ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ; ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಎಂದ ಸಿ.ಪಿ.ಯೋಗೇಶ್ವರ್
C.P.Yogeshwara: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮತ್ತೊಂದೆಡೆ ಬಿಜೆಪಿ ಚನ್ನಪಟ್ಟಣ ಹೊರತುಪಡಿಸಿ ಶಿಗ್ಗಾಂವಿ, ಸಂಡೂರು ಕ್ಷೇತ್ರಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.
ಇಂದು (ಅಕ್ಟೋಬರ್ 21) ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿವಾಸಕ್ಕೆ ಭೇಟಿ ನೀಡಿದ ಅವರು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ಮೂಲಕ ಬಿಜೆಪಿಯಿಂದ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಂತ ಸಿ.ಪಿ ಯೋಗೇಶ್ವರ್ ಅವರು, ತಮ್ಮ ಎಂಎಲ್‌ಸಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈಗ ನಾನು ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದರು. ಈ ಹಿಂದೆ ಕೂಡ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದವರಾಗಿದ್ದಾರೆ.
ಇದೀಗ ಕಾಂಗ್ರೆಸ್ ನಾಯಕರು ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತರಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಮದ್ದೂರು ಶಾಸಕ ಕದಲೂರು ಉದಯ್ ಮೂಲಕ ಸಿಪಿ ಯೋಗೇಶ್ವರ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ರಾಜ್ಯದ ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಬೊಮ್ಮಾಯಿ ಮಗನಿಗೆ ಟಿಕೆಟ್: ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ನೀಡುವ ಮೂಲಕ ಕುಟುಂಬ ರಾಜಕೀಯಕ್ಕೆ ಮತ್ತೆ ಬಿಜೆಪಿ ಮಣೆ ಹಾಕಿದೆ.
ಉಪಚುನಾವಣೆ ಹಿನ್ನೆಲೆ ಬಿಜೆಪಿ ಎರಡು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದು, ಭರತ್ ಬೊಮ್ಮಾಯಿ ಅವರನ್ನು ಶಿಗ್ಗಾವಿ ಹಾಗೂ ಬಂಗಾರು ಹನುಮಂತುಗೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಆದರೆ, ಚನ್ನಪಟ್ಟಣಕ್ಕೆ ಅಭ್ಯರ್ಥಿ ಹೆಸರನ್ನು ಇನ್ನೂ ಘೋಷಣೆ ಆಗಿಲ್ಲ.
ಇನ್ನು ಭರತ್ ಬೊಮ್ಮಾಯಿಗೆ ಟಿಕೆಟ್ ಕೊಡುವ ವಿಚಾರವಾಗಿ ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದಿತ್ತು. ತಂದೆ-ಮಕ್ಕಳಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂಬು ಬಿಜೆಪಿಯ ನಾಯಕರೇ ಪ್ರಶ್ನಿಸಿದ್ದರು. ಆದರೆ, ಇದೀಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ.
ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ, ಈ ತುಕಾರಾಂ ರಾಜೀನಾಮೆಯಿಂದ ಸಂಡೂರು ಕ್ಷೇತ್ರ ತೆರವಾಗಿತ್ತು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಶಾಸಕರಾಗಿದ್ದರು. ಅವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ಆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಆದರೆ, ಟಿಕೆಟ್ ಯಾರಿಗೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಅವರ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಇನ್ನು ಬಿಜೆಪಿಯು ಬೊಮ್ಮಾಯಿ ಮಗನಿಗೆ ಟಿಕೆಟ್ ನೀಡಿ ಕುಟುಂಬ ರಾಜಕೀಯಕ್ಕೆ ಮತ್ತೆ ಮಣೆ ಹಾಕಿದೆ.












Click it and Unblock the Notifications