ಬಿಎಂಟಿಸಿ ಹೊಸ ಬಸ್ ಮಾರ್ಗ: ಬನಶಂಕರಿ-ಎಲೆಕ್ಟ್ರಾನಿಕ್ ಸಿಟಿ ವಯಾ ನೈಸ್ ರೋಡ್
ಬೆಂಗಳೂರು, ಮೇ 22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎರಡು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಪ್ರಯಾಣಿಕರ ಬೇಡಿಕೆಯಂತೆ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಪ್ರಾರಂಭಿಸಲಾಗುತ್ತಿದ್ದು, ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಎರಡು ಮಾರ್ಗದಲ್ಲಿ ಒಂದು ಮಾರ್ಗ ಅತ್ತಿಬೆಲೆ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ.
ಪತ್ರಿಕಾ ಪ್ರಕಟಣೆ ಮೂಲಕ ಬಿಎಂಟಿಸಿ ಹೊಸ ಬಸ್ ಮಾರ್ಗದ ಕುರಿತು ಮಾಹಿತಿ ನೀಡಿದೆ. ಹವಾನಿಯಂತ್ರಣ ರಹಿತ ಬಸ್ ಮಾರ್ಗ ಒಂದನ್ನು ಪರಿಚಯಿಸಿದ್ದು, ಈ ಬಸ್ ಬನಶಂಕರಿ ಟಿಟಿಎಂಸಿ-ಎಲೆಕ್ಟ್ರಾನಿಕ್ ಸಿಟಿಯನ್ನು ವಯಾ ನೈಸ್ ರೋಡ್ ಸಂಪರ್ಕಿಸುತ್ತದೆ. ಬುಧವಾರದಿಂದಲೇ ಈ ಮಾರ್ಗದಲ್ಲಿ ಬಸ್ ಸೇವೆಯನ್ನು ಆರಂಭಿಸಲಾಗಿದೆ.

ಬನಶಂಕರಿ-ಎಲೆಕ್ಟ್ರಾನಿಕ್ ಸಿಟಿ ಬಸ್: ನೈಸ್-2 ಮಾರ್ಗದ ಬಸ್ ಬನಶಂಕರಿ ಟಿಟಿಎಂಸಿ-ಎಲೆಕ್ಟ್ರಾನಿಕ್ ಸಿಟಿ ನಡುವೆ ವಯಾ ನೈಸ್ ರೋಡ್ ಸಂಚಾರವನ್ನು ನಡೆಸುತ್ತದೆ. ಪ್ರತಿದಿನ ಈ ಬಸ್ 32 ಟ್ರಿಪ್ ಸಂಚಾರವನ್ನು ನಡೆಸಲಿದೆ ಎಂದು ಬಿಎಂಟಿಸಿ ಹೇಳಿದೆ.
ಬನಶಂಕರಿ ಟಿಟಿಎಂಸಿಯಿಂದ ಹೊರಡುವ ಬಸ್ ಕೋಣನಕುಂಟೆ ಕ್ರಾಸ್, ತಲಘಟ್ಟಪುರ, ನೈಸ್ ರೋಡ್ ಮೂಲಕ ಎಲೆಕ್ಟ್ರಾನಿಕ್ ಸಿಟಿಯನ್ನು ತಲುಪುತ್ತದೆ. ಈ ಮಾರ್ಗದಲ್ಲಿ ಸಂಚಾರ ನಡೆಸಲು 4 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ.
ಬನಶಂಕರಿ ಟಿಟಿಎಂಸಿಯಿಂದ ಮೊದಲ ಬಸ್ ಬೆಳಗ್ಗೆ 7.30ಕ್ಕೆ ಮತ್ತು ಕೊನೆಯ ಬಸ್ ಸಂಜೆ 5.35ಕ್ಕೆ ಹೊರಡುತ್ತದೆ. ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣದಿಂದ ಮೊದಲ ಬಸ್ ಬೆಳಗ್ಗೆ 8.45ಕ್ಕೆ ಮತ್ತು ಕೊನೆಯ ಬಸ್ ಸಂಜೆ 6.50ಕ್ಕೆ ಹೊರಡಲಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಸ್‌ಗಳು ನಾನ್ ಎಸಿ ಬಸ್‌ಗಳಾಗಿವೆ.
ಅತ್ತಿಬೆಲೆ-ಬೆಂಗಳೂರು ಏರ್‌ಪೋರ್ಟ್: ಬಿಎಂಟಿಸಿ ಅತ್ತಿಬೆಲೆ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಹೊಸ ವಾಯು ವಜ್ರ ಬಸ್ ಸೇವೆಯನ್ನು ಆರಂಭಿಸಿದೆ. ಕೆಐಎ-8ಹೆಚ್ ಮಾರ್ಗ ಸಂಖ್ಯೆಯ ಬಸ್‌ಗಳು ಮೇ 19ರಿಂದ ಕಾರ್ಯಾಚರಣೆಯನ್ನು ಆರಂಭಿಸಿವೆ. ಈಗಾಗಲೇ ಅತ್ತಿಬೆಲೆಯಿಂದ ಏರ್‌ಪೋರ್ಟ್‌ಗೆ 16 ಬಸ್‌ಗಳು ಸಂಚಾರ ನಡೆಸುತ್ತಿದ್ದು, ಇದು 17ನೇ ಬಸ್ ಆಗಿದೆ.
ಈ ಹೊಸ ಬಸ್ ಬಿದರಗುಪ್ಪೆ, ಮಾದೇನಹಳ್ಳಿ, ಸರ್ಜಾಪುರ, ದೊಮ್ಮಸಂದ್ರ, ಕೊಡತಿ ಗೇಟ್, ಕೈಕೊಂಡರಹಳ್ಳಿ, ಬೆಳ್ಳಂದೂರು, ಕೆಆರ್ ಪುರ, ಬಾಬಸಾಬ್‌ಪಾಳ್ಯ, ವೀರಣ್ಣಪಾಳ್ಯ, ಹೆಬ್ಬಾಳ, ಕೊಗಿಲು ಕ್ರಾಸ್ ಮೂಲಕ ಸಂಚಾರವನ್ನು ನಡೆಸಲಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸಲು 6 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ.
ಅತ್ತಿಬೆಲೆ ಬಸ್ ನಿಲ್ದಾಣದಿಂದ ಏರ್‌ಪೋರ್ಟ್‌ಗೆ ಬಸ್‌ಗಳು ಬೆಳಗ್ಗೆ 5.30, 10.30 ಮತ್ತು ಸಂಜೆ 5.20 ಮತ್ತು 10.20ಕ್ಕೆ ಸಂಚಾರ ನಡೆಸಲಿವೆ. ಏರ್‌ಪೋರ್ಟ್‌ನಿಂದ ಅತ್ತಿಬೆಲೆಗೆ ಬಸ್‌ಗಳು 2 ಗಂಟೆ, 7 ಗಂಟೆ, ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 7 ಗಂಟೆಗೆ ಹೊರಡಲಿವೆ ಎಂದು ಬಿಎಂಟಿಸಿ ಹೇಳಿದೆ. ಪ್ರತಿನಿತ್ಯ ಬಿಎಂಟಿಸಿ ವಾಯುವಜ್ರ ಬಸ್‌ಗಳಲ್ಲಿ ಏರ್‌ಪೋರ್ಟ್‌ಗೆ 14,000 ಪ್ರಯಾಣಿಕರು ಸಂಚಾರವನ್ನು ನಡೆಸುತ್ತಾರೆ.












Click it and Unblock the Notifications