ಶೀಘ್ರವೇ ಕ್ಯಾಬ್ ಸೇವೆ ದುಬಾರಿ; ಯಾಕೆ?
ಬೆಂಗಳೂರು, ಆಗಸ್ಟ್ 24: ಬೆಂಗಳೂರು ವ್ಯಾಪ್ತಿಯಲ್ಲಿ ಕ್ಯಾಬ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾಕಷ್ಟಿದೆ. ಪ್ರತಿನಿತ್ಯವೂ ಉದ್ಯೋಗಗಳಿಗೆ ತೆರಳಲು, ಬೆಂಗಳೂರಿನಲ್ಲಿರುವ ವಿವಿಧ ಸ್ಥಳಗಳಿಗೆ ಕ್ಯಾಬ್‌ನಲ್ಲೇ ಸಂಚರಿಸುವವರೂ ಇದ್ದಾರೆ. ಇನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಏರ್‌ಪೋರ್ಟ್ ರಸ್ತೆಯಲ್ಲಿ ಕಣ್ಣಿಗೆ ರಾಚುವಷ್ಟು ಕ್ಯಾಬ್‌ಗಳೇ ಎಲ್ಲೆಡೆ ಕಂಡುಬರುತ್ತವೆ. ಆದರೆ, ಕ್ಯಾಬ್ ಬಳಕೆದಾರರಿಗೆ ಕಹಿಸುದ್ದಿಯೊಂದು ಹೊರಬಿದ್ದಿದ್ದು, ಶೀಘ್ರದಲ್ಲೇ ಕ್ಯಾಬ್ ಸೇವೆ ದುಬಾರಿಯಾಗುವ ಸಾಧ್ಯತೆ ಇದೆ. ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರಿನ ಕ್ಯಾಬ್ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ವಿವಿಧ ಖಾಸಗಿ ಕ್ಯಾಬ್ ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಈ ಅಗ್ರಿಮೆಂಟ್ ಈಗ ನವೀಕರಣ (renewal) ಆಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅಗ್ರಿಮೆಂಟ್ ರಿನೆವಲ್ ಆದರೆ ಏರ್‌ಪೋರ್ಟ್ ಟ್ಯಾಕ್ಸಿ ಸೇವೆ ಶುಲ್ಕಗಳೂ ಹೆಚ್ಚಾಗಲಿದೆಯಂತೆ.

ಒಪ್ಪಂದದಲ್ಲಿ ಕ್ಯಾಬ್, ಟ್ಯಾಕ್ಸಿ ಪಿಕಪ್ ಶುಲ್ಕ ಸೇರಿದಂತೆ ಇನ್ನಿತರ ಶುಲ್ಕಗಳೂ ಏರಿಕೆಯಾಗುವುದರಿಂದ ಬೆಂಗಳೂರಿನ ವಿವಿಧ ಭಾಗಗಳಿಂದ ಏರ್‌ಪೋರ್ಟ್‌ಗೆ ಸಿಗುವ ಕ್ಯಾಬ್ ಸೇವೆಯು ದುಬಾರಿಯಾಗಲಿದೆ. ಅದರಂತೆ ಓಲಾ, ಉಬರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಸೇರಿದಂತೆ ಇತರ ಕ್ಯಾಬ್‌ಗಳ ಸೇವೆಯೂ ದುಬಾರಿ ಆಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ದಿನಕ್ಕೊಂದು ಬೆಲೆ ಏರಿಕೆ ಶಾಕ್‌ನಿಂದ ಪರದಾಡುತ್ತಿರುವ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ರೆಡಿಯಾಗಿದೆ.
ಸದ್ಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ಯಾಬ್‌ನಲ್ಲಿ ಬರುವ ಪ್ರಯಾಣಿಕರು ಪ್ರಯಾಣದ ಶುಲ್ಕ ಸೇರಿದಂತೆ ಕಮೀಷನ್, ಏರ್‌ಪೋರ್ಟ್‌ನಲ್ಲಿ ಹಾಕುವ ಶುಲ್ಕ ಹಾಗೂ ಇನ್ನಿತರ ಟ್ಯಾಕ್ಸ್‌ಗಳನ್ನು ಸೇರಿದಂತೆ ಬಿಲ್ ಪಾವತಿಸುತ್ತಿದ್ದಾರೆ. ಈಗ ಇದರ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಕೆಲ ಕ್ಯಾಬ್ ಸೇವೆ ನೀಡುವ ಕಂಪನಿಗಳು ತಮ್ಮ ಕಸ್ಟಮರ್‌ಗಳಿಗೆ ಈ ಬೆಲೆ ಏರಿಕೆ ಮಾಹಿತಿ ನೀಡುತ್ತಿದೆಯಂತೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ಗಳಲ್ಲಿ ವಿವಿಧ ಟ್ಯಾಕ್ಸಿ ಕಂಪನಿಗಳು ಟೆಂಡರ್ ಪ್ರಕ್ರಿಯೆಯ ಮೂಲಕ ತಮ್ಮ ಟ್ಯಾಕ್ಸಿಗಳ ನಿಲುಗಡೆಗೆ ಜಾಗ ಪಡೆದುಕೊಳ್ಳಲಿವೆ. ಸದ್ಯ ಕ್ಯಾಬ್ ಕಂಪನಿಗಳು ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅವರ ಸೇವೆಗೆ ತಕ್ಕಂತೆ ಹೊಸ ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕಗಳೂ ಸಹ ಸದ್ಯದಲ್ಲೇ ಹೆಚ್ಚಳವಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಈ ಸೆಪ್ಟೆಂಬರ್ 31ರೊಳಗೆ ಕ್ಯಾಬ್ ಕಂಪನಿಗಳು ಏರ್‌ಪೋರ್ಟ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದ ನವೀಕರಣಗೊಳ್ಳಲಿದೆ. ಕೆಎಸ್‌ಟಿಡಿಸಿ, ಓಲಾ ಸೇರಿದಂತೆ ಇತರ ಕ್ಯಾಬ್ ಕಂಪನಿಗಳ ನವೀಕರಣದ ನಂತರ ಟ್ಯಾಕ್ಸಿ ಸೇವೆಯೂ ದುಬಾರಿ ಆಗಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಕ್ಯಾಬ್ ಸೇವೆ ದುಬಾರಿಯಾದರೆ ಅದನ್ನು ಬಳಸುವವರ ಪ್ರಯಾಣಿಕರ ಸಂಖ್ಯೆ ಕಡಿಮೆಯಾಲಿದೆಯಾ ಎಂಬ ಆತಂಕ ಸದ್ಯ ಕ್ಯಾಬ್ ಚಾಲಕರಿಗೆ ಎದುರಾಗಿದ್ದು, ಇದಕ್ಕೆ ಪ್ರಯಾಣಿಕರು ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ಈಗಿರುವ ಸವಾಲು...












Click it and Unblock the Notifications