ಬೆಂಗಳೂರು: ರಸ್ತೆಯಲ್ಲಿ ಕಾರ್ ಪಾರ್ಕಿಂಗ್ ಶೀಘ್ರವೇ ಪರವಾನಗಿ ಶುಲ್ಕ?
ಬೆಂಗಳೂರು, ಸೆಪ್ಟೆಂಬರ್ 21: ಬೆಂಗಳೂರಿನಲ್ಲಿ ವಾಸಿಸುವ ಜನರು ಕಾರು ಹೊಂದಿದ್ದೀರಾ? ಮನೆಯಲ್ಲಿ ಕಾರು ಪಾರ್ಕಿಂಗ್‌ಗೆ ಸ್ಥಳಾವಕಾಶವಿದೆಯೇ ಹಾಗಿದ್ದರೆ ತೊಂದರೆಯಿಲ್ಲ. ಆದರೆ ಮನೆಯಲ್ಲಿ ಪಾರ್ಕಿಂಗ್ ಸ್ಥಳವಿಲ್ಲದೇ ರಸ್ತೆಯಲ್ಲಿ ಕಾರನ್ನು ನಿಲ್ಲಿಸುತ್ತಿದ್ದರೇ ಇನ್ಮುಂದೆ ಶುಲ್ಕ ಕಟ್ಟಿ ಪಾರ್ಕಿಂಗ್ ಪರವಾನಗಿ ಪಡೆಯಬೇಕಿದೆ.
ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ಕಾಯಿದೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಎಂಟು ವಲಯಗಳಿಗೆ ಹೊಸ ಪಾರ್ಕಿಂಗ್ ನೀತಿ ಅನ್ವಯವಾಗಲಿದೆ. ಬಿಬಿಎಂಪಿ ಏಕಾಏಕಿ ಹೊಸ ಪಾರ್ಕಿಂಗ್ ಟೆಂಡರ್ ಕಾಯಿದೆ ಜಾರಿಗೊಳಿಸಲು ಮುಂದಾಗಿದ್ದು ನಗರದ ಎಂಟು ವಲಯಗಳಿಲ್ಲಿ ಟೆಂಡರ್ ಕರೆದಿದೆ.
ಮನೆಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ಕಾರನ್ನು ನಿಲ್ಲಿಸಲು ಪರವಾನಗಿಯನ್ನು ಪಡೆದುಕೊಳ್ಳಬೇಕು. ಸುಮಾರು 3 ರಿಂದ 5 ಸಾವಿರ ಹಣವನ್ನು ಕೊಟ್ಟು ಪರವಾನಗಿಯನ್ನು ಪಡೆಯಬೇಕು. ಪರವಾನಗಿಯನ್ನು ಕಾರು ನಿಲುಗಡೆ ಮಾತ್ರ ನೀಡಲಾಗುತ್ತದೆ. ವ್ಯಕ್ತಿಗತವಾಗಿ ಪರವಾನಗಿ ನೀಡುವುದಿಲ್ಲ. ಪರವಾನಗಿ ಪಡೆದ ಕಾರಿನ ಮಾಲೀಕ ಅದೇ ರಸ್ತೆಯಲ್ಲಿ ವಾಸವನ್ನು ಮಾಡುತ್ತಿರಬೇಕು ಎಂಬ ನಿಯಮವೂ ಇದೆ. ಆದರೆ ಕೋವಿಡ್ ಸಂಕಷ್ಟದಿಂದ ಜನರು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲು ಕಾರಿಗೆ ಪರವಾನಗಿ ಪಡೆದುಕೊಳ್ಳಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಾರ್ಷಿಕ ಶುಲ್ಕ ಕಟ್ಟಿ ಪರವಾನಗಿ ಪಡೆಯಬೇಕು
ಬೆಂಗಳೂರಿನ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವುದು ಉಚಿತವಲ್ಲ. ನಗರಾಭಿವೃದ್ಧಿ ಇಲಾಖೆಯು ಪಾರ್ಕಿಂಗ್ ನೀತಿ 2.0 ಅನ್ನು ಅನುಮೋದಿಸಿತ್ತು ಮತ್ತು ಮುಖ್ಯ ರಸ್ತೆಯಲ್ಲಿ ನಿಮ್ಮ ಮನೆಯ ಮುಂದೆ ವಾಹನ ನಿಲುಗಡೆ ಮಾಡಲು ವರ್ಷಕ್ಕೆ 5,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಹಿ ಬಿಬಿಎಂಪಿ ತನ್ನ ವ್ಯಾಪ್ತಿಯ 8 ವಲಯದಲ್ಲೂ ಟೆಂಡರ್ ಅನ್ನು ಕರೆದಿದೆ.

40 ದಿನಗಳ ಅವಕಾಶವನ್ನು ನೀಡಬೇಕು
ಬಿಬಿಎಂಪಿ ರಸ್ತೆಗಳಲ್ಲಿ ಕಾರು ಪಾರ್ಕಿಂಗ್ ಸಂಬಂಧ ತನ್ನ ವ್ಯಾಪ್ತಿಯ ಎಂಟು ವಲಯದಲ್ಲಿ ಟೆಂಡರ್ ಅನ್ನು ಕರೆದಿದೆ. ಟೆಂಡರ್ ನಲ್ಲಿ ಭಾಗವಹಿಸಲು 15 ದಿನಗಳ ಅವಕಾಶವನ್ನು ನೀಡಲಾಗಿದೆ. ಆದರೆ, ಕೆಟಿಟಿಪಿ ಪ್ರಕಾರ ಟೆಂಡರ್ ನಲ್ಲಿ ಭಾಗವಹಿಸಲು 40 ದಿನಗಳ ಅವಕಾಶವನ್ನು ನೀಡಬೇಕು. ಬಿಬಿಎಂಪಿ ಈ ವಿಚಾರದಲ್ಲಿ ಯಾಕಿಷ್ಟು ಆತುರವಾಗಿದೆ ಎಂಬ ಪ್ರಶ್ನೆಗಳು ಮೂಡುತ್ತಿವೆ.

ನಿಗದಿತ ಹಣ ಕಟ್ಟಿ ಪರವಾನಗಿ ಪಡೆಯಬೇಕು
ಹೊಸ ನೀತಿಯಡಿಯಲ್ಲಿ ವಾಣಿಜ್ಯ ಪ್ರದೇಶಗಳು, ವಸತಿ ವಲಯಗಳು ಸೇರಿದಂತೆ ಬಹುತೇಕ ಎಲ್ಲಾ ಸ್ಥಳಗಳು ಪೇ ಮತ್ತು ಪಾರ್ಕ್ ವ್ಯವಸ್ಥೆಗೆ ಒಳಪಡುತ್ತವೆ. ಈ ನೀತಿಯು ಪಾರ್ಕಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕಾದ ರಸ್ತೆಗಳಲ್ಲಿ ಮಾರ್ಗಸೂಚಿಗಳನ್ನು ಸಹ ಹಾಕುತ್ತದೆ. ಮನೆ ಮುಂದೆ ವಾಹನ ನಿಲ್ಲಿಸಲು ವಾರ್ಷಿಕ ಪರವಾನಿಗೆ ಪಡೆಯಬೇಕು. ಸಣ್ಣ ಕಾರುಗಳಿಗೆ ವರ್ಷಕ್ಕೆ ರೂ 1,000, ಮಧ್ಯಮ ಕಾರುಗಳಿಗೆ ರೂ. 3,000 ರಿಂದ ರೂ 4,000 ಮತ್ತು ವಸತಿ ಪಾರ್ಕಿಂಗ್ ಪರ್ಮಿಟ್‌ಗಳಿಗೆ ಎಂಯುವಿ ಮತ್ತು ಎಸ್‌ಯುವಿಗಳಿಗೆ ರೂ 5,000 ಎಂದು ಸರ್ಕಾರ ನಿಗದಿಪಡಿಸಿದೆ.

ನಿಗದಿತ ಸ್ಥಳದಲ್ಲಿ ಹೊರತು ಬೇರೆಡೆ ಪಾರ್ಕಿಂಗ್‌ಗೆ ಅವಕಾಶವಿಲ್ಲ
ಪರವಾನಿಗೆಯು ಪಾರ್ಕಿಂಗ್ ಸ್ಥಳವನ್ನು ಖಾತರಿಪಡಿಸುವುದಿಲ್ಲ. ಆದರೆ ಸ್ಥಳ ಲಭ್ಯವಿದ್ದಲ್ಲಿ ನಿಗದಿಪಡಿಸಿದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಅನುಮತಿ ಹೊಂದಿರುವವರಿಗೆ ಮಾತ್ರ ಅಧಿಕಾರ ನೀಡುತ್ತದೆ. ಇದಲ್ಲದೆ, ಪರವಾನಗಿಗಳನ್ನು ನಿರ್ದಿಷ್ಟ ರಸ್ತೆಗೆ ನೀಡಲಾಗುತ್ತದೆ ಮತ್ತು ಬೇರೆಡೆ ವಾಹನ ನಿಲುಗಡೆಗೆ ಬಳಸಬಾರದು ಎಂದು ಹೇಳುತ್ತದೆ. ಪರ್ಮಿಟ್ ನೀಡಿರುವುದು ವಾಹನಕ್ಕೆ ಹೊರತು ವ್ಯಕ್ತಿಗೆ ಅಲ್ಲ. ಪರ್ಮಿಟ್ ಹೊಂದಿರುವವರು ಕಡ್ಡಾಯವಾಗಿ ಪರವಾನಗಿ ನೀಡಿದ ರಸ್ತೆಯಲ್ಲಿ ವಾಸಿಸಬೇಕಾಗುತ್ತದೆ.












Click it and Unblock the Notifications