ಬೆಂಗಳೂರು 'ಕಾವೇರಿ' ನಿರ್ವಹಣೆಗೆ AI ಎಂಟ್ರಿ: ನೀರು ಸೋರಿಕೆ ತಡೆಗೆ BWSSB ಹೊಸ ಯೋಜನೆ
ಬೆಂಗಳೂರು: ಬೆಂಗಳೂರು ನಗರ ಅಪಾರ್ಟ್ಮೆಂಟ್ಗಳಿಗೆ 'ಸಂಚಾರಿ ಕಾವೇರಿ' ದೀರ್ಘಾವಧಿ ನೀರು ಪೂರೈಕೆ ಮಾಡುವ ಒಪ್ಪಂದ ಮಾಡಿಕೊಂಡಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತೊಂದು ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ನೀರಿನ ಪರಿಣಾಮಕಾರಿ ನಿರ್ವಹಣೆ ಸಾಧ್ಯವಾಗಲಿದೆ.
ಹೌದು, ನಗರದಲ್ಲಿ ಕುಡಿಯುವ ನೀರಿನ ಪರಿಣಾಮಕಾರಿ ನಿರ್ವಹಣೆ, ನೀರಿನ ಸೋರಿಕೆ ಮತ್ತು ಕಲುಷಿತತೆಯನ್ನು ತಡೆಗಟ್ಟುವ ಜೊತೆಗೆ ಆದಾಯ ಸೋರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿ (BWSSB) ಕೃತಕ ಬುದ್ಧಿಮತ್ತೆ (AI) ಹಾಗೂ ರೋಬೋಟಿಕ್ಸ್ ಆಧಾರಿತ ನೂತನ ಪೈಲೆಟ್ ಯೋಜನೆಗೆ ಚಾಲನೆ ನೀಡಿದೆ.

1.5 ವರ್ಷದಲ್ಲಿ ಹೊಸ ಯೋಜನೆ ಜಾರಿ
ಈ ಯೋಜನೆಯಡಿ 'ಸ್ಮಾರ್ಟ್ಟೆರಾ, ಸೊಲಿನಾಸ್, ವಿಲ್ಗ್ರೋ ಇನ್ನೋವೇಷನ್ಸ್ ಫೌಂಡೇಶನ್ ಹಾಗೂ ಟೈಟಾನ್ ಕಂಪನಿ ಲಿಮಿಟೆಡ್' ಸಂಸ್ಥೆಗಳ ಸಹಯೋಗದಲ್ಲಿ ಜಲಮಂಡಳಿ ಒಂದೂವರೆ ವರ್ಷದ ಪೈಲೆಟ್ ಯೋಜನೆ ಜಾರಿಗೊಳಿಸಲಿದೆ. ಯೋಜನೆಯನ್ನು ಪ್ರಥಮ ಹಂತದಲ್ಲಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಯೋಜನೆಗೆ ಸಂಬಂಧಿಸಿದಂತೆ ಇಂದು ಜಲಮಂಡಳಿ ಮತ್ತು ಪಾಲುದಾರ ಸಂಸ್ಥೆಗಳ ಮುಖ್ಯಸ್ಥರು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು.
ಸಮಸ್ಯೆಗಳ ತ್ವರಿತ ಪತ್ತೆ, ಪರಿಹಾರಕ್ಕೆ ಅನುಕೂಲ
ಇದೇ ವೇಳೆ ಮಾತನಾಡಿದ ಜಲಮಂಡಳಿ ಅಧ್ಯಕ್ಷರಾದ ಡಾ. ಎನ್. ಮಂಜುಳ ಅವರು, ಈ ಯೋಜನೆಯ ಪ್ರಮುಖ ಉದ್ದೇಶ ನಗರದ ನೀರು ಸರಬರಾಜು ಜಾಲವನ್ನು ತಂತ್ರಜ್ಞಾನ ಆಧಾರಿತವಾಗಿ ಮೇಲ್ವಿಚಾರಣೆ ಮಾಡಿ, ನೀರು ಸೋರಿಕೆ, ಪೈಪ್ಲೈನ್ ದೋಷಗಳು, ನೀರಿನ ಕಲುಷಿತತೆ ಹಾಗೂ ಆದಾಯ ನಷ್ಟ ಉಂಟು ಮಾಡುವ ಅಂಶಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಲಾಗುತ್ತದೆ. ಬಳಿಕ ಅವುಗಳ ಪರಿಹಾರಕ್ಕೆ ತತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ.
ಪ್ರಸ್ತುತ ಯೋಜನೆಯಡಿ ಅತ್ಯಾಧುನಿಕ ರೋಬೋಟಿಕ್ ಉಪಕರಣಗಳನ್ನು ಬಳಸಿ ಭೂಗತ ನೀರು ಸರಬರಾಜು ಕೊಳವೆಗಳ ಒಳಭಾಗವನ್ನು ಪರಿಶೀಲಿಸಲಾಗುತ್ತದೆ. ನೀರು ಸೋರಿಕೆ, ಪೈಪ್ ಹಾನಿ ಅಥವಾ ಕಲುಷಿತತೆ ಕಂಡುಬಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನಿಸುವ ವ್ಯವಸ್ಥೆ ಅಳವಡಿಸಲಾಗುತ್ತದೆ. ಇದರಿಂದ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ ನೀರಿನ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ ಎಂದು ಅವರು ಒಪ್ಪಂದ, ಯೋಜನೆ ಕುರಿತು ವಿವರಿಸಿದರು.
ಮಾತ್ರವಲ್ಲದೇ ಅನಧಿಕೃತ ಬಳಕೆ, ಅಳತೆಯಾಗದ ನೀರು (Non-Revenue Water) ಹಾಗೂ ಆದಾಯ ಸೋರಿಕೆಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಜಲಮಂಡಳಿಯ ಆದಾಯವನ್ನು ಹೆಚ್ಚಿಸುವ ಸಾಧ್ಯತೆಗಳನ್ನೂ ಈ ಅಧ್ಯಯನ ಪರಿಶೀಲಿಸಲಿದೆ ಎಂದು ತಿಳಿಸಿದರು.
ಈ ಪೈಲೆಟ್ ಯೋಜನೆ Titan Company Ltd ನ Design Impact Award ಕಾರ್ಯಕ್ರಮದ ಅನುದಾನದಡಿ ಅನುಷ್ಠಾನಗೊಳ್ಳಲಿದ್ದು, ಜಲಮಂಡಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಸಂಪೂರ್ಣ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಅಪಾರ್ಟ್ಮೆಂಟ್ಸ್ ಜತೆ 'ಸಂಚಾರಿ ಕಾವೇರಿ' ಒಪ್ಪಂದ
ಬೆಂಗಳೂರು ಅಪಾರ್ಟ್ಮೆಂಟ್ಸ್ ಫೆಡರೇಶನ್ (BAF) ಪ್ರತಿನಿಧಿಗಳ ಜೊತೆಗೆ ಜಲಮಂಡಳಿ ಸೋಮವಾರ ಸಭೆ ನಡೆಸಿತ್ತು. ಇ ವೇಳೆ ಬೆಂಗಳೂರು ನಗರದ ಅಪಾರ್ಟ್ಮೆಂಟ್ಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಲ 'ಸಂಚಾರಿ ಕಾವೇರಿ' ಹೆಸರಿನ ದೀರ್ಘಾವಧಿ ನೀರು ಪೂರೈಕೆ ಒಪ್ಪಂದ ವ್ಯವಸ್ಥೆ ಜಲಮಂಡಳಿ ಸೂಚಿಸಿತ್ತು.
ಇನ್ನೂ ಅಪಾರ್ಟ್ಮೆಂಟ್ಗಳಲ್ಲಿನ ವಿಕೇಂದ್ರೀಕೃತ ಒಳಚರಂಡಿ ಸಂಸ್ಕರಣಾ ಘಟಕಗಳ (Decentralised STPs) ಮೂಲಕ ಉತ್ಪಾದನೆ ಆಗುವ ಸಂಸ್ಕರಿತ ನೀರನ್ನು ಮರು ಬಳಕೆ ಆಗಬೇಕಿದೆ. ಈ ಸಂಬಂಧ ಸದರಿ ಸಂಸ್ಕರಿಸಿದ ನೀರನ್ನು ಹತ್ತಿರದ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ದೊಡ್ಡ ವಾಣಿಜ್ಯ ಸಂಕೀರ್ಣಗಳಿಗೆ ಬಳಸಲು ಪೂರೈಕೆ ಮಾಡಬಹುದೇ, ಇಲ್ಲವೇ ಎಂಬುದರ ಕುರಿತು ಚರ್ಚೆಗಳು ಆಗಿವೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.


Click it and Unblock the Notifications
