಾಯ ಮಾಡಿವೆ.












Click it and Unblock the Notifications