ನೇಮಕಾತಿ ವಿಚಾರದಲ್ಲಿ BMTC "ಮಹಾ"ಯಡವಟ್ಟು, ಏನದು?-ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್, 07: ರಾಜ್ಯ ರಾಜಧಾನಿ ಬೆಂಗಳೂರಿನ ಜೀವನಾಡಿಯಾದ ಬಿಎಂಟಿಸಿಯಲ್ಲಿ ಆಗಾಗಾ ಯಡವಟ್ಟುಗಳು ಆಗುತ್ತಿರುತ್ತವೆ. ಹಾಗೆಯೇ ಇದೀಗ ಇಲಾಖೆಯ ಒಂದು ಪೋಸ್ಟ್‌ಗೆ ಇಬ್ಬರನ್ನು ನೇಮಕ ಮಾಡಿದ್ದು, ಈ ವಿಚಾರ ಇದೀಗ ಅನುಮಾನಗಳಿಗೆ ಕಾರಣ ಆಗಿದೆ.
ಬಿಎಂಟಿಸಿಯ ಘಟಕ ವ್ಯವಸ್ಥಾಪಕರ ವರ್ಗಾವಣೆಯಲ್ಲಿ ಈ ಎಡವಟ್ಟಾಗಿದೆ. ಘಟಕ 27ರ ವ್ಯವಸ್ಥಾಪಕ ನಿರ್ದೇಶಕರ ಜಾಗಕ್ಕೆ ಬಿಎಂಟಿಸಿ ನಿಗಮ ಇಬ್ಬರು ಅಧಿಕಾರಿಗಳನ್ನು ಒಂದೇ ಪೋಸ್ಟ್‌ಗೆ ವರ್ಗಾವಣೆ ಮಾಡಿದೆ. ಈ ಹಿಂದೆ ಘಟಕ 52ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೌಧರಿ, ಮತ್ತು ಘಟಕ 32ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಅವರನ್ನು ಒಂದೇ ಘಟಕದ ವ್ಯವಸ್ಥಾಪಕರ ಜಾಗಕ್ಕೆ ವರ್ಗಾವಣೆ ಮಾಡಿ ಎಡವಟ್ಟು ಮಾಡಿದೆ ಅಂತಾ ಪಬ್ಲಿಕ್ ಟಿವಿ ವರದಿ ಮಾಡಿದೆ.

ಬುಧವಾರ (ಡಿಸೆಂಬರ್ 06) ಖುದ್ದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಹಿ ಮಾಡಿ ಹೊರಡಿಸಿರುವ ಆದೇಶದಲ್ಲಿ ಈ ಎಡವಟ್ಟು ಬಹಿರಂಗ ಆಗಿದ್ದು, ಇದು ಸಾಕಷ್ಟು ಅನುಮಾನಗಳಿಗೆ ಕಾರಣ ಆಗಿದೆ. ಈ ಎಡವಟ್ಟು ಬಹಿರಂಗ ಆಗುತ್ತಿದ್ದಂತೆ ಎಚ್ಚೆತ್ತ ಬಿಎಂಟಿಸಿ ಒಬ್ಬ ಅಧಿಕಾರಿಯನ್ನು ಕೂಡಲೇ ಮತ್ತೊಂದು ಘಟಕಕ್ಕೆ ವರ್ಗಾವಣೆ ಮಾಡಿದೆ.
ಘಟಕ 27ಕ್ಕೆ ವರ್ಗಾವಣೆಯಾಗಿದ್ದ 52ರ ಘಟಕದ ಅಧಿಕಾರಿ ಚೌಧರಿ ಅವರನ್ನು 19ರ ಘಟಕಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮತ್ತೊಬ್ಬ ಅಧಿಕಾರಿ ರಮೇಶ್ ಅವರನ್ನ ಗೊಂದಲವಾಗಿದ್ದ ಘಟಕ 27ರ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆಸುವ ಮೂಲಕ ಆದೇಶ ಹೊರಡಿಸಿದೆ. ಬಿಎಂಟಿಸಿ ವರ್ಗಾವಣೆ ಎಡವಟ್ಟಿನ ಬಗ್ಗೆ ನಿಗಮ ಮರು ಆದೇಶ ಹೊರಡಿಸುವ ಮೂಲಕ ತೇಪೆ ಹಚ್ಚುವ ಕೆಲಸವನ್ನು ಮಾಡಿದೆ.
