Byju's crisis: ಉದ್ಯೋಗ ಕಡಿತದ ಬಳಿಕ ಬೆಂಗಳೂರಿನ ಅತಿದೊಡ್ಡ ಕಚೇರಿ ಖಾಲಿ ಮಾಡಿದ ಬೈಜುಸ್
ಬೆಂಗಳೂರು, ಜುಲೈ 24: ಭಾರತದ ಅತ್ಯಂತ ಜನಪ್ರಿಯ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ ಸಂಕಷ್ಟಕ್ಕೆ ಸಿಲುಕಿದೆ. ಕೆಲ ತಿಂಗಳ ಹಿಂದೆ ಬೈಜುಸ್ ಉದ್ಯೋಗಗಳನ್ನು ಕಡಿತಗೊಳಿಸಿತ್ತು. ಈಗ ಬೆಂಗಳೂರಿನ ಅತಿದೊಡ್ಡ ಕಚೇರಿ ಜಾಗವನ್ನು ಖಾಲಿ ಮಾಡಿದೆ. ಇದಕ್ಕೆ ಆರ್ಥಿಕ ತೊಂದರೆಯೇ ಕಾರಣವೆಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.
ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಬೈಜುಸ್ ತನ್ನ ವೆಚ್ಚವನ್ನು ಕಡಿತಗೊಳಿಸಲು ಮುಂದಾಗಿದೆ. ಇದರ ಪರಿಣಾಮವಾಗಿ ತನ್ನ ನೌಕರರನ್ನು ಮೊದಲು ಕಿತ್ತುಹಾಕಿತ್ತು. ಈಗ ಬೆಂಗಳೂರಿನ ದೊಡ್ಡ ಕಚೇರಿ ಸ್ಥಳವನ್ನು ತೆರವುಗೊಳಿಸಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿರುವ ಮತ್ತೊಂದು ಕಚೇರಿಯ ಒಂದು ಭಾಗವನ್ನು ಸಹ ಬಿಟ್ಟುಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಬೈಜುಸ್ ಬೆಂಗಳೂರಿನಲ್ಲಿ ಮೂರು ಕಚೇರಿ ಸ್ಥಳಗಳನ್ನು ಹೊಂದಿದೆ. ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ 5.58 ಲಕ್ಷ ಚದರ ಅಡಿ ಕಚೇರಿ ಜಾಗವನ್ನೀಗ ಖಾಲಿ ಮಾಡಿದೆ. ಈ ಜಾಗವು ಬೆಂಗಳೂರಿನ ಮೂರು ಕಚೇರಿ ಸ್ಥಳಗಳಲ್ಲಿಯೇ ದೊಡ್ಡ ಜಾಗವೆಂದು ತಿಳಿದುಬಂದಿದೆ.
ಉದ್ಯೋಗಿಗಳಿಗೆ ಬೇರೆ ಜಾಗಗಳಿಂದ ಅಥವಾ ಮನೆಗಳಿಂದ ಕೆಲಸ ಮಾಡುವಂತೆ ಕಂಪನಿಯು ಮನವಿ ಮಾಡಿದೆ. ಈ ವಿಚಾರವಾಗಿ ಕನಿಷ್ಠ ಆರು ಉದ್ಯೋಗಿಗಳು ಮನಿಕಂಟ್ರೋಲ್‌ಗೆ ದೃಢಪಡಿಸಿದ್ದಾರೆ.
ಕಂಪನಿಯು ಪ್ರೆಸ್ಟೀಜ್ ಟೆಕ್ ಪಾರ್ಕ್‌ನಲ್ಲಿರುವ ಒಂಬತ್ತು ಮಹಡಿಗಳಲ್ಲಿ ಎರಡನ್ನು ಬಿಟ್ಟುಕೊಟ್ಟಿದೆ ಎಂದು ಉದ್ಯೋಗಿಗಳು ತಿಳಿಸಿದ್ದಾರೆ.

