ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಮತ್ತಷ್ಟು ಪ್ರಯಾಣಿಕ ಸ್ನೇಹಿ
ಬೆಂಗಳೂರು, ಜುಲೈ 12 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಮೊಬೈಲ್ ಅಪ್ಲಿಕೇಶನ್ ಅನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತಿದೆ. ಪ್ರಯಾಣಿಕರು ನೀಡಿದ ಸಲಹೆಯನ್ನು ಪರಿಗಣಿಸಿ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗುತ್ತಿದೆ.
ಇ-ಆಡಳಿತ ಇಲಾಖೆಗೆ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ. ಮೂರು ತಿಂಗಳಿನಲ್ಲಿ ಬಿಎಂಟಿಸಿಯ ಅಪ್ಲಿಕೇಶನ್ ಹೊಸ ರೂಪದಲ್ಲಿ ಪ್ರಯಾಣಿಕರಿಗೆ ಲಭ್ಯವಾಗುವ ನಿರೀಕ್ಷೆ ಇದೆ.
ಅಭಿವೃದ್ದಿಗೊಳ್ಳುತ್ತಿರುವ ಮೊಬೈಲ್ ಅಪ್ಲಿಕೇಶನ್ ನಲ್ಲಿ ಟ್ರಿಪ್ ಪ್ಲಾನರ್, ಹತ್ತಿರದ ಬಸ್ ನಿಲ್ದಾಣಗಳ ಮಾಹಿತಿ, ಪ್ರಯಾಣದರ, ಬಸ್ ಹೊರಡುವ ಮತ್ತು ತಲುಪುವ ಮಾರ್ಗದ ನಕ್ಷೆ ಮುಂತಾದ ಹೊಸ ಅಂಶಗಳನ್ನು ಸೇರಿಸಲಾಗುತ್ತದೆ.

ಸದ್ಯ ಲಭ್ಯವಿರುವ ಬಿಎಂಟಿಸಿಯ ಮೊಬೈಲ್ ಅಪ್ಲಿಕೇಶನ್ ನಲ್ಲಿರುವ ಎಲ್ಲಾ ಸೇವೆಗಳನ್ನು ಮುಂದುವರೆಸಲಾಗುತ್ತದೆ. ಊಬರ್ ಸೇರಿದಂತೆ ಕ್ಯಾಬ್ ಅಗ್ರಿಗೇಟರ್‌ಗಳಲ್ಲಿ ಸಿಗುವ ಮಾದರಿಯಲ್ಲಿ ಬಿಎಂಟಿಸಿಯ ಹೊಸ ಅಪ್ಲಿಕೇಶನ್ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಮೈ ಬಿಎಂಟಿಸಿ ವೆಬ್ ಸೈಟ್ ಅಥವ ಗೂಗಲ್ ಪ್ಲೇ ಸ್ಟೋರ್‌ನಿಂದ ಪ್ರಸ್ತುತ ಇರುವ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇ-ಆಡಳಿತ ಇಲಾಖೆ ಅನುಮತಿ ನೀಡಿದ ಬಳಿಕ ಅಪ್ಲಿಕೇಶನ್ ಅಭಿವೃದ್ದಿಗೊಳಿಸುವ ಕೆಲಸ ಆರಂಭವಾಗಲಿದೆ.
ಬಿಎಂಟಿಸಿಯ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಯಾಗಬೇಕು. ಕ್ಯಾಬ್‌ಗಳ ಅಪ್ಲಿಕೇಶನ್ ಮಾದರಿಯಲ್ಲಿ ಅದು ನವೀಕರಣವಾಗಬೇಕು ಎಂದು ಹಲವು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು.












Click it and Unblock the Notifications