ಈ ಮಾರ್ಗಗಳಲ್ಲಿ BMTC ವಜ್ರ ಬಸ್‌ಗಳ ಸಂಚಾರ-ಮಾಹಿತಿ
ಬೆಂಗಳೂರಿನ ಜನರ ಜೀವನಾಡಿಯಾದ ಬಿಎಂಟಿಸಿ ಬಸ್ ಸೇವೆಯನ್ನು ಈಗಾಗಲೇ ಹಲವೆಡೆ ಕಲ್ಪಿಸಲಾಗಿದೆ. ಆದರೂ ಬೆಂಗಳೂರು ಇನ್ನು ವಿಸ್ತಾರವಾಗುತ್ತಲೇ ಇದ್ದು, ಈ ಬಸ್‌ಗಳ ಅವಶ್ಯಕತೆ ತುಂಬಾ ಇದೆ. ಹಾಗೆಯೇ ಇದೀಗ ಬಿಎಂಟಿಸಿಯಿಂದ ಅತ್ತಿಬೆಲೆ-ಹೊಸಕೋಟೆ ನಡುವೆ ವಜ್ರ ಹವಾನಿಯಂತ್ರಿತ ಬಸ್‌ಗಳ ಸಂಚಾರ ಭಾನುವಾರ (ಡಿಸೆಂಬರ್ 04) ಆರಂಭವಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಸ್ ಸಂಚಾರಕ್ಕೆ ಅತ್ತಿಬೆಲೆ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳ ಸಂಚಾರ ಹೆಚ್ಚಳ ಮಾಡಲಾಗುವುದು. ಅತ್ತಿಬೆಲೆಗೆ ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ ಆಧುನಿಕ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.
ಈಗಾಗಲೇ ಈ ಮಾರ್ಗದಲ್ಲಿ 37 ಸಾಮಾನ್ಯ ಬಸ್‌ಗಳು 300 ಟ್ರಿಪ್‌ಗಳು, ಇದರ ಜೊತೆಗೆ ಇನ್ಮುಂದೆ 10 ಬಸ್‌ಗಳು ಪ್ರತಿದಿನ 57 ಟ್ರಿಪ್ ಸಂಚಾರ ಮಾಡಲಿವೆ.
ವೋಲ್ವೋ ಬಸ್‌ಗಳು ಇಂಡ್ಲಬೆಲೆ, ಬಿದರಗುಪ್ಪೆ, ಮೇಡಹಳ್ಳಿ, ಬಿಲ್ಲಾಪುರ, ಸರ್ಜಾಪುರ, ಸೋಮಾಪುರ, ಯೆಮರೆ, ದೊಮ್ಮಸಂದ್ರ, ಹೆಗ್ಗೊಂಡಹಳ್ಳಿ, ಗುಂಜೂರು, ವರ್ತೂರು, ವರ್ತೂರು ಕೋಡಿ, ವೈಟ್‌ಫೀಲ್ಡ್ ಅಂಚೆ ಕಚೇರಿ, ಹೋಪ್ ಫಾರ್ಮ್, ಕಾಡುಗೋಡಿ, ಬೆಳತ್ತೂರು, ಸೀಗೇಹಳ್ಳಿ, ಕಾಜಿ ಸೊನ್ನೆನಹಾಳ್, ಹೊಸಕೋಟೆ ಕೋಡಿ ಮತ್ತು ಹೊಸಕೋಟೆ ಪ್ರೌಢಶಾಲೆ ಮಾರ್ಗವಾಗಿ ಈ ಬಸ್‌ಗಳು ಸಂಚಾರ ಮಾಡಲಿವೆ.
ಎರಡೂ ದಿಕ್ಕಿನಲ್ಲಿ ಮೊದಲ ಬಸ್ ಬೆಳಗ್ಗೆ 6 ಗಂಟೆಗೆ ಮತ್ತು ಕೊನೆ ಬಸ್ ರಾತ್ರಿ 9:20 ಕ್ಕೆ ಪ್ರಾರಂಭ ಆಗುತ್ತದೆ. ಅತೀ ಅಧಿಕ ಬೇಡಿಕೆಯಿರುವ ಸಮಯದಲ್ಲಿ 10-25 ನಿಮಿಷಗಳಲ್ಲಿ ಬಸ್ ಲಭ್ಯ ಆಗಲಿದೆ. ಉಳಿದ ಸಮಯದಲ್ಲಿ 45-90 ನಿಮಿಷಗಳಿಗೊಂದು ಬಸ್ ಸಿಗಲಿವೆ. ಹಿಂದೆ ಈ ಮಾರ್ಗದಲ್ಲಿ ಸಾಮಾನ್ಯ (ಬೆಂಗಳೂರು ಸರಿಗೆ) ಬಸ್‌ಗಳನ್ನು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದು, 37 ಹವಾನಿಯಂತ್ರಿತವಲ್ಲದ ಬಸ್‌ಗಳು ದಿನಕ್ಕೆ 300 ಟ್ರಿಪ್‌ಗಳನ್ನು ಮಾಡುತ್ತಿದ್ದವು ಎನ್ನಲಾಗಿದೆ.












Click it and Unblock the Notifications