ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗಿ ಎನ್ನುವಂತಿದೆ ಬಜೆಟ್; ಎಚ್‌ಡಿಕೆ ಟೀಕೆ
ಬೆಂಗಳೂರು, ಫೆಬ್ರವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಕುರಿತು ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯ ಜನರ ಪಾಲಿಗೆ ಭರವಸೆ ಆಶಾಕಿರಣವಾಗಬೇಕಿದ್ದ ಕೇಂದ್ರ ಬಜೆಟ್‌ನಲ್ಲಿ ಅಂಥ ಯಾವುದೇ ಅಂಶ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.
"ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್" ಎಂದು ಪ್ರಸಕ್ತ ಸಾಲಿನ ಕೇಂದ್ರ ಮುಂಗಡ ಪತ್ರದ ಬಗ್ಗೆ ಅವರು ಒಂದು ಸಾಲಿನಲ್ಲಿ ವ್ಯಾಖ್ಯಾನ ಮಾಡಿದರು.

ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಎಚ್‌ಡಿಕೆ, ಸಾಮಾನ್ಯ ಜನರ ಬದುಕಿನ ಬಗ್ಗೆ ಬಜೆಟ್ ಯೋಚನೆಯನ್ನೇ ಮಾಡಿಲ್ಲ. ಕೋವಿಡ್, ಬೆಲೆ ಏರಿಕೆಯಿಂದ ಬಸವಳಿದ ಬಡಜನರ ಬಗ್ಗೆ ಕನಿಕರ ತೋರಿಲ್ಲ. ಕೋವಿಡ್ ಸಂಕಷ್ಟದ ನಂತರ ದೇಶದಲ್ಲಿ ಬಡತನಕ್ಕೆ ಹೆಚ್ಚು ಜನರು ದೂಡಲ್ಪಡುತ್ತಿದ್ದರೆ, ಸಿರಿವಂತರು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟ ಪರಿಹಾರ ಇಲ್ಲ. ಕೊರೊನಾ ಸೋಂಕಿಗೆ ಸಿಲುಕಿ ಭರವಸೆ ಕಳೆದುಕೊಂಡಿರುವ ರೈತಾಪಿ, ಕಾರ್ಮಿಕರಿಗೆ ಧೈರ್ಯ ತುಂಬುವ ಅಥವಾ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಅಂಶಗಳು ಈ ಬಜೆಟ್‌ನಲ್ಲಿ ಇರಲೇಬೇಕಾಗಿತ್ತು ಎಂದು ಹೇಳಿದರು.

ಬಜೆಟ್ ಬಗ್ಗೆ ದೊಡ್ಡಮಟ್ಟಿಗೆ ಹೇಳುವಂತಹದ್ದು ಏನೂ ಇಲ್ಲ. ಕೆಲವೊಮ್ಮೆ ಹಸಿದವರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಅದೇ ರೀತಿ ತಣ್ಣೀರು ಬಟ್ಟೆ ಹಾಕಿಕೋ ಎಂದು ಹೇಳಿದ್ದಾರೆ ಹಣಕಾಸು ಸಚಿವರು ಎಂದು ವ್ಯಂಗ್ಯವಾಡಿದರು.
Recommended Video
ಬಜೆಟ್ ಬಗ್ಗೆ ಇನ್ನೂ ಸಂಪೂರ್ಣವಾಗಿ ಗಮನಿಸಿಲ್ಲ. ನದಿ ಯೋಜನೆ ಬಗ್ಗೆ ಮೂರು ವರ್ಷದಿಂದ ಹೇಳುತ್ತಿದ್ದಾರೆ. ಕಾವೇರಿ- ಪೆನ್ನಾರ್, ಕೃಷ್ಣ-ಗೋದಾವರಿ ನದಿಗಳ ಜೋಡಣೆ ಬಗ್ಗೆ ಹೇಳಿದ್ದಾರೆ. ಅದು ಕಾರ್ಯರೂಪಕ್ಕೆ ಬರಬೇಕು. ನದಿ ಜೋಡಣೆ ವಿಚಾರ ಬರಿ ಚರ್ಚೆಯಲ್ಲಿ ಇದೆ, ಕಾರ್ಯರೂಪಕ್ಕೆ ಬರಬೇಕಿದೆ. ಹೆಚ್ಚಿನ ತೆರಿಗೆ ವಿಧಿಸಿಲ್ಲ ಅನ್ನುವುದು ಬಿಟ್ಟರೇ ಬೇರೆ ಏನೂ ಇಲ್ಲ. ಯಾವುದೇ ಹೊಸ ರೀತಿಯ ಅಭಿವೃದ್ಧ ಕಾರ್ಯಕ್ರಮವಿಲ್ಲ. ಈ ವರ್ಷವನ್ನು ಕಳೆಯುವ ಬಜೆಟ್ ಅಷ್ಟೇ ಇದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.












Click it and Unblock the Notifications