E Khata: ಇ- ಖಾತಾ ಗೊಂದಲಗಳಿಗೆ ಬ್ರೇಕ್: ಹೊಸ ಅಪ್ಡೇಟ್ಸ್ ಕೊಟ್ಟ ಜಿಬಿಎ ಕಮಿಷನರ್
ಬೆಂಗಳೂರು: ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಹಿಸುದ್ದಿಯೊಂದನ್ನು ಕೊಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದ ಆಸ್ತಿಗಳಿಗೆ ಇ - ಖಾತಾ ನೀಡಲಾಗುತ್ತಿದೆ. ಆದರೆ ಇ ಖಾತಾ ನೀಡುವ ವಿಚಾರದಲ್ಲಿ ಇರುವ ಗೊಂದಲ, ಆಸ್ತಿಗಳಲ್ಲಿನ ದೋಷ ಹಾಗೂ ತಾಂತ್ರಿಕ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಮುಂದುವರಿದಿವೆ. ಇದೀಗ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದ್ದು, ಮುಖ್ಯ ಆಯುಕ್ತರು ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದ್ದಾರೆ.
ಇ ಖಾತಾಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕೊನೆಗೂ ಗುಡ್‌ನ್ಯೂಸ್ ನೀಡಿದೆ. ಇ ಖಾತಾ ಪಡೆಯುವುದಕ್ಕೆ ಎಲ್ಲಾ ಪ್ರಮುಖ ದಾಖಲೆಗಳನ್ನು ನೀಡಿದರೂ, ಇ ಖಾತಾ ಅರ್ಜಿಗಳನ್ನು ಬೆಂಗಳೂರಿನ ಕೆಲವು ಕಡೆಗಳಲ್ಲಿ ತಿರಸ್ಕರಿಸಲಾಗುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಇ - ಖಾತಾ ಗೊಂದಲಗಳ ಬಗ್ಗೆ ಮಾತನಾಡಿದ್ದು, ಇ-ಖಾತಾಗಾಗಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗುವುದು ಹಾಗೂ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಾಪರ್ಟಿಗಳಲ್ಲಿ ಆಗುವ ಮೋಸವನ್ನು ತಪ್ಪಿಸುವುದು ಹಾಗೂ ಪ್ರಾಪರ್ಟಿಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡುವುದು ಸೇರಿದಂತೆ ಹಲವು ಕಾರಣಗಳಿಗೆ ಇ ಖಾತಾ ಪರಿಚಯ ಮಾಡಲಾಗಿದೆ. ಆಸ್ತಿಪತ್ರಗಳ ಡಿಜಿಟಲೀಕರಣವೇ ಇ ಖಾತಾ ಆಗಿದೆ. ಸ್ವತ್ತು ಹೊಂದಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಇ ಖಾತಾ ಪರಿಚಯ ಮಾಡಲಾಗಿದೆ. ಇ ಖಾತಾ ವಿಚಾರದಲ್ಲಿ ಯಾರಿಗೆ ಯಾವುದಾದರೂ ಸಮಸ್ಯೆಗಳು ಎದುರಾದರೂ ಅದನ್ನು ನಾವು ಪರಿಹರಿಸಲಿದ್ದೇವೆ ಎಂದು ತಿಳಿಸಿದರು.
ಇ-ಖಾತಾ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎನ್ನುವ ಬಗ್ಗೆ ಮಾತನಾಡಿರುವ ಮಹೇಶ್ವರ್ ರಾವ್ ಅವರು, ಇ ಖಾತಾ ಗೊಂದಲಗಳನ್ನು ಪರಿಹರಿಸುವ ಉದ್ದೇಶದಿಂದ ಆಡಿಟ್ ನಡೆಸಲಾಗುವುದು. ಇ - ಖಾತಾಗಳನ್ನು ನೀಡುವಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಬೊಮ್ಮನಹಳ್ಳಿ ವಲಯದ ಉಪ ಆಯುಕ್ತ ಡಿ.ಕೆ. ಬಾಬು ಮತ್ತು ಕಂದಾಯ ಅಧಿಕಾರಿ (ಬಿಟಿಎಂ ಲೇಔಟ್) ವರಲಕ್ಷ್ಮಿ ಅವರನ್ನು ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಅಮಾನತು ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದವು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಸಹ ತಲುಪಿತ್ತು. ಈ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
ತಾಂತ್ರಿಕ ಸಮಸ್ಯೆಗಳ ಪರಿಹಾರ
ಇನ್ನು ಬೆಂಗಳೂರಿನಲ್ಲಿ ಇಲ್ಲಿಯ ವರೆಗೆ ಅಂದಾಜು 7 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಇ ಖಾತಾ ನೀಡಲಾಗಿದೆ. ಇನ್ಮುಂದೆ ಬೆಂಗಳೂರಿನ ಎಲ್ಲಾ ಆಸ್ತಿಗಳಿಗೂ ಇ ಖಾತಾ ನೀಡಲು ಈಗ ಇರುವ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವುದಾಗಿಯೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications