BMTC: ಬೆಂಗಳೂರಿನಲ್ಲಿ ಐಪಿಎಲ್ 2025 ಪಂದ್ಯಗಳು, ಬಿಎಂಟಿಸಿ ವಿಶೇಷ ಬಸ್ ಸೇವೆ
ಬೆಂಗಳೂರು, ಮಾರ್ಚ್ 23: ಐಪಿಎಲ್ 2025ರ ಪಂದ್ಯಾವಳಿಗಳು ಆರಂಭವಾಗಿದೆ. ಶನಿವಾರ ಕೋಲ್ಕತಾದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡದ ಆಟವನ್ನು ನೋಡಲು ತವರಿನ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯುವಾಗ ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.
ಮೊದಲ ಪಂದ್ಯದಲ್ಲಿಯೇ ಆರ್‌ಸಿಬಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಿದೆ. ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 175 ರನ್‌ಗಳ ಗುರಿಯನ್ನು ಕೇವಲ 16.2 ಓವರ್‌ಗಳಲ್ಲಿ ಸಾಧಿಸಿ, ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಆರ್‌ಸಿಬಿ ತಂಡ ತವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಇಲ್ಲಿಯೂ ಸಹ ಪಂದ್ಯಗಳನ್ನು ಆಡಲಿದೆ.

ವಿಶೇಷ ಬಿಎಂಟಿಸಿ ಬಸ್‌ಗಳು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2, 10, 18, 24 ಮತ್ತು ಮೇ 3, 13 ಹಾಗೂ 17ರಂದು ಐಪಿಎಲ್ ಪಂದ್ಯಾವಳಿಗಳು ನಡೆಯಲಿದೆ. ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ಇರುವಾಗ ಸ್ಟೇಡಿಯಂನಿಂದ ವಿವಿಧ ಪ್ರದೇಶಗಳಿಗೆ ತೆರಳಲು ಬಿಎಂಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.
ಪಂದ್ಯಾವಳಿಗಳು ನಡೆಯುವ ದಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಾಡುಗೋಡಿ, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಆರ್. ಕೆ. ಹೆಗಡೆ ನಗರ, ನಾಗವಾರ, ಮಾಗಡಿ ರಸ್ತೆ, ಜನಪ್ರಿಯ ಟೌನ್‌ಶಿಪ್ ಮುಂತಾದ ಕಡೆಗೆ ವಿಶೇಷ ಬಸ್‌ಗಳು ಸಂಚಾರವನ್ನು ನಡೆಸಲಿವೆ.
ಅಲ್ಲದೇ ಎಂ. ಚಿನ್ನಸ್ವಾಮಿ ಸ್ಟೇಡಿಯಂನಿಂದ ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ಹೊಸಕೋಟೆ, ಬನಶಂಕರಿ ಬಸ್ ನಿಲ್ದಾಣಗಳಿಗೆ ಸಹ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳ ಹೃದಯ ಗೆದ್ದಿದೆ. 175 ರನ್ಗಳ ಗುರಿ ಬೆನ್ನತ್ತಿದ್ದ ಆರ್ಸಿಬಿ ಪರ ಫಿಲ್ ಸಾಲ್ಟ್ (56) ಹಾಗೂ ವಿರಾಟ್ ಕೊಹ್ಲಿ (59) ಸ್ಪೋಟಕ ಅರ್ಧಶತಕ ಅಭಿಮಾನಿಗಳನ್ನು ರಂಜಿಸಿತ್ತು.
ಆರ್ಸಿಬಿ ತಂಡ ಕೇವಲ 16.2 ಓವರ್ಗಳಲ್ಲಿ 177 ರನ್ ಬಾರಿಸಿ 7 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನ ಬಳಿಕ ನಾಯಕ ರಜತ್ ಪಾಟಿದಾರ್ ತಂಡದ ಮೇಲೆ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಆದ್ದರಿಂದ ಬೆಂಗಳೂರಿನಲ್ಲಿ ನಡೆಯುವ ಪಂದ್ಯಕ್ಕೆ ಅಭಿಮಾನಿಗಳು ಕಿಕ್ಕಿರಿದು ಸೇರಲಿದ್ದಾರೆ.
ಪ್ರತಿ ಬಾರಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾವಿರಾರು ಅಭಿಮಾನಿಗಳು ಸೇರುತ್ತಾರೆ. ಅಭಿಮಾನಿಗಳು ಪಂದ್ಯದ ನೋಡಿದ ಬಳಿಕ ವಾಪಸ್ ಆಗಲು ಅನುಕೂಲವಾಗುವಂತೆ ಬಿಎಂಟಿಸಿ, ನಮ್ಮ ಮೆಟ್ರೋ ವಿಶೇಷ ವ್ಯವಸ್ಥೆಗಳನ್ನು ಮಾಡುತ್ತದೆ.
ತವರು ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟವನ್ನು ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಟಿಕೆಟ್‌ಗಾಗಿ ಈಗಾಗಲೇ ಅಭಿಮಾನಿಗಳು ಪ್ರಯತ್ನವನ್ನು ನಡೆಸಿದ್ದಾರೆ. ಅದರಲ್ಲೂ ಬೆಂಗಳೂರು ಮತ್ತು ಚೆನ್ನೈ ನಡುವಿನ ಪಂದ್ಯವಿದ್ದರೆ ಅಭಿಮಾನಿಗಳ ಸಂಭ್ರಮ ಇನ್ನಷ್ಟು ಜೋರಾಗುತ್ತದೆ.












Click it and Unblock the Notifications