ಮೆಟ್ರೋದಿಂದ ಮನೆ ತಲುಪಲು ಇನ್ನು ಸುಲಭ: ಬೆಂಗಳೂರಿನಲ್ಲಿ BMTCಯಿಂದ ಹೊಸ ಪ್ರಯತ್ನ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರಿಗೆ ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯನ್ನು (Last Mile Connectivity) ಸುಧಾರಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹತ್ವದ ಯೋಜನೆ ರೂಪಿಸುತ್ತಿದೆ. ನಗರದ ಕಿರಿದಾದ ರಸ್ತೆಗಳು, ವಸತಿ ಪ್ರದೇಶಗಳು ಮತ್ತು ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಬಸ್‌ ಸೇವೆ ಒದಗಿಸುವ ಉದ್ದೇಶದಿಂದ ಮಿನಿ ಬಸ್ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರೊಂದಿಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಟ್ಯಾಪ್‌-ಟು-ಪೇ ಟಿಕೆಟ್‌ ವ್ಯವಸ್ಥೆ ಮತ್ತು ₹5 ಅಥವಾ ₹10 ಫ್ಲಾಟ್‌ ದರ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ.

200 ಮಿನಿ ಬಸ್‌ಗಳ ಖರೀದಿಗೆ ಸರ್ಕಾರದ ಅನುಮತಿ

ರಾಜ್ಯ ಸರ್ಕಾರವು BMTCಗೆ 200 ಮಿನಿ ಬಸ್‌ಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಈ ಪೈಕಿ ತಲಾ 100 ಬಸ್‌ಗಳನ್ನು 7 ಮೀಟರ್‌ ಮತ್ತು 9 ಮೀಟರ್‌ ಉದ್ದದ ಮಾದರಿಗಳಲ್ಲಿ ಖರೀದಿಸುವ ಸಾಧ್ಯತೆಯಿದೆ. ಸದ್ಯ ನಗರದಲ್ಲಿ ಸಂಚರಿಸುತ್ತಿರುವ ಉದ್ದದ ಬಸ್‌ಗಳು ಕೆಲವು ಕಿರಿದಾದ ರಸ್ತೆಗಳಲ್ಲಿ ಸಂಚರಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಕಡಿಮೆ ಉದ್ದದ ಮಿನಿ ಬಸ್‌ಗಳು ಇಂತಹ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ನೆರವಾಗಲಿವೆ.

BMTC Mini Bus Tap-to-pay flat fares and mini buses BMTC s plan to reach Bengaluru s narrow lanes

ಮೆಟ್ರೋ ಜಾಲ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣಗಳಿಂದ ಮನೆಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಒಳಭಾಗದ ಬಡಾವಣೆಗಳಿಗೆ ತೆರಳಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಯಾವ ಮೆಟ್ರೋ ನಿಲ್ದಾಣಗಳಿಗೆ ಮಿನಿ ಬಸ್‌ ಸೇವೆ?

ಯಾವ ಮೆಟ್ರೋ ನಿಲ್ದಾಣಗಳಿಂದ ಮಿನಿ ಬಸ್‌ ಸೇವೆ ಆರಂಭಿಸಬೇಕು ಮತ್ತು ಯಾವ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಬೇಕು ಎಂಬುದನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಅಧ್ಯಯನ ಮಾಡುತ್ತಿದೆ. ಅಧ್ಯಯನದ ಆಧಾರದ ಮೇಲೆ ಸೂಕ್ತ ಮಾರ್ಗಗಳನ್ನು ಶಿಫಾರಸು ಮಾಡಲಾಗುತ್ತದೆ.

DULT ನೀಡುವ ಶಿಫಾರಸುಗಳ ಆಧಾರದ ಮೇಲೆ ಮಿನಿ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು BMTC ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ ತಿಳಿಸಿದ್ದಾರೆ. 9 ಮೀಟರ್‌ ಹಾಗೂ 12 ಮೀಟರ್‌ ಉದ್ದದ ಬಸ್‌ಗಳನ್ನು ಕಿರಿದಾದ ರಸ್ತೆಗಳಲ್ಲಿ ಓಡಿಸುವುದು ಕಷ್ಟಕರವಾಗಿರುವುದರಿಂದ, ಕಡಿಮೆ ಉದ್ದದ ಬಸ್‌ಗಳು ಈ ಸಮಸ್ಯೆಗೆ ಪರಿಹಾರವಾಗಬಹುದು ಎಂಬ ನಿರೀಕ್ಷೆಯಿದೆ.

₹5 ಅಥವಾ ₹10 ಫ್ಲಾಟ್‌ ದರ ಜಾರಿಗೆ ಚಿಂತನೆ

ಮಿನಿ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಸರಳ ಮತ್ತು ಕೈಗೆಟುಕುವ ದರ ನಿಗದಿಪಡಿಸುವ ಬಗ್ಗೆಯೂ BMTC ಚಿಂತನೆ ನಡೆಸುತ್ತಿದೆ. ಪ್ರಯಾಣದ ದೂರವನ್ನು ಆಧರಿಸಿ ವಿವಿಧ ದರಗಳನ್ನು ವಿಧಿಸುವ ಬದಲಿಗೆ, ₹5 ಅಥವಾ ₹10ರ ಫ್ಲಾಟ್‌ ದರ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯಿದೆ.