'ಬೈಜುಸ್ ಕಂಪನಿಯು ದೇಶಾದ್ಯಂತ 3 ಮಿಲಿಯನ್ ಚದರ ಅಡಿ ಬಾಡಿಗೆ ಸ್ಥಳಗಳನ್ನು ಹೊಂದಿದೆ. ಕಚೇರಿ ಸ್ಥಳಗಳ ವಿಸ್ತರಣೆ ಮತ್ತು ಕಡಿತವು ಕಾರ್ಯನೀತಿಗಳಲ್ಲಿನ ಬದಲಾವಣೆಗಳನ್ನು ಅವಲಂಭಿಸಿದೆ. ವ್ಯವಹಾರದ ಆದ್ಯತೆಗಳನ್ನು ಆಧರಿಸಿದೆ. ನಾವು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ' ಎಂದು ಬೈಜುಸ್‌ನ ವಕ್ತಾರರು ತಿಳಿಸಿದ್ದಾರೆ.
ಕಂಪನಿಯು ಕಳೆದ ವರ್ಷ ಜೂನ್‌ನಲ್ಲಿ ಬ್ರೂಕ್‌ಫೀಲ್ಡ್‌ನ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿ ಮ್ಯಾಗ್ನೋಲಿಯಾ ಮತ್ತು ಎಬೊನಿ ಎಂಬ ಎರಡು ಕಟ್ಟಡಗಳನ್ನು ಗುತ್ತಿಗೆಗೆ ತೆಗೆದುಕೊಂಡಿತು. ಕಳೆದ ತಿಂಗಳು ಮ್ಯಾಗ್ನೋಲಿಯಾವನ್ನು ಖಾಲಿ ಮಾಡಿತು. ಇಲ್ಲಿನ ಉದ್ಯೋಗಿಗಳನ್ನು ಎಬೊನಿಗೆ ವರ್ಗಾಯಿಸಿತು. ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿರುವ ಪ್ರೆಸ್ಟೀಜ್ ಟೆಕ್ ಪಾರ್ಕ್ ಹಾಗೂ ಬೈಜುಸ್ ಮುಖ್ಯ ಕಚೇರಿಯಿಂದ ಕೆಲಸ ಮಾಡಲು ಎಲ್ಲಾ ಉದ್ಯೋಗಿಗಳಿಗೆ ತಿಳಿಸಲಾಗಿದೆ ಎಂದು ನೌಕರರು ಮನಿ ಕಂಟ್ರೋಲ್‌ಗೆ ತಿಳಿಸಿದ್ದಾರೆ.

ಕಲ್ಯಾಣಿ ಟೆಕ್ ಪಾರ್ಕ್‌ನ ಭದ್ರತಾ ಸಿಬ್ಬಂದಿ ಇದನ್ನು ದೃಢಪಡಿಸಿದ್ದಾರೆ. ಕಂಪನಿಯು ಆಗಸ್ಟ್‌ನಲ್ಲಿ ಎಬೊನಿಯಿಂದ ನಿರ್ಗಮಿಸಲಿದೆ ಎಂದು ಹೇಳಿದ್ದಾರೆ. ಬೈಜುಸ್ ಮ್ಯಾಗ್ನೋಲಿಯಾದಲ್ಲಿ ಐದು ಮಹಡಿಗಳನ್ನು ಮತ್ತು ಎಬೊನಿಯಲ್ಲಿ ಆರು ಮಹಡಿಗಳನ್ನು ಬಾಡಿಗೆಗೆ ಪಡೆದಿತ್ತು. ನೌಕರರು ಮತ್ತು ಭದ್ರತಾ ಅಧಿಕಾರಿಗಳ ಪ್ರಕಾರ, ಇದು ಕಳೆದ ವಾರ ಎಬೊನಿಯಲ್ಲಿನ ಆರು ಮಹಡಿಗಳಲ್ಲಿ ನಾಲ್ಕನ್ನು ಖಾಲಿ ಮಾಡಿದೆ ಮತ್ತು ಉಳಿದವುಗಳನ್ನು ಆಗಸ್ಟ್‌ನೊಳಗೆ ಖಾಲಿ ಮಾಡಲಿದೆ.
ಕಂಪನಿಯು ಈ ಜಾಗಗಳನ್ನು ಮೂರು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಗುತ್ತಿಗೆಗೆ ಪಡೆದಿತ್ತು. ಸುಮಾರು 5.58 ಲಕ್ಷ ಚದರ ಅಡಿ ವಿಸ್ತೀರ್ಣದ ಕಛೇರಿ ಜಾಗವನ್ನು ತೆರವು ಮಾಡುವುದರಿಂದ, ಕಂಪನಿಯು ಮಾಸಿಕ ಬಾಡಿಗೆಯಲ್ಲಿ ಸುಮಾರು 3 ಕೋಟಿ ರೂಪಾಯಿಗಳನ್ನು ಉಳಿಸಲಿದೆ.












Click it and Unblock the Notifications