BMTC : ಸೆಪ್ಟೆಂಬರ್ 25 ರಂದು ಹಲವು ಸೇವೆ ಒದಗಿಸುವ ನಮ್ಮ ಬಿಎಂಟಿಸಿ ಅಪ್ಲಿಕೇಷನ್ ಬಿಡುಗಡೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ರಜತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಸೆಪ್ಟೆಂಬರ್ 25 ರಂದು ತನ್ನ ಬಸ್ ಟ್ರ್ಯಾಕಿಂಗ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಿಹೆಚ್ ವರದಿ ಮಾಡಿದೆ.
ನಮ್ಮ ಬಿಎಂಟಿಸಿ (Namma BMTC) ಅಪ್ಲಿಕೇಶನ್ ಪ್ರಯಾಣಿಕರಿಗೆ ನೈಜ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡಲು, ಬಸ್ ಸೇವೆಗಳು ಮತ್ತು ಬಸ್‌ಗಳ ಅಂದಾಜು ಆಗಮನ ಮತ್ತು ನಿರ್ಗಮನ ಸಮಯದ ಬಗ್ಗೆ ಮಾಹಿತಿಯನ್ನು ಪಡೆಯಲು, ಅವರ ಪ್ರಯಾಣವನ್ನು ಯೋಜಿಸಲು ಮತ್ತು ದೈನಂದಿನ ಮತ್ತು ಮಾಸಿಕ ಬಸ್ ಪಾಸ್‌ಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಿದೆ. ಇದು SOS ಬಟನ್ ಅನ್ನು ಸಹ ಹೊಂದಿದೆ, ಇದನ್ನು ಪ್ರಯಾಣಿಕರು ತುರ್ತು ಸಮಯದಲ್ಲಿ ರಿಮೋಟ್ ಸಹಾಯವನ್ನು ಪಡೆಯಲು ಬಳಸಬಹುದಾಗಿದೆ.

ಅಪ್ಲಿಕೇಶನ್ ಅನ್ನು ಮಣಿಪಾಲ್ ಕ್ಯಾಡ್ಸ್ ಮತ್ತು ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು AMNEX ನ ಒಕ್ಕೂಟವು ಅಭಿವೃದ್ಧಿಪಡಿಸಿದೆ. ಮಣಿಪಾಲ್ ಪ್ರಮುಖ ಬಿಡ್‌ದಾರರಾಗಿದ್ದರೆ, AMNEX ತಂತ್ರಜ್ಞಾನ ಪಾಲುದಾರರಾಗಿದ್ದರು.
ಡಿಸೆಂಬರ್ 1, 2022 ರಂದು ಬಿಡುಗಡೆ
ಈ ಅಪ್ಲಿಕೇಶನ್ ಅನ್ನು ಡಿಸೆಂಬರ್ 1, 2022 ರಂದು ಬಿಡುಗಡೆ ಮಾಡಲಾಯಿತು ಮತ್ತು ವಾರಗಳ ನಂತರ ಕಡ್ಡಾಯ ಪ್ರಯೋಗಕ್ಕೆ ಒಳಗಾಯಿತು. ಬೀಟಾ ಆವೃತ್ತಿಯನ್ನು ಏಪ್ರಿಲ್ 18, 2023 ರಂದು ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ನಲ್ಲಿ ಪ್ರಾರಂಭಿಸಲಾಯಿತು. ಬಿಎಂಟಿಸಿ ತನ್ನ 6,688 ಬಸ್‌ಗಳಲ್ಲಿ ಸುಮಾರು 6,000 ಬಸ್‌ಗಳನ್ನು ಟ್ರ್ಯಾಕಿಂಗ್‌ಗಾಗಿ ಲಭ್ಯಗೊಳಿಸಿದೆ.
