ಬೆಂಗಳೂರು; ಮೆಜೆಸ್ಟಿಕ್‌ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ
ಬೆಂಗಳೂರು, ಜುಲೈ 29 : ಬೆಂಗಳೂರು ನಗರದ ಹೃದಯ ಭಾಗವಾದ ಮೆಜೆಸ್ಟಿಕ್‌ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಬಿಬಿಎಂಪಿ ಮೇಯರ್ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
Recommended Video
ಗಾಂಧಿನಗರದ ಕಪಾಲಿ ಚಿತ್ರಮಂದಿರವಿದ್ದ ಜಾಗದ ಪಕ್ಕದ ಕಟ್ಟಡ ಕುಸಿದು ಬಿದ್ದಿದೆ. ಕಪಾಲಿ ಚಿತ್ರಮಂದಿರವನ್ನು ಒಡೆದು ಅಲ್ಲಿ ಮಾಲ್ ನಿರ್ಮಾಣ ಮಾಡಲಾಗುತ್ತಿದೆ. ನಿರ್ಮಾಣ ಹಂತದ ಕಟ್ಟಡದ ಪಕ್ಕದ ಕಟ್ಟಡ ಕುಸಿದಿದೆ.
ಒಟ್ಟು ಎರಡು ಕಟ್ಟಡಗಳು ಕುಸಿದು ಬಿದ್ದಿವೆ ಎಂಬ ಮಾಹಿತಿ ಸಿಕ್ಕಿದೆ. ಎರಡೂ ಕಟ್ಟಡಗಳಲ್ಲಿದ್ದ ಜನರನ್ನು ಬಿಬಿಎಂಪಿ ಮೊದಲೇ ಖಾಲಿ ಮಾಡಿಸಿತ್ತು. ಆದ್ದರಿಂದ, ಯಾವುದೇ ಸಾವು-ನೋವು ಸಂಭವಿಸಿಲ್ಲ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗೌತಮ್ ಕುಮಾರ್ ಜೈನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡ ಕುಸಿತವಾಗಲು ನಿರ್ಮಾಣ ಹಂತದ ಚಟುವಟಿಕೆ ಕಾರಣವೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ.

ನಿರ್ಮಾಣ ಹಂತದ ಕಟ್ಟಡದ ಪಕ್ಕದ ಕಟ್ಟಡ ಕುಸಿತ
ಕಪಾಲಿ ಚಿತ್ರಮಂದಿರವಿದ್ದ ಜಾಗದ ಮೇಲೆಯೇ ಎರಡೂ ಕಟ್ಟಡಗಳು ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳನ್ನು ತೆರವು ಮಾಡಿದ ಬಳಿಕ ನಿರ್ಮಾಣ ಹಂತದ ಕಾರ್ಯವನ್ನು ಮುಂದುವರೆಸಬೇಕಿದೆ.

ಮಾಲೀಕರು ನಷ್ಟ ಭರಿಸಬೇಕು
ಗಾಂಧಿನಗರದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. "ನಿರ್ಮಾಣ ಹಂತದ ಕಟ್ಟಡದ ಮಾಲೀಕ ನಷ್ಟವನ್ನು ತುಂಬಿಕೊಡಬೇಕು. ಬಿಬಿಎಂಪಿ ಈ ಕುರಿತು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.

ಬಿಬಿಎಂಪಿಯಿಂದ ತನಿಖೆಗೆ ಆದೇಶ
ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಲು ಸುಮಾರು 65 ಅಡಿ ಆಳದ ಹೊಂಡ ತೆಗೆಯಲಾಗಿತ್ತು. ಇದರಿಂದಾಗಿಯೇ ಪಕ್ಕದ ಕಟ್ಟಡ ಕುಸಿದಿದೆಯೇ? ಎಂದು ತಿಳಿದು ಬರಬೇಕಿದೆ. ಬಿಬಿಎಂಪಿ ಈ ಕುರಿತು ತನಿಖೆಗೆ ಆದೇಶ ನೀಡಿದೆ.

ಎಲ್ಲಾ ಜನರ ತೆರವು
ಸೋಮವಾರ ಮತ್ತು ಮಂಗಳವಾರ ಈ ಕಟ್ಟಡದಲ್ಲಿದ್ದ ಜನರನ್ನು ಅಗ್ನಿ ಶಾಮಕದಳ ತೆರವುಗೊಳಿಸಿ ಸುರಕ್ಷಿತ ಪ್ರದೇಶಗಳಿಗೆ ಕಳಿಸಿತ್ತು. ಆದ್ದರಿಂದ ಕಟ್ಟಡ ಕುಸಿತದಿಂದ ಯಾವುದೇ ಸಾವು-ನೋವು ಆಗಿಲ್ಲ.












Click it and Unblock the Notifications