ಆದರೆ, ದರ ಎಷ್ಟು ಇರಬೇಕು ಮತ್ತು ಈ ವ್ಯವಸ್ಥೆಯನ್ನು ಯಾವ ಮಾರ್ಗಗಳಲ್ಲಿ ಜಾರಿಗೆ ತರಬೇಕು ಎಂಬುದರ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಯೋಜನೆಯ ಕಾರ್ಯಸಾಧ್ಯತೆ ಹಾಗೂ ತಾಂತ್ರಿಕ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಯುತ್ತಿದೆ.‌

BMTC Mini Bus: ಟ್ಯಾಪ್‌-ಟು-ಪೇ ಮೂಲಕ ಟಿಕೆಟ್‌ ಖರೀದಿ

ಪ್ರಯಾಣಿಕರು ಟಿಕೆಟ್‌ ಪಡೆಯುವ ವಿಧಾನವನ್ನು ಸರಳಗೊಳಿಸಲು ಟ್ಯಾಪ್‌-ಟು-ಪೇ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆಯೂ BMTC ಪರಿಶೀಲಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಸಂಪರ್ಕರಹಿತ ಕಾರ್ಡ್‌ಗಳು, ಮೊಬೈಲ್‌ ಫೋನ್‌ಗಳು ಮತ್ತು QR ಕೋಡ್‌ಗಳನ್ನು ಬಳಸಿಕೊಂಡು ಪ್ರಯಾಣದ ಹಣ ಪಾವತಿಸಲು ಅವಕಾಶ ಕಲ್ಪಿಸಬಹುದು.

ಆರಂಭಿಕ ಹಂತದಲ್ಲಿ ಮಿನಿ ಬಸ್‌ಗಳಲ್ಲಿ ಚಾಲಕ ಮತ್ತು ನಿರ್ವಾಹಕರು ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಟಿಕೆಟ್‌ ಸಂಗ್ರಹ ವ್ಯವಸ್ಥೆ ಸ್ವಯಂಚಾಲಿತಗೊಂಡರೆ ಮುಂದಿನ ದಿನಗಳಲ್ಲಿ ನಿರ್ವಾಹಕರಿಲ್ಲದೆ ಬಸ್‌ಗಳನ್ನು ಓಡಿಸುವ ಸಾಧ್ಯತೆಯೂ ಇದೆ.

ಇದಕ್ಕಾಗಿ ಸ್ವಯಂಚಾಲಿತ ಟಿಕೆಟ್‌ ಸಂಗ್ರಹ ಸಾಧನಗಳನ್ನು ಅಳವಡಿಸುವ ಮಾರಾಟಗಾರರು ಹಾಗೂ ಪ್ರವೇಶ ಮತ್ತು ನಿರ್ಗಮನಕ್ಕೆ ಒಂದೇ ಬಾಗಿಲು ಹೊಂದಿರುವ ಬಸ್‌ಗಳನ್ನು ಪೂರೈಸುವ ತಯಾರಕರ ಅಗತ್ಯವಿದೆ. ವಿವಿಧ ಕಂಪನಿಗಳ 7 ಮೀಟರ್‌ ಉದ್ದದ ಬಸ್‌ ಮಾದರಿಗಳನ್ನು BMTC ಈಗಾಗಲೇ ಪರಿಶೀಲಿಸುತ್ತಿದೆ.

ಇಂತಹ ವ್ಯವಸ್ಥೆಯನ್ನು ಬೇರೆ ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳು ಪ್ರಯತ್ನಿಸದ ಹಿನ್ನೆಲೆಯಲ್ಲಿ, ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ತಾಂತ್ರಿಕ ಮತ್ತು ಕಾರ್ಯಾಚರಣೆಯ ಸವಾಲುಗಳನ್ನು BMTC ಪರಿಶೀಲಿಸುತ್ತಿದೆ ಎಂದು ರಘುನಂದನ್ ಮೂರ್ತಿ ತಿಳಿಸಿದ್ದಾರೆ.

₹304 ಕೋಟಿ ವೆಚ್ಚದಲ್ಲಿ 800 ಡೀಸೆಲ್‌ ಬಸ್‌ಗಳ ಖರೀದಿ

ಇದೇ ವೇಳೆ, ರಾಜ್ಯ ಸಚಿವ ಸಂಪುಟವು ಸುಮಾರು ₹304 ಕೋಟಿ ಅಂದಾಜು ವೆಚ್ಚದಲ್ಲಿ 800 ಸಂಪೂರ್ಣ ನಿರ್ಮಿತ BS-VI ಡೀಸೆಲ್‌ ಬಸ್‌ಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಈ ಪೈಕಿ 200 ಬಸ್‌ಗಳನ್ನು BMTCಗೆ ಒದಗಿಸಲು ಉದ್ದೇಶಿಸಲಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 40 ಲಕ್ಷ ಜನರು BMTC ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಆದರೂ, ಕೆಲವು ಬಡಾವಣೆಗಳು ಮತ್ತು ವಸತಿ ಪ್ರದೇಶಗಳಿಗೆ ಈಗಿರುವ ಬಸ್‌ ಸೇವೆ ಸಮರ್ಪಕವಾಗಿ ತಲುಪುತ್ತಿಲ್ಲ. ಮಿನಿ ಬಸ್‌ಗಳ ಪರಿಚಯದಿಂದ ಇಂತಹ ಪ್ರದೇಶಗಳಿಗೆ ಸಂಪರ್ಕ ಸುಧಾರಿಸುವುದರ ಜೊತೆಗೆ ಮೆಟ್ರೋ ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+