ಅಪ್ಲಿಕೇಶನ್‌ನ ಬೀಟಾ ಆವೃತ್ತಿಯು ಒಂದು ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆದಾಗ, ಪ್ರಯಾಣಿಕರು ಅಪ್ಲಿಕೇಶನ್‌ನಲ್ಲಿನ ತಪ್ಪುಗಳ ಬಗ್ಗೆ ದೂರಿದರು, ವಿಶೇಷವಾಗಿ ನೈಜ ಸಮಯದಲ್ಲಿ ಬಸ್‌ಗಳನ್ನು ಟ್ರ್ಯಾಕ್ ಮಾಡುವ ಬಗ್ಗೆ ಹಲವು ದೂರುಗಳು ಕೇಳಿ ಬಂದವು.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ ಮಾತನಾಡಿ, ಈ ಮೊದಲಿನ ಆಪ್‌ನಲ್ಲಿದ್ದ ದೋಷಗಳನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದ ಕಾರಣ ಆ್ಯಪ್‌ನ ಅಧಿಕೃತ ಬಿಡುಗಡೆ ವಿಳಂಬವಾಗಲು ಕಾರಣ ಎಂದು ಹೇಳಿದರು. ಬಿಎಂಟಿಸಿ ತನ್ನ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಅಪ್ಲಿಕೇಶನ್‌ನ ಮೂರನೇ ವ್ಯಕ್ತಿಯ ತಪಾಸಣೆಗಾಗಿ ಈಗ ಟೆಂಡರ್‌ಗಳನ್ನು ಕರೆದಿದೆ.
ಕಲಾಸಿಪಾಳ್ಯ ನಿಲ್ದಾಣಕ್ಕೆ ಸಚಿವರ ಭೇಟಿ
ಫೆಬ್ರವರಿಯಲ್ಲಿ ಆರಂಭವಾದ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಸೋಮವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದರು. ಬಸ್ ನಿಲ್ದಾಣದ ಕಾರ್ಯವೈಖರಿ ಬಗ್ಗೆ ದೂರುಗಳು ಬಂದರೆ ಪರಿಹರಿಸುವುದಾಗಿ ಭರವಸೆ ನೀಡಿದರು. ಕಲಾಸಿಪಾಳ್ಯ ಟರ್ಮಿನಲ್‌ನಲ್ಲಿ ಖಾಸಗಿ ಸ್ಟೇಜ್-ಕ್ಯಾರೇಜ್ ಬಸ್‌ಗಳ ಪಾರ್ಕಿಂಗ್ ಶುಲ್ಕದಲ್ಲಿ 50% ಕಡಿತಗೊಳಿಸುವುದಾಗಿ ಅವರು ಘೋಷಿಸಿದರು. ಬಿಎಂಟಿಸಿ ಪ್ರತಿ ಬಸ್‌ಗೆ ತಿಂಗಳಿಗೆ 1,500 ರೂ.ಗಳನ್ನು ವಿಧಿಸುತ್ತದೆ ಎಂದು ಅವರು ಹೇಳಿದರು. ಈ ಮೊದಲು ತಿಂಗಳಿಗೆ 3000 ರೂಪಾಯಿ ವಿಧಿಸಲಾಗುತ್ತಿತ್ತು. ಪ್ರತಿ ತಿಂಗಳು ಸುಮಾರು 250 ಖಾಸಗಿ ಬಸ್‌ಗಳು ಟರ್ಮಿನಲ್ ಅನ್ನು ಬಳಸುತ್ತವೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ ಸೇವೆಗಳಿಗೆ ಹೆಚ್ಚುವರಿ ದರವಿಲ್ಲ
ಬಿಎಂಟಿಸಿ ಇನ್ನು ಮುಂದೆ ತನ್ನ ರಾತ್ರಿ ಬಸ್ ಸೇವೆಗಳಿಗೆ ಹೆಚ್ಚುವರಿ ದರವನ್ನು ವಿಧಿಸುವುದಿಲ್ಲ ಎಂದು ಘೋಷಿಸಿದೆ. ಬಿಎಂಟಿಸಿ ಮೆಜೆಸ್ಟಿಕ್‌ನಿಂದ ಟ್ರಂಕ್ ಮಾರ್ಗಗಳಾದ ಯಲಹಂಕ, ಅತ್ತಿಬೆಲೆ, ಐಟಿಪಿಎಲ್, ಕೆಂಗೇರಿ ಮತ್ತು ಬನಶಂಕರಿಗೆ ರಾತ್ರಿ 11 ರಿಂದ ಬೆಳಿಗ್ಗೆ 5 ರ ನಡುವೆ 98 ಬಸ್ ಸೇವೆಗಳನ್ನು ನಡೆಸುತ್ತದೆ. ಪ್ರಯಾಣಿಕರಿಗೆ ಶೇ.50ರಷ್ಟು ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದ್ದು, ಇದನ್ನು ರದ್ದುಗೊಳಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಿಹೆಚ್ ವರದಿಯಲ್ಲಿ ತಿಳಿಸಿದೆ.












Click it and Unblock the Notifications